ಕೆ.ಎಂ. ಮಂಜುನಾಥ್‌

ಬಳ್ಳಾರಿ(ಮೇ.09): ಕೊರೋನಾ ಸೋಂಕಿನ ದಾಳಿಯಿಂದ ಅವಳಿ ಜಿಲ್ಲೆಯಲ್ಲಿ 850ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಯುವಕರಲ್ಲೂ ಸೋಂಕು ಹಬ್ಬಿ ನಿತ್ಯ ಸಾವಿನ ಸುದ್ದಿಗಳೇ ಕೇಳುತ್ತಿವೆ. 12 ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಸಾವು-ನೋವಿನ ಭೀಕರತೆ ಹೆಚ್ಚಿಸುವ ಭೀತಿ ಮೂಡಿಸಿವೆ. ಇಷ್ಟಾಗಿಯೂ ಬಳ್ಳಾರಿ ಜನರಿಗೆ ಬುದ್ಧಿ ಬಂದಿಲ್ಲ!!

ನಗರದ ಟ್ಯಾಂಕ್‌ಬಂಡ್‌ ರಸ್ತೆ, ಬೆಂಗಳೂರು ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಶನಿವಾರ ಕಂಡು ಬಂದ ಜನದಟ್ಟಣೆಯ ಚಿತ್ರಣ ಬಳ್ಳಾರಿ ಜನರ ನಿರ್ಲಕ್ಷ್ಯತೆಯ ಪರಾಕಾಷ್ಠೆಯನ್ನು ತೋರಿಸುತ್ತದೆಯಲ್ಲದೆ, ಈ ಜನರಿಗೆ ಬುದ್ಧಿ ಬರೋದು ಯಾವ್ಯಾಗ ಎಂಬ ಪ್ರಶ್ನೆಯೂ ಮೂಡಿಸುತ್ತದೆ.

"

ಹಬ್ಬದ ಸಂತೆಗಾಗಿ ಸಾವಿರಾರು ಜನರು ಬೀದಿಯಲ್ಲಿ:

ಬಸವಜಯಂತಿ, ರಂಜಾನ್‌ ಹಬ್ಬಗಳು ಸಮೀಪಿಸುತ್ತಿವೆ. ಬಸವಜಯಂತಿಗೆ ಮದುವೆಗಳು, ಗೃಹಪ್ರವೇಶದಂತೆ ಮಂಗಳ ಕಾರ್ಯಗಳಿಗೆ ಶುಭದಿನ. ಹೀಗಾಗಿ ಬಸವಜಯಂತಿ ಹಾಗೂ ರಂಜಾನ್‌ ಹಬ್ಬಕ್ಕೂ ಸಿದ್ಧತೆಗಳು ಜೋರಾಗಿ ನಡೆದಿದ್ದು ಹಬ್ಬದ ಸಂತೆಗಾಗಿ ಸಾವಿರಾರು ಜನ ಬೀದಿಗಳಿದಿದ್ದರು. ಮೇ 10ರಿಂದ ಲಾಕ್‌ಡೌನ್‌ ಶುರುವಾಗುತ್ತಿದೆ. ಮೇ 9ರ ಭಾನುವಾರ ಆದ್ದರಿಂದ ನಗರದ ಬಹುತೇಕ ವ್ಯಾಪಾರ ಬಂದ್‌ ಆಗಿರುತ್ತದೆ. ಹೀಗಾಗಿ ಶನಿವಾರವೇ ಹಬ್ಬದ ಸಂತೆಗಾಗಿ ಮುಗಿಬಿದ್ದಿದ್ದ ದೃಶ್ಯಗಳು ಕಂಡು ಬಂದವು.

ಬಳ್ಳಾರಿ: ಜಿಂದಾಲ್‌ನಲ್ಲಿ 1200 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಉತ್ಪಾದಿಸಿ, ಶೆಟ್ಟರ್‌

ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನರು ಜಮಾಯಿಸಿದ್ದರಿಂದ ನಗರದ ಪ್ರಮುಖ ರಸ್ತೆಗಳು ಬೆಳಗ್ಗೆ 10ಗಂಟೆಯೊಳಗೆ ಜಾಮ್‌ ಆಗಿದ್ದವು. ದ್ವಿಚಕ್ರ ವಾಹನ, ಕಾರುಗಳು ರಸ್ತೆಗಳನ್ನು ಸಂಪೂರ್ಣ ಆವರಿಸಿಕೊಂಡಿದ್ದವು. ಇನ್ನು ತರಕಾರಿ ಮಾರುಕಟ್ಟೆಗಳು ಜನರಿಂದ ತುಂಬಿಕೊಂಡಿದ್ದವು. ಮಧ್ಯಾಹ್ನ 12 ಗಂಟೆ ವರೆಗೆ ನಗರದಲ್ಲಿ ಜನದಟ್ಟಣೆ ಕಡಿಮೆಯಾಗಲಿಲ್ಲ. ಜನತಾಕಫä್ರ್ಯ ಹೆಸರಲ್ಲಿ ಖಾಕಿ ಪಡೆ ರಸ್ತೆಗಿಳಿಯುತ್ತಿದ್ದಂತೆಯೇ ಜನನಿಯಂತ್ರಣವಾಯಿತು.

ಜನಸತ್ತರೂ ಹಬ್ಬ ಮಾಡಬೇಕಾ?:

ಅವಳಿ ಜಿಲ್ಲೆಯಲ್ಲಿ ನಿತ್ಯ ವರದಿಯಾಗುತ್ತಿರುವ ಕೊರೋನಾ ಸೋಂಕಿತರು ಹಾಗೂ ಸಾವಿನ ಪ್ರಕರಣಗಳಲ್ಲಿ ಅರ್ಧದಷ್ಟುಬಳ್ಳಾರಿ ನಗರದಲ್ಲಿಯೇ ಕಂಡು ಬರುತ್ತಿವೆ ಎಂದು ವೈದ್ಯರು ಹೇಳುತ್ತಾರೆ. ಜನತಾ ಕಫä್ರ್ಯ ಶುರು ಮುನ್ನ ನಿತ್ಯ ಜನರ ಓಡಾಟ ಇದ್ದೇ ಇರುತ್ತದೆ. ವ್ಯಾಪಾರ ವಹಿವಾಟು ಮಾಡುತ್ತಾರೆ. ಒಂದು ಬಾರಿ ದಿನಸಿ ಖರೀದಿಸಿದರೆ ವಾರ ಅಥವಾ ಹದಿನೈದು ದಿನಗಳ ಕಾಲ ಹೊರಗಡೆ ಬರಬೇಕಾಗಿಲ್ಲ. ಹಾಲು ನೇರವಾಗಿ ಮನೆಗೆ ಬರುತ್ತವೆ. ಕಾಯಿಪಲ್ಯೆ ಖರೀದಿಸಿದರೂ ಮೂರು ದಿನ ಇಟ್ಟುಕೊಳ್ಳಬಹುದು. ಫ್ರಿಜ್‌ ಸೌಕರ್ಯ ಇರುವವರು ವಾರಗಟ್ಟಲೆ ಇಟ್ಟುಕೊಂಡರೂ ಕಾಯಿಪಲ್ಯೆ ಕೆಡುವುದಿಲ್ಲ. ಇದು ಗೊತ್ತಿದ್ದೂ ಜನರ ನಿತ್ಯ ಹೊರ ಬಂದು ಕಾಯಿಪಲ್ಯೆ ಖರೀದಿಸುತ್ತಾರೆ. ದಿನಸಿ ಅಂಗಡಿಗಳ ಮುಂದೆ ಖರೀದಿಗೆ ನಿಲ್ಲುತ್ತಾರೆ. ಹೀಗಾಗಿಯೇ ನಗರದಲ್ಲಿ ಸೋಂಕು ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಇದೀಗ ಬಸವಜಯಂತಿ, ರಂಜಾನ್‌ ಹಬ್ಬಕ್ಕಾಗಿ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದು ಮುಗಿಬಿದ್ದು ವ್ಯಾಪಾರ ಮಾಡುವ ಅಗತ್ಯವಾದರೂ ಏನಿತ್ತು ? ಮದುವೆ, ಗೃಹ ಪ್ರವೇಶಗಳು ಮುಂದೂಡಿದರೆ ಆಗೋದಿಲ್ಲವೇ ? ಒಂದೇ ಓಣಿಯಲ್ಲಿ ಕೆಲವು ಸೋಂಕಿತರು, ಕೆಲವರು ಗಂಭೀರವಾಗಿ ಬಳಲುವ ರೋಗಿಗಳು ಇರುವಾಗ ಹಬ್ಬದ ಸಂಭ್ರಮ ಹೇಗೆ ಸಾಧ್ಯ? ನಿತ್ಯ ಹತ್ತಾರು ಜನರು ಸಾವಿನ ಮನೆಯ ಕದ ತಟ್ಟುತ್ತಿರುವಾಗ ಮದುವೆ, ಗೃಹಪ್ರವೇಶ ಮಾಡಲು ಮನಸ್ಸಾದರೂ ಹೇಗೆ ಬರುತ್ತದೆ ? ಎಂಬುದು ನಗರದ ಪ್ರಜ್ಞಾವಂತರ ಪ್ರಶ್ನೆ. ವ್ಯಾಕ್ಸಿನ್‌ ಕೊಡಿ ಎಂದು ಆಸ್ಪತ್ರೆಯ ಮುಂದೆ ಮುಗಿಬಿದ್ದರು

ಒಂದೆಡೆ ಕೊರೋನಾ ಲೆಕ್ಕಿಸದೆ ಜನರು ಬೀದಿಯಲ್ಲಿ ಅಡ್ಡಾದಿಡ್ಡಿ ಓಡಾಡುವುದು ಕಂಡು ಬಂದರೆ, ಮತ್ತೊಂದೆಡೆ ನಗರದ ಜನತೆ ಕೊರೋನಾ ನಿಯಂತ್ರಣದ ಎರಡನೇ ಡೋಸ್‌ ಲಸಿಕೆಗಾಗಿ ಜಿಲ್ಲಾಸ್ಪತ್ರೆ ಇತರೆ ಆರೋಗ್ಯ ಕೇಂದ್ರಗಳ ಮುಂದೆ ಸಾಲುಗಟ್ಟಿನಿಂತಿದ್ದರು. ಎರಡನೇ ಡೋಸ್‌ ನೀಡುತ್ತಿದ್ದಾರೆ ಎಂದರಿತ ಜನರು, ಬೆಳಗ್ಗೆಯಿಂದಲೇ ಆಸ್ಪತ್ರೆಗಳ ಮುಂದೆ ಜಮಾಯಿಸಿದರು. ಯುವಕರು, ವೃದ್ಧರು ಸೇರಿದಂತೆ ನೂರಾರು ಜನರು ಲಸಿಕೆಗಾಗಿ ಬಿಸಿಲನ್ನು ಲೆಕ್ಕಿಸದೆ ನಿಂತುಕೊಂಡಿದ್ದು ಇಲ್ಲಿನ ಸರ್ಕಾರಿ ಘೋಷ್‌ ಆಸ್ಪತ್ರೆಯ ಮುಂದೆ ಕಂಡು ಬಂತು. ನಗರದಲ್ಲಿ ಸಾವಿನ ಪ್ರಕರಣಗಳಿಂದ ಆತಂಕಗೊಂಡಿರುವ ಜನರು ಮೊದಲ ಡೋಸ್‌ಗಾಗಿ ಕೇಳಿಕೊಂಡು ಆಸ್ಪತ್ರೆಗಳ ಮುಂದೆ ಬಂದಿದ್ದರು. ಆದರೆ, ಮೊದಲ ಡೋಸ್‌ ಸದ್ಯಕ್ಕೆ ನೀಡುತ್ತಿಲ್ಲ ಎಂದು ವೈದ್ಯಕೀಯ ಸಿಬ್ಬಂದಿ ಹಿಂದಕ್ಕೆ ಕಳಿಸುತ್ತಿರುವ ದೃಶ್ಯಗಳು ಕಂಡು ಬಂದವು.

ಕೊರೋನಾ ನಿಯಮ ಉಲ್ಲಂಘನೆ

ಬಳ್ಳಾರಿಯಲ್ಲಿ ಶನಿವಾರ ಕಂಡು ಬಂದ ಜನಸ್ತೋಮ ನೋಡಿದರೆ ನಿಜಕ್ಕೂ ಬಳ್ಳಾರಿಗೆ ಉಳಿಗಾಲವಿಲ್ಲ ಎನಿಸಿತು. ಬೆಂಗಳೂರು ರಸ್ತೆ ಸೇರಿದಂತೆ ವ್ಯಾಪಾರ-ವಹಿವಾಟು ನಡೆಯುವ ಪ್ರದೇಶಗಳಲ್ಲಿ ಜಾಗಗಳಲ್ಲಿ ನಿಲ್ಲಲೂ ಸಹ ಜಾಗವಿರಲಿಲ್ಲ. ಸಾಮಾಜಿಕ ಅಂತರಕ್ಕೆ ಎಳ್ಳುನೀರು ಬಿಟ್ಟಿದ್ದ ಜನರು, ಕೊರೋನಾ ನಿಯಮವನ್ನು ಸ್ಪಷ್ಟವಾಗಿ ಉಲ್ಲಂಘಿಸಿದರು. ಬಹುತೇಕರು ಮಾಸ್ಕ್‌ ಹಾಕಿದ್ದರು. ಕೆಲವು ಜನರು ಮಾಸ್ಕ್‌ ಬದಲು ಬಾಯಿಗೆ ಬಟ್ಟೆಕಟ್ಟಿಕೊಂಡು ಓಡಾಡಿದರು. ಅನೇಕ ಬೀದಿಬದಿಯ ವ್ಯಾಪಾರಿಗಳು ಮಾಸ್ಕ್‌ ಇಲ್ಲದೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona