Asianet Suvarna News Asianet Suvarna News

ಪುಷ್ಕರಣಿಯ ಪುನಶ್ಚೇತನಕ್ಕೆ ಕಾರಣವಾಯ್ತು ಬಿಗ್-3, ಕೋಟಿತೀರ್ಥ ಸಮಸ್ಯೆಗೆ ಸಿಕ್ತು ಶಾಶ್ವತ ಪರಿಹಾರ

* ಕೋಟಿತೀರ್ಥ ಪುಷ್ಕರಣಿಯ ಪುನಶ್ಚೇತನಕ್ಕೆ ಕಾರಣವಾಯ್ತು ಬಿಗ್-3, 
* ಇಟ್ಸ್ ಪಾಸಿಬಲ್ ಎಂದು ತೋರಿಸಿಕೊಟ್ಟದ್ದು ಏಷ್ಯಾನೆಟ್ ಸುವರ್ಣ ನ್ಯೂಸ್
* ಕೋಟಿತೀರ್ಥ ಅಭಿವೃದ್ಧಿ ಯೋಜನೆಯ ಶ್ರೇಯ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಎಂದ ಸಚಿವ ಈಶ್ವರಪ್ಪ

ks-eshwarappa inaugurates-pond development project In Kotitheertha rbj
Author
Bengaluru, First Published Mar 20, 2022, 10:47 PM IST | Last Updated Mar 20, 2022, 10:47 PM IST

ವರದಿ: ಭರತ್‌ರಾಜ್ ಕಲ್ಲಡ್ಕ


ಗೋಕರ್ಣ, (ಮಾ.20): ಪುಣ್ಯ ನದಿ, ಕೆರೆಗಳಲ್ಲಿ ಸ್ನಾನ ಮಾಡಿದ್ರೆ ಪಾಪ ಕರ್ಮಗಳು ನಾಶವಾಗಿ ಪುಣ್ಯ ದೊರಕುತ್ತದೆ ಅನ್ನೋದು ನಂಬಿಕೆ. ಪುಣ್ಯ ಪುಷ್ಕರಣಿ ಅನ್ನೋ ಇತಿಹಾಸ ಹೊಂದಿರುವ ಉತ್ತರಕನ್ನಡ ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ ಕ್ಷೇತ್ರದಲ್ಲಿರುವ ಕೋಟಿತೀರ್ಥ ಮಾತ್ರ ಇದಕ್ಕೆ ತದ್ವಿರುದ್ಧವಾಗಿತ್ತು.  ಇದಕ್ಕೆ ಕಾರಣ ಪುಷ್ಕರಣಿ ತುಂಬೆಲ್ಲಾ ರಾಶಿ ರಾಶಿಯಾಗಿ ಬೆಳೆದಿದ್ದ ಹಸಿರು ಪಾಚಿ, ಅನ್ನ, ಪಿಂಡ, ಬಾಳೆ ಎಲೆ, ಪ್ಲಾಸ್ಟಿಕ್, ಕಸಕಡ್ಡಿಗಳು ಹಾಗೂ ಇತರ ಕಸಗಳು ಕೂಡಾ ಈ ಪುಷ್ಕರಣಿಯ ಒಡಲು ಸೇರಿ ಮಲೀನವಾಗುತ್ತಿತ್ತು. ಶಾಸ್ತ್ರಗಳ ಪ್ರಕಾರ ಗೋಕರ್ಣದಲ್ಲಿ ಕ್ರಿಯಾಕರ್ಮಾಧಿಗಳನ್ನು ಮುಗಿಸಿ ಕೋಟಿತೀರ್ಥದಲ್ಲಿ ಸ್ನಾನ ಮಾಡಿದರೆ ಪಾಪ ಕರ್ಮಗಳು ಕಳೆದು ಹೋಗುತ್ತೆ ಎಂಬ ನಂಬಿಕೆ ಇದೆ.

ಇನ್ನು ಹಿಂದಿನ ಕಾಲದಲ್ಲಿ ಗೋಕರ್ಣ ಮಹಾಬಲೇಶ್ವರ ಕ್ಷೇತ್ರಕ್ಕೆ ಬಂದವರು ಸಮುದ್ರ ಸ್ನಾನ ಮಾಡಿದ ಬಳಿಕ ಕೋಟಿತೀರ್ಥದಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡುವ ವಾಡಿಕೆ ಇದೆ. ಇಲ್ಲಿ ಐದು ಬಾರಿ ಮುಳುಗಿ ಎದ್ದು  ಸ್ನಾನ ಮಾಡಿದರೆ, ಜೀವನದಲ್ಲಿ ಮಾಡಿದ ಪಾಪಕರ್ಮಗಳು ಇಲ್ಲಿ ತೊಳೆದುಹೋಗುತ್ತದೆ ಎಂಬ ಪ್ರತೀತಿ ಇದೆ. ಆದರೆ, ಕೋಟಿತೀರ್ಥದಲ್ಲಿ ಸ್ನಾನ ಮಾಡಿದಲ್ಲಿ ರೋಗಗಳನ್ನು ಅಂಟಿಸಿಕೊಳ್ಳಬೇಕಾದ ಆತಂಕ ಭಕ್ತರದ್ದಾಗಿತ್ತು. ಅಪರಕಾರ್ಯ, ಪಿಂಡ ಪ್ರಧಾನದ ಬಳಿಕ ತ್ಯಾಜ್ಯ ಇಲ್ಲೇ ಬಿಸಾಕೋದ್ರಿಂದ ನೀರು ಕಲುಷಿತಗೊಳ್ಳುತ್ತಿತ್ತು. 

ಗೋಕರ್ಣ ಕೋಟಿತೀರ್ಥ ಪುಷ್ಕರಣಿಗೆ ಕೊನೆಗೂ ಸಿಕ್ತು ಸ್ವಚ್ಛತಾ ಭಾಗ್ಯ; ಇದು ಬಿಗ್ 3 ಇಂಪ್ಯಾಕ್ಟ್!

ಈ ನಡುವೆ ಕೋಟಿತೀರ್ಥದ ಸಂಪೂರ್ಣ ನಿರ್ವಹಣೆ ಮಾಡಬೇಕಾದ ಗ್ರಾಮ ಪಂಚಾಯತ್ ನಿರ್ಲಕ್ಷ್ಯ ವಹಿಸಿದ್ದರಿಂದ ಇಲ್ಲಿನ ಪಟ್ಟೆವಿನಾಯಕ ಗೆಳೆಯರ ಬಳಗದವರು ಪ್ರತೀ ಮೂರು ತಿಂಗಳಿಗೊಮ್ಮೆ ತಮ್ಮ ಕೈಲಾದಷ್ಟು ಕೋಟಿತೀರ್ಥದ ಸ್ವಚ್ಚತೆ ನಡೆಸಲು ಶ್ರಮಿಸುತ್ತಿದ್ದರು. ಆದ್ರೆ, ಪದೇಪದೇ ಕೋಟಿತೀರ್ಥ ಮಲಿನವಾಗುತ್ತಿದ್ದದ್ದರಿಂದ ಈ ಬಳಗಕ್ಕೂ ಸ್ವಚ್ಛತೆ ಮಾಡೋದು ದೊಡ್ಡ ತಲೆನೋವು ತಂದಿತ್ತು. ಈ ಹಿಂದೆ ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪುಷ್ಕರಣಿಯ ಸ್ವಚ್ಛತೆ ನಡೆಸಿತ್ತು. ಆದ್ರೆ, ಈವರೆಗೆ ಶಾಶ್ವತ ಪರಿಹಾರ ಮಾತ್ರ ದೊರಕಿರಲಿಲ್ಲ. ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರವೆನ್ನುವುದು ಇಂಪಾಸಿಬಲ್ ಎಂಬ ಅಭಿಪ್ರಾಯಕ್ಕೆ ಇಲ್ಲಿನ ಜನರು ಬಂದಿದ್ದರಾದ್ರೂ, ಇಟ್ಸ್ ಪಾಸಿಬಲ್ ಎಂದು ತೋರಿಸಿಕೊಟ್ಟದ್ದು ಏಷ್ಯಾನೆಟ್ ಸುವರ್ಣ ನ್ಯೂಸ್.

ಪುಷ್ಕರಣಿಯ ಪುನಶ್ಚೇತನಕ್ಕೆ ಕಾರಣವಾಯ್ತು ಬಿಗ್-3 
ಹೌದು, ಇಂದು(ಭಾನುವಾರ) ಗೋಕರ್ಣದ ಕೋಟಿತೀರ್ಥ ಪುಷ್ಕರಣಿ ಕೋಟಿಗಟ್ಟಲೆ ರೂ. ವೆಚ್ಚದಲ್ಲಿ ಪುನಶ್ಚೇತನಗೊಳ್ಳುತ್ತಿದೆ ಅಂದ್ರೆ ಕಾರಣ ಬಿಗ್-3 ಕಾರ್ಯಕ್ರಮ. ಏಷಿಯಾನೆಟ್ ಸುವರ್ಣ ನ್ಯೂಸ್‌ನ ಪ್ರಚಲಿತ ವಿದ್ಯಮಾನಗಳ ಸಂಪಾದಕರಾದ ಜಯಪ್ರಕಾಶ್ ಶೆಟ್ಟಿ ಅವರು ಗೋಕರ್ಣ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೋಟಿತೀರ್ಥದ ಸ್ಥಿತಿಯನ್ನು ಗಮನಿಸಿದ್ರು. ಈ ವೇಳೆ ಸ್ಥಳೀಯರು ಕೂಡಾ ಕೋಟಿತೀರ್ಥ ಮಲಿನಕೊಂಡಿರುವ ಬಗ್ಗೆ ಜಯಪ್ರಕಾಶ್ ಶೆಟ್ಟಿಯವರಲ್ಲಿ ತಿಳಿಸಿ, ಬಿಗ್-3 ಕಾರ್ಯಕ್ರಮದ ಮೂಲಕ ಪರಿಹಾರ ಒದಗಿಸುವಂತೆ ಮನವಿ ಮಾಡಿಕೊಂಡಿದ್ದರು. ಕೂಡಲೇ ಸ್ಪಂದಿಸಿದ ಜಯಪ್ರಕಾಶ್ ಶೆಟ್ಟಿಯವರು ಕಾರ್ಯಕ್ರಮದ ಮೂಲಕ ಸರಕಾರದ ಗಮನ ಸೆಳೆಯುವುದಾಗಿ ತಿಳಿಸಿದ್ದರು. ಬಳಿಕ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಚಿವ ಈಶ್ವರಪ್ಪನವರು ಕೂಡಾ ಕೋಟಿತೀರ್ಥವನ್ನು ನೋಡಿ ಬೇಸರ ವ್ಯಕ್ತಪಡಿಸಿದ್ದರು. 

ಆದರೆ, ಗೋಕರ್ಣದ ಪುನಶ್ಚೇತನಕ್ಕೆ ದಿಟ್ಟ ನಿರ್ಧಾರ ಮಾಡಿದ್ದ ಜಯಪ್ರಕಾಶ್ ಶೆಟ್ಟಿಯವರು ಬಿಗ್-3ಯಲ್ಲಿ "ಈಶ್ವರಪ್ಪ V/s ಈಶ್ವರ" ಅನ್ನೋ ವಿಶೇಷ ಕಾರ್ಯಕ್ರಮದ ಮೂಲಕ ಈ ಸಮಸ್ಯೆಯನ್ನು ಸರಕಾರದ ಮುಂದಿರಿಸಿದ್ದರು. ಅಲ್ಲದೇ, ಸಚಿವ ಕೆ.ಎಸ್.ಈಶ್ವರಪ್ಪರನ್ನು ವಿಶೇಷವಾಗಿ ಸಂಪರ್ಕಿಸಿ ಕೋಟಿತೀರ್ಥದ ಸಮಸ್ಯೆಯ ಬಗ್ಗೆ ಅವರಲ್ಲಿ ಪ್ರಸ್ತಾಪಿಸಿದ್ದಲ್ಲದೇ, ಶಾಶ್ವತ ಪರಿಹಾರ ಒದಗಿಸಲೇಬೇಕೆಂದು ಒತ್ತಾಯಿಸಿದ್ದರು. ಬಿಗ್-3 ಕಾರ್ಯಕ್ರಮದ ಮೂಲಕ ಜಯಪ್ರಕಾಶ್ ಶೆಟ್ಟಿಯವರು ಈ ವಿಚಾರ ಮಂಡಿಸಿದ್ದಕ್ಕೆ ಸಂತೋಷಗೊಂಡಿದ್ದ ಸಚಿವ ಈಶ್ವರಪ್ಪ, ಅವರನ್ನು  ಖುದ್ದಾಗಿ ಭೇಟಿಯಾಗಲು ಆಹ್ವಾನಿಸಿ ಕೂಡಲೇ ಸ್ವಚ್ಛತೆಯ ಯೋಜನೆಗೆ ಅಸ್ತು ಎಂದಿದ್ದರು. ಅಲ್ಲದೇ, ನರೇಗಾ ಯೋಜನೆಯಡಿ ಈ ಕೆಲಸ ಮಾಡುವುದಾಗಿ ತಿಳಿಸಿದ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು‌‌. 

ಸಚಿವ ಈಶ್ವರಪ್ಪನವರ ಸೂಚನೆಯಂತೆ ಅಧಿಕಾರಿಗಳು ಕೂಡಾ ಯೋಜನೆಯ ಡಿಪಿಆರ್‌ ರಚಿಸಿ, ಸಚಿವರಿಗೆ ಸಲ್ಲಿಸಿದ ಬಳಿಕ 2021-2022ರ ಜಲಾಮೃತ ಯೋಜನೆಯಡಿ 131.70ಲಕ್ಷ ರೂ. (ರಾಜಕಾಲುವೆ ಅಭಿವೃದ್ಧಿ, ಹೈ ಮಾಸ್ಕ್ ದೀಪ ಅಳವಡಿಕೆ ಸೇರಿದಂತೆ ಒಟ್ಟು ಅಭಿವೃದ್ಧಿ ಮೊತ್ತ 1.5 ಕೋಟಿ ರೂ.) ಟೆಂಡರ್ ಮೊತ್ತದಲ್ಲಿ ಕೋಟಿತೀರ್ಥ ಪುಷ್ಕರಣಿ ಅಭಿವೃದ್ಧಿ ಯೋಜನೆಗೆ ಸಚಿವರು ಗುದ್ದಲಿ ಪೂಜೆ ನಡೆಸಿದ್ದಾರೆ. ಈ ವೇಳೆ ಸಚಿವರಿಗೆ ಕುಮಟಾ ಶಾಸಕ ದಿನಕರ ಶೆಟ್ಟಿ, ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ, ಸಿಇಒ ಪ್ರಿಯಾಂಗಾ ಸಾಥ್ ನೀಡಿದ್ದಾರೆ. 

ಕಾಮಗಾರಿಗೆ ಗುದ್ದಲಿಪೂಜೆ ನಡೆಸಿ, ಕೋಟಿತೀರ್ಥ ಕಲ್ಯಾಣಿಗೆ ಬಾಗಿನ ಅರ್ಪಿಸಿದ ನಂತರ ಏಷ್ಯಾನೆಟ್ ಸುವರ್ಣನ್ಯೂಸನ್ನು ಪ್ರಶಂಸಿಸಿದ್ದ ಸಚಿವ ಕೆ.ಎಸ್. ಈಶ್ವರಪ್ಪ, ಕೋಟಿತೀರ್ಥ ಅಭಿವೃದ್ಧಿಗೆ ಸುವರ್ಣನ್ಯೂಸ್‌ನ ಜಯಪ್ರಕಾಶ್ ಶೆಟ್ಟಿಯವರೇ ನನಗೆ ಸ್ಫೂರ್ತಿ. ಸುವರ್ಣನ್ಯೂಸ್‌ನವರು ಪದೇ ಪದೇ ನನಗೆ ನೆನಪು ಮಾಡಿದ್ರಿಂದ ಈ ಯೋಜನೆ ಸಾಕಾರಗೊಂಡಿದೆ. ಕೋಟಿತೀರ್ಥ ಅಭಿವೃದ್ಧಿ ಯೋಜನೆಯ ಶ್ರೇಯ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೂ ಸಲ್ಲುತ್ತದೆ ಎಂದಿದ್ದರು. 

ಉತ್ತರಕನ್ನಡ ಜಿಲ್ಲಾಡಳಿತದ ಯೋಜನೆ ಹಾಗೂ ಸರಕಾರದಿಂದ ಹಣ ಬಿಡುಗಡೆಯಾಗಿ ತಯಾರಿದ್ದರೂ, ಬೇಸಿಗೆಗಾಲ ಉತ್ತಮ ಸಮಯವೆಂದು ಕಾಯಲಾಗಿತ್ತು. ಶಿವರಾತ್ರಿಯ ಮುನ್ನವೇ ಪುಷ್ಕರಣಿಯ ಸಂಪೂರ್ಣ ನೀರು ತೆಗೆದು ಸ್ವಚ್ಛತಾ ಕಾರ್ಯ ನಡೆಸಲು ತಯಾರಿ ನಡೆಸಿದ್ದರೂ, ಸ್ಥಳೀಯರು, ದೇವಳದ ಅರ್ಚಕರೆಲ್ಲರೂ ಕೇಳಿಕೊಂಡ ಹಿನ್ನೆಲೆಯಲ್ಲಿ ಶಿವರಾತ್ರಿ ಮುಗಿಯುವವರೆಗೆ ಕಾದು ಇದೀಗ ಅತ್ಯಂತ ವೇಗವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಿ ಮೊದಲ ಹಂತದಲ್ಲಿ 5 ಎಕರೆ ಪ್ರದೇಶದಲ್ಲಿರುವ ಪುಷ್ಕರಣಿಯ ಮಲಿನ ನೀರನ್ನು ಹೊರಗಡೆ ಹರಿಸಲಾಗಿದೆ. 

ಎರಡನೇ ಹಂತದಲ್ಲಿ ಹೂಳು ಬಿಸಿಲಿಗೆ ಗಟ್ಟಿಯಾಗುವಂತೆ ಮಾಡಿ ಕಾರ್ಮಿಕರು ಹಾಗೂ ಬುಲ್ಡೋಝರ್ ಮೂಲಕ ಈ ಮಣ್ಣನ್ನು ತೆಗೆಯುವ ಪ್ರಕ್ರಿಯೆ ಮುಂದುವರಿದಿದೆ. ಮೂರನೇ ಹಂತದಲ್ಲಿ ತಳಭಾಗವನ್ನು ಸಂಪೂರ್ಣ ಸ್ವಚ್ಛಗೊಳಿಸಿ ಟೈಲ್ಸ್‌ಗಳ ಅಳವಡಿಕೆ, ಹೂಳು ಜಮಾಯಿಸದಂತೆ ವ್ಯವಸ್ಥೆ ಮಾಡುವುದಲ್ಲದೇ, ಪುಷ್ಕರಣಿಯ ಸುತ್ತಲಿನ ಭಾಗದ ಪ್ಯಾಚ್ ವರ್ಕ್, ಬಣ್ಣ ಹಚ್ಚುವುದು ಮುಂತಾದ ಹಲವು ಕೆಲಸ ಕಾರ್ಯಗಳು ನಡೆಯಲಿದೆ. ಜಿಲ್ಲಾಡಳಿತದ ಪ್ರಕಾರ, ಮುಂದಿನ ಮಳೆಗಾಲದ ಒಳಗಾಗಿ ಪುಷ್ಕರಣಿಯ ಎಲ್ಲಾ ಕೆಲಸಗಳು ಮುಗಿದು, ಪುನರ್‌ ಬಳಕೆಗೆ ಪುಷ್ಕರಣಿ ತಯಾರಾಗಲಿದೆ. 

ಇಷ್ಟೆಲ್ಲಾ ಕೆಲಸಗಳು ಅತೀ ವೇಗವಾಗಿ ನಡೆಯುತ್ತಿರುವುದರಿಂದ ಖುಷಿಗೊಂಡಿರುವ ಗೋಕರ್ಣದ ಜನರು ಹಾಗೂ ಶ್ರೀ ಪಟ್ಟೆ ವಿನಾಯಕ ಗೆಳೆಯರ ಬಳಗ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಪ್ರಚಲಿತ ವಿದ್ಯಮಾನಗಳ ಸಂಪದಾಕರಾಗಿರುವ ಜಯಪ್ರಕಾಶ್ ಶೆಟ್ಟಿಯವರಿಗೆ ವಿಶೇಷ ಅಭಿನಂದನೆ ಹಾಗೂ ಧನ್ಯವಾದ ಸಲ್ಲಿಸಿದ್ದಾರೆ.

 ಬಿಗ್-3 ಕಾರ್ಯಕ್ರಮದ ಮೂಲಕ ಕೋಟಿತೀರ್ಥದ ಸಮಸ್ಯೆ ಪ್ರಸ್ತಾಪಿಸಲ್ಪಟ್ಟು, ಬಳಿಕ ಇದೇ ಕಾರ್ಯಕ್ರಮದ ಮೂಲಕ ಶಾಶ್ವತ ಪರಿಹಾರ ಕಾಣುತ್ತಿರುವ ಕೋಟಿತೀರ್ಥ ಮುಂದಿನ ದಿನಗಳಲ್ಲಿ‌ ಶ್ರೀ ಮಹಾಬಲೇಶ್ವರ ದರ್ಶನಕ್ಕೆ ಬರುವ ಭಕ್ತರಿಗೆ ಮತ್ತೆ ಶುದ್ಧ ಹಾಗೂ ಆರೋಗ್ಯಯುತ ನೀರಿನೊಂದಿಗೆ ಪುಣ್ಯಸ್ನಾನಕ್ಕೆ ಲಭ್ಯವಾಗುತ್ತಿರುವುದು ಸಂತೋಷದ ವಿಚಾರವೇ ಸರಿ.

Latest Videos
Follow Us:
Download App:
  • android
  • ios