ಕಲಬುರಗಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಎಲ್ಲ ತಂತ್ರಗಾರಿಕೆ: ಸಚಿವ ಜೋಶಿ
* ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ನಾವೇ ಅಧಿಕಾರಕ್ಕೆ ಬರ್ತೇವೆ
* ರಾಜಕಾರಣದಲ್ಲಿ ಯಾರೂ ಮಿತ್ರರೂ ಅಲ್ಲ. ಶತ್ರುಗಳೂ ಅಲ್ಲ ಎಂಬುದನ್ನಷ್ಟೇ ನಾನು ಹೇಳಬಲ್ಲೆ
* ಎಲ್ಲಿ ಬಹುಮತ ಇರುವುದಿಲ್ಲವೋ ಅಲ್ಲಿ ಗುದ್ದಾಟ ಸಹಜ
ಧಾರವಾಡ(ಸೆ.12): ಕಲಬುರಗಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಏನು ಮಾಡಬೇಕೋ ಆ ಎಲ್ಲ ತಂತ್ರಗಾರಿಕೆಯನ್ನೂ ಬಿಜೆಪಿ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲಿ ಬಹುಮತ ಇರುವುದಿಲ್ಲವೋ ಅಲ್ಲಿ ಗುದ್ದಾಟ ಸಹಜ. ಅದೇ ರೀತಿ ಕಲಬುರಗಿ ಪಾಲಿಕೆಯಲ್ಲೂ ನಡೆಯುತ್ತಿದೆ. ಈ ಗುದ್ದಾಟದಲ್ಲಿ ಬಿಜೆಪಿ ಏನೇನು ತಂತ್ರಗಾರಿಕೆ ಮಾಡಬೇಕೋ ಅದನ್ನು ಮಾಡುತ್ತಿದೆ ಎಂದರು.
ಕಲಬುರಗಿ: ಬಿಜೆಪಿಯಿಂದ ಕಾಂಗ್ರೆಸ್ ಸದಸ್ಯರಿಗೆ ಆಮಿಷ, ಪ್ರಿಯಾಂಕ್ ಖರ್ಗೆ
ಅಲ್ಲಿ ಯಾರ ಜೊತೆ ಯಾರು ದೋಸ್ತಿ ಆಗುತ್ತದೆ ಎನ್ನುವುದು ಹೇಳಲು ಅಧಿಕೃತ ವ್ಯಕ್ತಿ ನಾನಲ್ಲ. ಅದನ್ನು ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷರು ನಿರ್ಧಾರ ಮಾಡುತ್ತಾರೆ. ಆದರೆ ರಾಜಕಾರಣದಲ್ಲಿ ಯಾರೂ ಮಿತ್ರರೂ ಅಲ್ಲ. ಶತ್ರುಗಳೂ ಅಲ್ಲ ಎಂಬುದನ್ನಷ್ಟೇ ನಾನು ಹೇಳಬಲ್ಲೆ. ಆದರೆ ಅಧಿಕಾರ ಹಿಡಿಯಲು ಎಲ್ಲ ತಂತ್ರಗಾರಿಕೆ ಮಾಡುತ್ತೇವೆ ಎಂದು ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ. ಯಾರನ್ನು ಮೇಯರ್ ಮಾಡಬೇಕು ಎಂಬುದನ್ನು ಗೆಜೆಟ್ ನೋಟಿಫಿಕೇಶನ್ ನೋಡಿ ಡಿಸೈಡ್ ಮಾಡುತ್ತೇವೆ. ಚುನಾವಣೆ ಪ್ರಕ್ರಿಯೆ ಆಗಬೇಕು. ಮೇಯರ್ ಮಾಡುವುದಕ್ಕಿಂತ ಮುಂಚೆ ನಿಮಗೆ ಹೇಳಿಯೇ ಮಾಡುತ್ತೇವೆ ಎಂದು ನುಡಿದರು.