ಸಂಡೂರು(ಮೇ.10): ಕೊರೋನಾ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಸಂಪೂರ್ಣ ವಿಫಲವಾಗಿವೆ ಎಂದು ಕೆಪಿಸಿಸಿ ವಕ್ತಾರ ಸಿರಾಜ್‌ ಶೇಖ್‌ ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆಬ್ರುವರಿಯಲ್ಲಿ 2ನೇ ಅಲೆ ಬರುತ್ತದೆ ಎಂದು ತಜ್ಞರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಬದಲಿಗೆ ಕುಂಭಮೇಳಕ್ಕೆ ಅವಕಾಶ, ಪಂಚ ರಾಜ್ಯಗಳ ಚುನಾವಣೆ, ಉಪ ಚುನಾವಣೆ ನಡೆಸುವ ಮೂಲಕ ಸೋಂಕು ಹಬ್ಬಲು ಕಾರಣವಾಯಿತು ಎಂದರು.

"

ಬಿಬಿಎಂಪಿ ಕಾಲ್‌ಸೆಂಟರ್‌ನಲ್ಲಿ ಕ್ರಿಸ್ಟಲ್‌ ಎನ್‌ಜಿಒ 205 ಜನರನ್ನು ನೇಮಿಸಿದೆ. ಕೇವಲ 17 ಗುತ್ತಿಗೆ ನೌಕರರ ಹೆಸರನ್ನು ಪ್ರಸ್ತಾಪಿಸಿ ಬಿಬಿಎಂಪಿಯಲ್ಲಿ ಉಗ್ರಗಾಮಿಗಳು ಸೇರಿಕೊಂಡಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳುತ್ತಿದ್ದಾರೆ. ಬೀದಿಗಳಲ್ಲಿ ಜನ ಸಾಯುತ್ತಿದ್ದಾರೆ. ದೇಶದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಸ್ಪಂದಿಸುವುದನ್ನು ಬಿಟ್ಟು ವಿಷ ಬಿತ್ತುವ ಕೆಲಸವನ್ನು ಮಾಡಲಾಗುತ್ತಿದೆ. ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಸಿಗದೆ ರೋಗಿಗಳು ಮೃತಪಟ್ಟ ಘಟನೆಯನ್ನು ಮರೆಮಾಚುವ ದುರುದ್ದೇಶದಿಂದ ಬೆಡ್‌ ಬ್ಲಾಕಿಂಗ್‌ ದಂಧೆಯಂತಹ ಘಟನೆಗಳನ್ನು ಮುನ್ನೆಲೆಗೆ ತಂದು ಇಡಲಾಗುತ್ತಿದೆ ಎಂದು ಕುಟುಕಿದರು.

ಮಹಾಮಾರಿ ಕೊರೋನಾಗೂ ಡೋಂಟ್‌ ಕೇರ್‌: ಬುದ್ಧಿ ಕಲಿಯದ ಜನ..!

ಲಾಕ್‌ಡೌನ್‌ ನಿಯಮಾವಳಿಗಳನ್ನು ಬೆಂಗಳೂರಿನಂತಹ ದೊಡ್ಡ ನಗರಗಳನ್ನು ತಲೆಯಲ್ಲಿಟ್ಟುಕೊಂಡು ಮಾರ್ಗಸೂಚಿ ಮಾಡುತ್ತಾರೆ. ಆಸ್ಪತ್ರೆಗಳೇ ಇಲ್ಲದೆ ಶೇ. 70ರಷ್ಟು ಗ್ರಾಮೀಣ ಭಾಗದ ಜನತೆ ಪರಿಸ್ಥಿತಿಯನ್ನು ಸರ್ಕಾರ ಅರಿಯಬೇಕಿದೆ. ಅತ್ತ ಮೋದಿ 6.60 ಕೋಟಿ ಲಸಿಕೆ ವಿದೇಶಕ್ಕೆ ಕಳುಹಿಸಿ ವಿಶ್ವನಾಯಕರಾಗಲು ಹೊರಟಿದ್ದಾರೆ. ದೇಶದಲ್ಲಿ ಸಂಕಷ್ಟ ಕಾಲವಿದ್ದರೂ 20 ಸಾವಿರ ಕೋಟಿ ವೆಚ್ಚದ ಪಾರ್ಲಿಮೆಂಟ್‌ ಭವನ ನಿರ್ಮಾಣ ಕಾರ್ಯ ಮುಂದುವರಿದಿದೆ ಎಂದು ಕಿಡಿಕಾರಿದರು. ಈ ವೇಳೆ ಜಿಲಾನ್‌ಸಾಬ್‌, ಹಸೇನ್‌, ಕೆಇ ಜಮೀರ್‌ ಸಾಬ್‌, ಯಾದಗರ್‌, ಖಾಸಿಂ ಪೀರಾ ಇದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona