ತಮಿಳುನಾಡು ಬಿಜೆಪಿ ಬೆಳೆಸಲು ರಾಜ್ಯ ಬಿಜೆಪಿ ಸರ್ಕಾರ ಸ್ಟಂಟ್
- ತಮಿಳುನಾಡಿಗೆ 70 ಟಿಎಂಸಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶಿಸಿದೆ
- ಆದರೆ, ಕಾವೇರಿ ಭಾಗದ 4 ಜಲಾಶಯಗಳಲ್ಲಿ 66 ಟಿಎಂಸಿ ನೀರು ಮಾತ್ರ ಸಂಗ್ರಹ ಇರುವುದರಿಂದ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು
ಮೈಸೂರು (ಅ.01): ತಮಿಳುನಾಡಿಗೆ (Tamilnadu) 70 ಟಿಎಂಸಿ (TMC) ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶಿಸಿದೆ. ಆದರೆ, ಕಾವೇರಿ (Cauvery) ಭಾಗದ 4 ಜಲಾಶಯಗಳಲ್ಲಿ 66 ಟಿಎಂಸಿ ನೀರು ಮಾತ್ರ ಸಂಗ್ರಹ ಇರುವುದರಿಂದ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಕೆಪಿಸಿಸಿ (KPCC) ವಕ್ತಾರ ಎಂ. ಲಕ್ಷ್ಮಣ (M Lakshman) ಆಗ್ರಹಿಸಿದರು.
ಮೈಸೂರಿನ (Mysuru) ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಆರ್‌ಎಸ್ (KRS), ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳಲ್ಲಿ ಆ.29ರ ವೇಳೆಗೆ 209 ಟಿಎಂಸಿ ನೀರು ಶೇಖರಣೆ ಆಗಿರಬೇಕಿತ್ತು. ಆದರೆ, 156.8 ಟಿಎಂಸಿ ನೀರಿದೆ. ಸೆ.27ರಂದು ಮಂಡಳಿ ಸಭೆ ನಡೆಸಿದ್ದು, ಬಾಕಿ ಇರುವ 50 ಹಾಗೂ ಅಕ್ಟೋಬರ್ ತಿಂಗಳ ಕೋಟಾ 20 ಸೇರಿ 70 ಟಿಎಂಸಿ ನೀರು ಹರಿಸುವ ನಿರ್ಣಯಕ್ಕೆ ಕರ್ನಾಟಕ (Karnataka) ಒಪ್ಪಿಗೆ ಸೂಚಿಸಿದೆ. ಆದರೆ, ನಾಲ್ಕು ಜಲಾಶಯಗಳಲ್ಲಿ ಇಷ್ಟುನೀರಿಲ್ಲ. ಎಲ್ಲ ನೀರನ್ನು ತಮಿಳುನಾಡಿಗೆ ಬಿಟ್ಟರೆ ಇಲ್ಲಿನ ಜನರ ಗತಿ ಏನು ಎಂದು ಪ್ರಶ್ನಿಸಿದರು.
'ಸಿಎಂ ಹಾಗೂ ಸಚಿವರ ನಡುವೆ ಹೊಂದಾಣಿಕೆ ಇಲ್ಲ'
ಕೆಆರ್‌ಎಸ್ ಮತ್ತು ಕಬಿನಿ ಜಲಾಶಯದಿಂದ ಪ್ರತಿದಿನ 1 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಇದೇ ರೀತಿ ಬಿಟ್ಟರೆ ಡಿಸೆಂಬರ್ ವೇಳೆಗೆ ನೀರಿಗೆ ಹಾಹಾಕಾರ ಶುರುವಾಗುತ್ತದೆ. ಬೆಂಗಳೂರು, ಮೈಸೂರು, ರಾಮನಗರ, ಚಾಮರಾಜನಗರ, ಕೊಡಗು, ಹಾಸನ ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಒಂದು ವರ್ಷಕ್ಕೆ 40 ಟಿಎಂಸಿ ನೀರು ಬೇಕು. ನೀರಾವರಿಗಾಗಿ 110 ಟಿಎಂಸಿ ನೀರು ಬೇಕು. ಹೀಗಾಗಿ, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಅ.7ರಂದು ನಡೆಯುವ ಮಂಡಳಿಯ ಸಭೆಯಲ್ಲೂ ಆಕ್ಷೇಪ ವ್ಯಕ್ತಪಡಿಸಬೇಕು ಎಂದು ಒತ್ತಾಯಿಸಿದರು.
ತಮಿಳುನಾಡಿನಲ್ಲಿ ಬಿಜೆಪಿಯನ್ನು ಬೆಳೆಸಬೇಕೆಂಬ ಉದ್ದೇಶದಿಂದ ಕರ್ನಾಟಕದಿಂದ ನೀರನ್ನು ಹರಿಸಲಾಗುತ್ತಿದೆ. ಇದರಲ್ಲಿ ಬಿಜೆಪಿಯ (BJP) ಕೈವಾಡ ಇದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ (Siddaramaiah) ಅವರನ್ನು ಭಯೋತ್ಪಾದಕರೆಂದು ಕರೆದಿರುವ ಬಿಜೆಪಿ ರಾಜ್ಯಾಧ್ಯಕ್ಷರು ಕರ್ನಾಟಕದ ದೊಡ್ಡ ಜೋಕರ್. ಸಿದ್ದರಾಮಯ್ಯಗೆ ತಲೆ ಕೆಟ್ಟಿದೆ ಎಂದು ಸದಾನಂದಗೌಡ (Sadananda Gowda) ಹೇಳಿದ್ದಾರೆ. ಹಾಗಾದರೇ ಸದಾನಂದಗೌಡರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು.
'ಅಣ್ಣಾಮಲೈ ಇಟ್ಟುಕೊಂಡು ಬಿಜೆಪಿ ಹೈ ಡ್ರಾಮಾ'
ತಾಲಿಬಾನಿಗಳು ಮಹಿಳೆಯರಿಗೆ ಸ್ವಾತಂತ್ರ್ಯ ನೀಡುವುದಿಲ್ಲ. ಆರ್‌ಎಸ್‌ಎಸ್‌ನವರು ಮಹಿಳೆಯರಿಗೆ ಗೌರವ ನೀಡುವುದಿಲ್ಲ. ತಾಲಿಬಾನಿಗಳಿಗೆ ಇಸ್ಲಾಂ ಬಿಟ್ಟರೆ ಬೇರೆ ಧರ್ಮಗಳ ಬಗ್ಗೆ ಒಲವಿಲ್ಲ, ಸಹಿಸಿಕೊಳ್ಳುವುದಿಲ್ಲ. ಅದೇ ರೀತಿ ಆರ್‌ಎಸ್‌ಎಸ್‌ನವರು (RSS) ಬಿಜೆಪಿಯಲ್ಲಿರುವ ಹಿಂದೂಗಳನ್ನು ಮಾತ್ರ ಪ್ರೀತಿಸುತ್ತಾರೆ ಎಂದು ಆರೋಪಿಸಿದರು.
ಕೆಪಿಸಿಸಿ ವಕ್ತಾರೆ ಮಂಜುಳಾ ಮಾನಸ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರ್. ಶಿವಣ್ಣ ಮಾತನಾಡಿ, ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಮಾಜಿ ಮೇಯರ್ ಟಿ.ಬಿ. ಚಿಕ್ಕಣ್ಣ, ಮಾಜಿ ಉಪ ಮೇಯರ್ ಪುಷ್ಪವಲ್ಲಿ, ಮುಖಂಡರಾದ ನಾಗಭೂಷಣ್ ತಿವಾರಿ, ಈಶ್ವರ್ ಚಕ್ಕಡಿ, ಎನ್.ಎಸ್. ಗೋಪಿನಾಥ್, ಮಹೇಶ್ ಇದ್ದರು.