ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ, ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿದ್ದಾಗಲೇ ಹಿರಿಯ ವಕೀಲ ನಿಂಗಪ್ಪ ಸುದ್ದಿ (48) ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದು, ಈ ಘಟನೆ ವಕೀಲರ ವಲಯದಲ್ಲಿ ಆಘಾತ ಮೂಡಿಸಿದೆ.

ಕೊಪ್ಪಳ (ಏ.10): ನ್ಯಾಯಪೀಠದ ಮುಂದೆ ಕಕ್ಷಿದಾರನ ಪರವಾಗಿ ಗಂಭೀರವಾಗಿ ವಾದ ಮಂಡಿಸುತ್ತಿದ್ದಾಗಲೇ ಹಿರಿಯ ವಕೀಲರೊಬ್ಬರು ಹೃದಯಾಘಾತದಿಂದ ನ್ಯಾಯಾಲಯದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆಯ ವಿವರ:

ಕುಷ್ಟಗಿ ತಾಲೂಕಿನ ತಾವರಗೇರಾ ನಿವಾಸಿಯಾದ ಹಿರಿಯ ವಕೀಲ ನಿಂಗಪ್ಪ ಸುದ್ದಿ (48) ಮೃತಪಟ್ಟ ದುರ್ದೈವಿ. ಇಂದು ಬೆಳಿಗ್ಗೆ ಕುಷ್ಟಗಿ ಪಟ್ಟಣದ ಸೀನಿಯರ್ ಸಿವಿಲ್ ನ್ಯಾಯಾಲಯದಲ್ಲಿ ಆಸ್ತಿ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಾದ ಮಂಡನೆ ನಡೆಯುತ್ತಿತ್ತು. ಈ ವೇಳೆ ನಿಂಗಪ್ಪ ಅವರು ವಾದ ಮಂಡಿಸುತ್ತಿದ್ದಾಗಲೇ ಇದ್ದಕ್ಕಿದ್ದಂತೆ ತೀವ್ರ ಹೃದಯಾಘಾತ ಸಂಭವಿಸಿ ನೆಲಕ್ಕೆ ಕುಸಿದು ಬಿದ್ದಿದ್ದಾರೆ.

ಚಿಕಿತ್ಸೆ ಫಲಿಸದ ಸಾವು:

ತಕ್ಷಣವೇ ಅಲ್ಲಿದ್ದ ಸಹೋದ್ಯೋಗಿ ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ ಅವರನ್ನು ಕುಷ್ಟಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿಂಗಪ್ಪ ಅವರು ಕೊನೆಯುಸಿರೆಳೆದಿದ್ದಾರೆ. ಈ ಘಟನೆಯಿಂದ ನ್ಯಾಯಾಲಯದ ಆವರಣದಲ್ಲಿ ಕೆಲಕಾಲ ಆತಂಕ ಮತ್ತು ಶೋಕದ ವಾತಾವರಣ ನಿರ್ಮಾಣವಾಗಿತ್ತು. ಮೃತ ನಿಂಗಪ್ಪ ಅವರಿಗೆ ಈ ಹಿಂದೆ ಒಮ್ಮೆ ಹೃದಯಾಘಾತವಾಗಿತ್ತು ಎನ್ನಲಾಗಿದೆ. ಆ ಸಂದರ್ಭದಲ್ಲಿ ಅವರಿಗೆ ಹೃದಯಕ್ಕೆ ಸ್ಟಂಟ್ (Stent) ಕೂಡ ಅಳವಡಿಸಲಾಗಿತ್ತು. ಇಂದು ವಾದದ ಭರದಲ್ಲಿದ್ದಾಗ ಮತ್ತೆ ಹೃದಯಾಘಾತ ಸಂಭವಿಸಿರುವುದು ಸಾವಿಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಕೇವಲ 48ನೇ ವಯಸ್ಸಿಗೆ ವಕೀಲರೊಬ್ಬರನ್ನು ಕಳೆದುಕೊಂಡಿರುವುದು ತಾವರಗೇರಾ ಮತ್ತು ಕುಷ್ಟಗಿ ಭಾಗದ ವಕೀಲರ ವಲಯದಲ್ಲಿ ತೀವ್ರ ಹಿರಿಯ ಆಘಾತ ಮೂಡಿಸಿದೆ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಮೃತರ ಕುಟುಂಬದವರ ಕ್ರಂದನ ಮುಗಿಲು ಮುಟ್ಟಿದೆ.