ಕೊಪ್ಪಳ(ಏ.18): ತಬ್ಲೀಘಿ ಪ್ರಕರಣ, ವಿದೇಶದಿಂದ ಬಂದವರು ಹಾಗೂ ಮುಂಬೈ ಮಹಿಳೆಯ ಪ್ರಕರಣಗಳಲ್ಲಿಯೂ ನೆಗಟಿವ್‌ ಬಂದಿದ್ದರೂ ಕೊಪ್ಪಳ ನಿರಾಳತೆಯಿಂದ ಮೈಮರೆಯುವಂತೆ ಇಲ್ಲ. ಪಕ್ಕದ ಹೊಸಪೇಟೆ ಕೊರೋನಾ ಹಾಟ್‌ಸ್ಪಾಟ್‌ ಆಗುತ್ತಿರುವುದರಿಂದ ಇದೊಂದು ರೀತಿಯಲ್ಲಿ ಮಗ್ಗಲು ಮುಳ್ಳಾದಂತೆ ಆಗಿದೆ.

ಈಗಾಗಲೇ ಮೊದಲ ಮೂರು ಪ್ರಕರಣ ಹಾಗೂ ಶುಕ್ರವಾರ ಬೆಳಕಿಗೆ ಬಂದ 7 ಪ್ರಕರಣಗಳು ಸೇರಿ ಗಡಿಗೆ ಹೊಂದಿಕೊಂಡಿರುವ ಹೊಸಪೇಟೆಯಲ್ಲಿಯೇ ಹತ್ತು ಕೊರೋನಾ ಪಾಸಿಟಿವ್‌ ಪ್ರಕರಣ ಬಂದಿರುವುದರಿಂದ ಜಿಲ್ಲಾಡಳಿತ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಅನುಸರಿಸಲೇಬೇಕು.

ಒಂದೇ ದಿನ 66 ಜನರ ಸ್ಯಾಂಪಲ್‌ ಲ್ಯಾಬ್‌ಗೆ: ಆತಂಕದಲ್ಲಿ ಕೊಪ್ಪಳ ಜನತೆ!

ಇಷ್ಟೆಲ್ಲಾ ಕಟ್ಟುನಿಟ್ಟಿನ ಲಾಕ್‌ಡೌನ್‌ ಇದ್ದರೂ ಹೊಸಪೇಟೆ ಮತ್ತು ಕೊಪ್ಪಳ ನಡುವೆ ಸಂಚಾರ ಇದ್ದೇ ಇದೆ. ಇದರಲ್ಲಿ ಕೆಲವೊಂದು ಅವಶ್ಯಕ ವಸ್ತುಗಳು ಸರಬರಾಜು ಆಗಿದ್ದರೆ ಇನ್ನು ಕೆಲವರು ಗಡಿಗೆ ಹೊಂದಿಕೊಂಡಿರುವುದರಿಂದ ಪರ್ಯಾಯ ಮಾರ್ಗದಲ್ಲಿಯಾದರೂ ಕೊಪ್ಪಳ ಮತ್ತು ಹೊಸಪೇಟೆ ಮಧ್ಯೆ ಓಡಾಟ ನಡೆಸುತ್ತಾರೆ. ಇನ್ನು ಹೊಸಪೇಟೆ ಮತ್ತು ಗಂಗಾವತಿ ನಡುವೆಯೂ ಬಹುದೊಡ್ಡ ನಂಟು ಇದೆ. ಹೀಗಾಗಿ, ಈಗ ಕೊಪ್ಪಳ ಜಿಲ್ಲಾಡಳಿತ ಎಷ್ಟೇ ಎಚ್ಚರಿಕೆಯನ್ನು ವಹಿಸಿದರೂ ಕಡಿಮೆಯೇ ಎಂದು ವಿಶ್ಲೇಷಣೆ ಮಾಡಲಾಗುತ್ತದೆ.

215 ಪ್ರಕರಣ ನೆಗೆಟಿವ್‌

ವಿಶೇಷ ಪ್ರಕರಣದಡಿ ಕಳುಹಿಸಲಾಗಿದ್ದ 235ರಲ್ಲಿ ಇದುವರೆಗೂ 215 ಪ್ರಕರಣಗಳ ವರದಿಯೂ ನೆಗಟಿವ್‌ ಎಂದು ಬಂದಿದ್ದು, ಇನ್ನು ಕೇವಲ 20 ಮಾತ್ರ ಬರಬೇಕಾಗಿದೆ. ಮುಂಬೈ ಮಹಿಳೆಯ ಪ್ರಕರಣವೂ ಸೇರಿದಂತೆ ಇದುವರೆಗೂ ಕಳುಹಿಸಿದ ಪ್ರಯೋಗಾಲಯ ಸ್ಯಾಂಪಲ್‌ ಎಲ್ಲವೂ ನೆಗಟಿವ್‌ ಎಂದು ಬಂದಿರುವುದು ಜನರಲ್ಲಿ ನಿರಾಳತೆಯನ್ನು ಹೆಚ್ಚಿಸುವಂತೆ ಮಾಡಿದೆ.

ಇದಲ್ಲದೆ ಈ ಮೊದಲು ಕ್ವಾರಂಟೈನ್‌ ಮಾಡಿದವರು ಆರೋಗ್ಯವಾಗಿಯೇ ಇದ್ದಾರೆ. ಇದುವರೆಗೂ ಯಾರಲ್ಲಿಯೂ ಸೋಂಕು ಕಂಡು ಬಂದಿಲ್ಲ. ತಬ್ಲೀಘಿಯ 36 ಪ್ರಕರಣಗಳು ಹಾಗೂ ವಿದೇಶದಿಂದ, ನಾನಾ ರಾಜ್ಯದಿಂದ ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ 80 ಜನರ ಪೈಕಿ 75 ಜನರು ಈಗಾಗಲೇ 28 ದಿನಗಳ ಕ್ವಾರಂಟೈನ್‌ ಮುಗಿಸಿದ್ದಾರೆ. ಈಗ ಆ ಪೈಕಿ ಉಳಿದಿರುವುದು ಕೇವಲ 5 ಜನರು ಮಾತ್ರ. ಉಳಿದಂತೆ ಎಲ್ಲರೂ ಆರೋಗ್ಯವಾಗಿಯೇ ಇದ್ದಾರೆ.

ದೊಡ್ಡ ಸವಾಲು

ಇಷ್ಟುದಿನಗಳ ಕಾಲ ಕಾಪಾಡಿಕೊಂಡು ಬಂದಿದ್ದರೂ ಮುಂಬೈ ಮಹಿಳೆಯೋರ್ವಳ ಪಾಸ್‌ ಪ್ರಕರಣದಲ್ಲಿ ಮಣ್ಣಾಯಿತು ಎನ್ನುವ ಆತಂಕವೂ ದೂರವಾಗಿದೆ. ಆದರೂ ಮುಂಬೈ ಮಹಿಳೆ ಶಿಖಾ ಶೇಖ್‌ ಇನ್ನು ಐಸೋಲೇಶನ್‌ನಲ್ಲಿಯೇ ಇದ್ದಾಳೆ. ಆದರೆ, ಈಗ ಹೊಸಪೇಟೆಯಲ್ಲಿ ಕೊರೋನಾ ಪ್ರಕರಣಗಳು ಪದೇ ಪದೇ ಪತ್ತೆಯಾಗುತ್ತಿರುವುದು ಹಾಗೂ ಸಂಖ್ಯೆ ಹೆಚ್ಚಳವಾಗುತ್ತಿರುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.