ಹುಬ್ಬಳ್ಳಿ-ಧಾರವಾಡ ಪಾಲಿಕೆ: ನಮ್ಮ ತಪ್ಪಿನಿಂದ ಬಿಜೆಪಿ ಗೆದ್ದಿದೆ, ಡಿ.ಕೆ. ಶಿವಕುಮಾರ್
* ಕಲಬುರಗಿ, ಹು-ಧಾದಲ್ಲಿ ಫಲಿತಾಂಶ ಸಮಾಧಾನ ಸಿಕ್ಕಿದೆ
* ಹು-ಧಾ ಪಾಲಿಕೆ ಟಿಕೆಟ್ ಹಂಚುವಲ್ಲಿ ನಮ್ಮದೇ ತಪ್ಪಾಗಿದೆ
* ಹಿಂದೂ, ಮುಸ್ಲಿಂ ಕ್ರಿಶ್ಚಿಯನ್ ನಾವೆಲ್ಲ ಒಂದೇ
ಹುಬ್ಬಳ್ಳಿ(ಸೆ.12): ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆಯಲ್ಲಿ ನೀಡಿದ ಜನರ ತೀರ್ಪಿಗೆ ನಾವು ಸಾಷ್ಟಾಂಗ ನಮಸ್ಕಾರ ಸಲ್ಲಿಸುತ್ತೇವೆ. ಈ ಚುನಾವಣೆಯಲ್ಲಿ ನಾವು ಸೋತಿಲ್ಲ. ಕಡಿಮೆ ಸ್ಥಾನಗಳು ಬಂದಿರಬಹುದು. ಕೆಲವು ನಮ್ಮ ತಪ್ಪಿನಿಂದಲೂ ಈ ಫಲಿತಾಂಶ ಬಂದಿರಬಹುದು. ಎಲ್ಲ ಪ್ರಭುದ್ಧ ಮತದಾರರಿಗೆ ಸಾಷ್ಟಾಂಗ ನಮಸ್ಕಾರ. ನಿಮ್ಮ ವಿಶ್ವಾಸ ಉಳಿಸಿಕೊಂಡು ಹೋಗುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ 5 ಜನ ಬಂಡಾಯ ಅಭ್ಯರ್ಥಿಗಳು, ಮುಖಂಡರ ತಪ್ಪಿನಿಂದಾಗಿ ಬಿಜೆಪಿಯವರು ಗೆದ್ದಿದ್ದಾರೆ. ಇಲ್ಲಿ ಮಾಜಿ ಸಿಎಂ, ಕೇಂದ್ರ ಸಚಿವರು ಸೇರಿ ಎಲ್ಲರೂ ಇಲ್ಲಿಯವರೇ ಆಗಿದ್ದಾರೆ. ಅವರಿಗೆ ಹೇಗೆ ಬೇಕೋ ಹಾಗೆ ಅಧಿಕಾರದ ದುರಪಯೋಗವನ್ನ ಮಾಡಿಕೊಂಡಿದ್ದಾರೆ. ನಮ್ಮ ಸಂಖ್ಯೆ ಇಲ್ಲದಿದ್ದರೂ ಸಹ ಮತದಾರಪ್ರಭು ಉತ್ತಮ ಫಲಿತಾಂಶವನ್ನೇ ಕೊಟ್ಟಿದ್ದಾರೆ. ನಮಗೆ ಸಿಕ್ಕ ಅವಕಾಶವನ್ನ ಸದುಪಯೋಗ ಪಡೆದುಕೊಳ್ಳುತ್ತೇವೆ. ಕೆಲವು ರೆಬೆಲ್ ಅಭ್ಯರ್ಥಿಗಳು ಸಹ ಮತ್ತೆ ಕಾಂಗ್ರೆಸ್ ಸಿದ್ಧಾಂತವನ್ನ ಮೆಚ್ಚು ವಾಪಸ್‌ಬರುತ್ತೇವೆ ಅಂತ ಹೇಳಿದ್ದಾರೆ ಎಂದು ಡಿಕೆಶಿ ತಿಳಿಸಿದ್ದಾರೆ.
ಕಲಬುರಗಿ, ಹು-ಧಾದಲ್ಲಿ ಫಲಿತಾಂಶ ಸಮಾಧಾನ ಸಿಕ್ಕಿದೆ. ಬೆಳಗಾವಿಯಲ್ಲಿ ಚಿಹ್ನೆ ಮೇಲೆ ಚುನಾವಣೆ ಮಾಡಿದ್ದೆವು. ಅಲ್ಲಿ 20 ಸ್ಥಾನ ನಿರೀಕ್ಷೆ ಮಾಡಿದ್ದೆವು, ಈ ಫಲಿತಾಂಶ ಬಿಜೆಪಿ ಸರ್ಕಾರ, ಆಡಳಿತ ಒಪ್ಪಿ ಮತದಾನ ಆಯ್ತಾ ಅಂತ ಬಿಜೆಪಿ ನಾಯಕರೇ ಹೇಳಬೇಕು. ಜಗದೀಶ್ ಶೆಟ್ಟರ್ ಅವರೇ ಹೇಳಬೇಕು, ಅವರಿಗೆ ಈ ಚುನಾವಣೆ ಖುಷಿ ಇದಿಯಾ ಅಂತ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಕಲಬುರಗಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಎಲ್ಲ ತಂತ್ರಗಾರಿಕೆ: ಸಚಿವ ಜೋಶಿ
ಹು-ಧಾ ಪಾಲಿಕೆ ಟಿಕೆಟ್ ಹಂಚುವಲ್ಲಿ ನಮ್ಮದೇ ತಪ್ಪಾಗಿದೆ. ಎಲ್ಲರೂ ಸಹ ನಾಯಕರಾಗ್ತಿನಿ ಅಂತ ಹೋಗಿದ್ರು, ಹಿಂದೂ, ಮುಸ್ಲಿಂ ಕ್ರಿಶ್ಚಿಯನ್ ಅದೆಲ್ಲ ಇಲ್ಲ ನಾವೆಲ್ಲ ಒಂದೇ. ಅದೇನಿದ್ರೂ ಬಿಜೆಪಿಯಲ್ಲಿ ಮಾತ್ರ ಅಂತ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ನಾಳೆಯಿಂದ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ ಕೊರೋನಾಗೆ ಸಾಕಷ್ಟು ಜನ ತೀರಿಕೊಂಡಿದ್ದಾರೆ. ಬಹಳಷ್ಟು ಜನ ಆಸ್ಪತ್ರೆಯಲ್ಲಿ ಹಣ ಕಟ್ಟಿ ಕಂಗಾಲಾಗಿದ್ದಾರೆ. ಅವರಿಗೆಲ್ಲ ಮೊದಲು ಸರ್ಕಾರ ಪರಿಹಾರ ನೀಡಬೇಕು. ಬೊಮ್ಮಾಯಿ ಮತ್ತು ಶೆಟ್ಟರ್ ಮಹದಾಯಿ ಮೇಕೆದಾಟು ವಿಚಾರ ಅವರೇ ಮಾತನಾಡುತ್ತಿದ್ದರು. ಈಗ ಅವರ ಬಳಿ ಅಧಿಕಾರ ಇದೆ. ಅವರಿಗೆ ಬಿಟ್ಟಿದ್ದೇವೆ ಏನು ಮಾಡ್ತಾರೆ ಅನ್ನೋದನ್ನ ಕಾದು ನೋಡ್ತೇವೆ ಎಂದು ತಿಳಿಸಿದ್ದಾರೆ.