ಬಿಜೆಪಿ ಶುದ್ಧೀಕರಣ ಆಗಬೇಕು ಎಂದು ಪಕ್ಷದಿಂದ ಹೊರಗೆ ಬಂದೆ. ಆದರೆ, ಇನ್ನೂ ಶುದ್ಧೀಕರಣವಾಗಿಲ್ಲ. ನಾನು ಯಾವ ಪಕ್ಷಕ್ಕೂ ಹೋಗಲ್ಲ. ಹೊಸ ಪಕ್ಷ ಕಟ್ಟಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಬಳ್ಳಾರಿ (ಏ.24): ಬಿಜೆಪಿ ಶುದ್ಧೀಕರಣ ಆಗಬೇಕು ಎಂದು ಪಕ್ಷದಿಂದ ಹೊರಗೆ ಬಂದೆ. ಆದರೆ, ಇನ್ನೂ ಶುದ್ಧೀಕರಣವಾಗಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು. ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಬೆಲೆ ಇದೆಯೇ ಹೊರತು ಹಿಂದುತ್ವಕ್ಕೆ ಬೆಲೆ ಇಲ್ಲದಂತಾಗಿದೆ. ಈ ಕಾರಣಕ್ಕಾಗಿಯೇ ನಾನು ಪಕ್ಷದಿಂದ ಹೊರ ಬಂದೆ. ಹಾಗಂತ ನಾನು ಯಾವ ಪಕ್ಷಕ್ಕೂ ಹೋಗಲ್ಲ. ಹೊಸ ಪಕ್ಷ ಕಟ್ಟಲ್ಲ.

ಶುದ್ಧೀಕರಣ ಬಳಿಕ ಬಿಜೆಪಿಗೆ ವಾಪಸಾಗುತ್ತೇನೆ. ಬಿಜೆಪಿ ಶುದ್ಧೀಕರಣವಾಗುವ ವಿಶ್ವಾಸ ನನಗಿದೆ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈಶ್ವರಪ್ಪ ಸ್ಪಷ್ಟಪಡಿಸಿದರು. ಇನ್ನು ಮೂರ್ನಾಲ್ಕು ತಿಂಗಳಲ್ಲಿ ರಾಜ್ಯ ರಾಜಕಾರಣದಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಸಿಎಂ, ಡಿಸಿಎಂ ಅವರ ಎರಡು ಗುಂಪುಗಳಿವೆ. ಇದರಿಂದ ಕಾಂಗ್ರೆಸ್ ಒಡೆದ ಮನೆಯಂತಾಗಿದೆ. ಎರಡು ಗುಂಪುಗಳು ಪ್ರತ್ಯೇಕ ಸಭೆ ಮಾಡುತ್ತಿವೆ.

ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಅನೇಕ ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಪಕ್ಷದಲ್ಲಿ ಅತೃಪ್ತಿ ಹೊಗೆಯಾಡುತ್ತಿದ್ದು ಶೀಘ್ರವೇ ಸ್ಫೋಟಗೊಳ್ಳಲಿದೆ. ಪಂಚ ರಾಜ್ಯ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಸರ್ಕಾರದಲ್ಲಿ ಬದಲಾವಣೆಯಾಗಲಿದೆ ಎಂದರು. ದಾವಣಗೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸಿಗರೇ ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದ್ದಾರೆ. ಪಕ್ಷದ ಮುಸ್ಲಿಂ ನಾಯಕರನ್ನು ಕಿತ್ತು ಹಾಕಲಾಗಿದೆ.

ಕಾಂಗ್ರೆಸ್‌ನ ಸ್ಥಿತಿ ಅಷ್ಟು ಉತ್ತಮವಾಗಿಲ್ಲ

ಉಚ್ಚಾಟಿತರನ್ನು ವಾಪಸ್ ಪಡೆಯಿರಿ ಎಂದು ಮುಸ್ಲಿಂ ಗುರುಗಳು ತಾಕೀತು ಮಾಡಿದ್ದಾರೆ. ಈ ಎಲ್ಲ ಬೆಳವಣಿಗೆ ಗಮನಿಸಿದರೆ ಕಾಂಗ್ರೆಸ್‌ನ ಸ್ಥಿತಿ ಅಷ್ಟು ಉತ್ತಮವಾಗಿಲ್ಲ. ಪಕ್ಷದಲ್ಲಿನ ಗುಂಪುಗಾರಿಕೆಯಿಂದ ಸರ್ಕಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದರು. ಪ್ರಧಾನಿ ವಿರುದ್ಧ ಹಗುರವಾಗಿ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚಿಸಬೇಕು. ಮೋದಿ ಮಾತ್ರವಲ್ಲದೇ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.