ನರಸಾಪುರ ಗ್ರಾಪಂನಲ್ಲಿ ಭ್ರಷ್ಟಾಚಾರ ಮತ್ತು ಒತ್ತುವರಿ ದೂರುಗಳ ಹಿನ್ನೆಲೆಯಲ್ಲಿ ಉಪಲೋಕಾಯುಕ್ತ ಬಿ.ವೀರಪ್ಪ ದಿಢೀರ್ ಭೇಟಿ ನೀಡಿದರು. ಪಿಡಿಒ ಹಾಗೂ ಇತರೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕೋಲಾರ: ನರಸಾಪುರ ಗ್ರಾಪಂನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ರಾಜಕಾಲುವೆ ಒತ್ತುವರಿ ಮತ್ತು ಕೆರೆಗೆ ಕೊಳಚೆ ನೀರು ಹರಿಯುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಶುಕ್ರವಾರ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಪಿಡಿಒ ಮುನಿರಾಜುರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಗ್ರಾಪಂ ಕಚೇರಿಗೆ ಭೇಟಿ ನೀಡಿದ ವೀರಪ್ಪ ಅವರು ಮೊದಲು ಹಾಜರಾತಿ ಪುಸ್ತಕ ಪರಿಶೀಲಿಸಿದರು. ಹಲವರು ಸಹಿ ಹಾಕದೇ ಇರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು. ನಂತರ ಪಿಡಿಒ ಮುನಿರಾಜು ಅವರ ಮೊಬೈಲ್ ಪಡೆದು ಹಣದ ವಹಿವಾಟನ್ನು ಪರಿಶೀಲಿಸಿದರು. ಪಿಡಿಒ ಹಾಗೂ ಅವರ ಪತ್ನಿಯ ಬ್ಯಾಂಕ್ ಸ್ಟೇಟ್ಮೆಂಟ್ ಕಳಿಸುವಂತೆ ಖಡಕ್ ಸೂಚನೆ ನೀಡಿದರು.
ಲೋಕಾಯುಕ್ತ ನಂಬರ್ ಬೋರ್ಡ್ ಯಾಕಿಲ್ಲ?
ಪಂಚಾಯಿತಿ ಕಟ್ಟಡದಲ್ಲಿ ಲೋಕಾಯುಕ್ತ ಮೊಬೈಲ್ ನಂಬರ್ ಫಲಕ ಯಾಕೆ ಹಾಕಿಸಿಲ್ಲ ಎಂದು ಪ್ರಶ್ನಿಸಿದ ವೀರಪ್ಪ ಅವರು, ನೆಪ ಹೇಳಿದರೆ ಕಪಾಳಕ್ಕೆ ಹೊಡೆಯುತ್ತೇನೆ. ಕಲಬುರಗಿ, ರಾಯಚೂರಿಗೆ ಹೋಗುತ್ತೀಯಾ. ಪಂಚಾಯಿತಿ ನಿಮ್ಮ ಅಪ್ಪಂದು ಅಂದುಕೊಂಡಿದ್ದೀಯಾ? ಎಂದು ಗುಡುಗಿದರು. ಅವರ ಆಕ್ರೋಶಕ್ಕೆ ಅಧಿಕಾರಿಗಳು ತತ್ತರಿಸಿದರು.
ಅಧಿಕಾರಿಗಳ ಮೇಲೆ ಮುಗಿಬಿದ್ದ ವೀರಪ್ಪ
ನರಸಾಪುರದಲ್ಲಿ ರಾಜಕಾಲುವೆ ಮೇಲೆ ಸೊಸೈಟಿ ಕಟ್ಟಡದ ಕಾಂಪೌಂಡ್ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ವೀರಪ್ಪ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮೊದಲು ಪಿಡಿಒ ಮುನಿರಾಜು ವಿರುದ್ಧ ಹರಿಹಾಯ್ದ ಅವರು, ಒತ್ತುವರಿ ಕಣ್ಣಿಗೆ ಕಾಣಿಸುವುದಿಲ್ಲವೇ? ಹಣ ಪಡೆದು ಜೀವನ ನಡೆಸುವುದಷ್ಟೇ ನಿನ್ನ ಕೆಲಸನಾ? ಎಂದು ಪ್ರಶ್ನಿಸಿದರು. ನಂತರ ಸಣ್ಣ ನೀರಾವರಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಮೇಲೂ ಮುಗಿಬಿದ್ದರು.
ರೈತ ನಾಯಕ ಸಿ.ಬೈರೇಗೌಡ ಸಹಕಾರ ಭವನದ ಹಿಂಭಾಗದಲ್ಲಿರುವ ಪಶು ಇಲಾಖೆ ಆಸ್ಪತ್ರೆಗೆ ಹೋಗಲೂ ಸರಿಯಾಗಿ ಜಾಗವಿಲ್ಲ ಎಂದು ಗ್ರಾಮಸ್ಥರು ದೂರಿದರು.
ನರಸಾಪುರ ಕೆರೆಗೆ 6 ಕಡೆಯಿಂದ ಕೊಳಚೆ ನೀರು
ನರಸಾಪುರ ಕೆರೆಯಲ್ಲಿ ಬೆಳೆದಿರುವ ಜೊಂಡನ್ನು ತೆರವುಗೊಳಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ವೀರಪ್ಪ ಸೂಚನೆ ನೀಡಿದರು. ಈ ವೇಳೆ ನರಸಾಪುರ ಸೇರಿದಂತೆ ವಿವಿಧ 6 ಕಡೆಯಿಂದ ತ್ಯಾಜ್ಯ ನೀರು ಕೆರೆಗೆ ಹರಿದು ಬರುತ್ತಿರುವ ಬಗ್ಗೆ ಅಧಿಕಾರಿಗಳು ಗಮನಕ್ಕೆ ತಂದರು. ಇದರಿಂದಲೇ ಜೊಂಡು ಬೆಳೆದಿದೆ ಎಂದರು. ಕೆರೆ ಸ್ವಚ್ಛ ಮಾಡಲು ಕನಿಷ್ಠ ಎರಡು ತಿಂಗಳು ಬೇಕು ಎಂದರು.
ಆಗ ವೀರಪ್ಪ, "ಯಾವುದೇ ಕಾರಣಕ್ಕೂ ಕೊಳಚೆ ನೀರನ್ನು ಕೆರೆಗೆ ಹರಿಸಬಾರದು. ಪಂಚಾಯಿತಿ ಮಟ್ಟದಲ್ಲಿ ಹಿಂಗುಗುಂಡಿ ಮಾಡಿಕೊಳ್ಳಬೇಕು" ಎಂದು ಖಡಕ್ ಸೂಚನೆ ನೀಡಿದರು.
ಲಕ್ಷ್ಮಿಸಾಗರ ಕೆರೆಗೆ ಭೇಟಿ, ಕೆ.ಸಿ.ವ್ಯಾಲಿ ನೀರು ಪರಿಶೀಲನೆ
ಇದಕ್ಕೂ ಮೊದಲು ಉಪಲೋಕಾಯುಕ್ತರು ಲಕ್ಷ್ಮಿಸಾಗರ ಕೆರೆಗೆ ತೆರಳಿ ಕೆ.ಸಿ.ವ್ಯಾಲಿ ನೀರಿನ ಸ್ಥಿತಿಗತಿ ಪರಿಶೀಲಿಸಿದರು. ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸುವ ಉದ್ದೇಶದಿಂದ ಕೆ.ಸಿ.ವ್ಯಾಲಿ ಹರಿದು ಹೋಗಿರುವ ಗ್ರಾಮಗಳಲ್ಲಿನ ಹಾಲು, ಕೊಳವೆಬಾವಿ ನೀರು, ತರಕಾರಿ ಮಾದರಿ ಪಡೆದು ಕಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆ.ಸಿ.ವ್ಯಾಲಿ ನೀರಿನ ಪ್ರಮಾಣ ಹೆಚ್ಚಿಸಬೇಕು ಹಾಗೂ ಬೇಗನೇ ಶ್ರೀನಿವಾಸಪುರ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಬೇಕು ಎಂದು ಹೇಳಿದರು. ಲಕ್ಷ್ಮಿಸಾಗರ ಕೆರೆ ಸ್ವಚ್ಛಗೊಳಿಸಬೇಕು, ಒತ್ತುವರಿ ಆಗಿದ್ದರೆ ತೆರವುಗೊಳಿಸಬೇಕು ಎಂದು ಬೆಳ್ಳೂರು ಪಿಡಿಒಗೆ ಸೂಚನೆ ನೀಡಿದರು














