ಅಕ್ರಮ ಸಾಗುವಳಿ ಆರೋಪದ ಮೇಲೆ ಕೋಲಾರ ತಹಸೀಲ್ದಾರ್ ಅವರು 300ಕ್ಕೂ ಅಧಿಕ ದಾಳಿಂಬೆ ಮರಗಳನ್ನು ಕಡಿದ ಪ್ರಕರಣದಲ್ಲಿ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಯಾವುದೇ ಮುನ್ಸೂಚನೆ ಇಲ್ಲದೆ ರಜಾ ದಿನಗಳಲ್ಲಿ ಏಕಾಏಕಿ ಈ ಕ್ರಮ ಕೈಗೊಂಡಿದ್ದಕ್ಕಾಗಿ ನ್ಯಾಯಾಲಯವು ತಹಸೀಲ್ದಾರ್ಗೆ ತರಾಟೆ ತೆಗೆದುಕೊಂಡಿದ್ದು, ಮುಂದಿನ ಆದೇಶದವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಸೂಚಿಸಿದೆ.
ಬೆಂಗಳೂರು: ಅಕ್ರಮ ಸಾಗುವಳಿ ಆರೋಪದ ಹಿನ್ನೆಲೆಯಲ್ಲಿ ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿ ವ್ಯಾಪ್ತಿಯ ಜಮೀನೊಂದರಲ್ಲಿ ಬೆಳೆದಿದ್ದ 300ಕ್ಕೂ ಅಧಿಕ ದಾಳಿಂಬೆ ಮರಗಳನ್ನು ಕಡಿದ ಕೋಲಾರ ತಹಸೀಲ್ದಾರ್ಗೆ ಚಾಟಿ ಬೀಸಿರುವ ಹೈಕೋರ್ಟ್, ಪ್ರಕರಣ ಸಂಬಂಧ ಸದ್ಯ ಯಾವುದೇ ಕ್ರಮಕ್ಕೆ ಮುಂದಾಗದಂತೆ ತಾಕೀತು ಮಾಡಿದೆ.ತಹಸೀಲ್ದಾರ್ ಕ್ರಮ ಪ್ರಶ್ನಿಸಿ ಜಮೀನು ಸಾಗುವಳಿದಾರೆ ಕುಮಾರಿ ಟಿ.ಎನ್.ಮೋನಿಕಾ ಸಲ್ಲಿಸಿದ್ದ ಅರ್ಜಿಯನ್ನು ರಜಾ ದಿನವಾದ ಸೋಮವಾರದಂದು ತುರ್ತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರ ಪೀಠ ಕೋಲಾರ ತಹಸೀಲ್ದಾರ್ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಅಲ್ಲದೆ, ಪ್ರಕರಣ ಸಂಬಂಧ ವಿವಾದಿತ ಜಮೀನಿನ ವಿಚಾರದಲ್ಲಿ ಸದ್ಯ ಯಾವುದೇ ಕ್ರಮಕ್ಕೆ ಮುಂದಾಗಬಾರದು. ನ್ಯಾಯಾಲಯದ ಮುಂದಿನ ಆದೇಶದವರೆಗೆ ವಿವಾದಿತ ಆಸ್ತಿಗೆ ಅಧಿಕಾರಿಗಳು ಪ್ರವೇಶ ಮಾಡಬಾರದು ಎಂದು ಸೂಚಿಸಿತು. ಹಾಗೆಯೇ, ರಾಜ್ಯ ಸರ್ಕಾರ, ಕೋಲಾರ ಜಿಲ್ಲಾಡಳಿತ, ತಹಸೀಲ್ದಾರ್ ಮತ್ತಿತರರಿಗೆ ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆಯನ್ನು ನ.13ಕ್ಕೆ ಮುಂದೂಡಿತು.
ರಜೆ ದಿನಗಳಲ್ಲಿ ಮರಗಳಿಗೆ ಏಟು
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ, ಅರ್ಜಿದಾರರ ಅಜ್ಜ ಹಲವು ದಶಕಗಳಿಂದ ಸಾಗುವಳಿ ಮಾಡುತ್ತಿದ್ದಾರೆ. 2023ರಲ್ಲಿ ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದು, ಅದು ಪರಿಶೀಲನೆಯಲ್ಲಿದೆ. ಈ ಮಧ್ಯೆ ಯಾವುದೇ ನೋಟಿಸ್ ಕೊಡದೆ ದೀಪಾವಳಿ ಹಬ್ಬದ ಕಾರಣ ಸಾಲು-ಸಾಲು ರಜೆ ಇರುವುದನ್ನು ಬಳಸಿಕೊಂಡು ನ.7ರಂದು ಮಧ್ಯಾಹ್ನ 3 ಗಂಟೆಗೆ ತಹಸೀಲ್ದಾರ್ ಪೊಲೀಸರು ಹಾಗೂ ಇತರ ಆಡಳಿತ ಯಂತ್ರದ ಜೊತೆ ಜಮೀನಿಗೆ ನುಗ್ಗಿ ಎರಡು ವರ್ಷ ಹಳೆಯ 300ಕ್ಕೂ ಅಧಿಕ ದಾಳಿಂಬೆ ಮರಗಳನ್ನು ಕಡಿದು ಹಾಕಿದ್ದಾರೆ.
ನ.15 ಮತ್ತು 16ರಂದು ಅರ್ಜಿದಾರರ ಮದುವೆ ಇರುವುದರಿಂದ ಅಲ್ಲಿವರೆಗೂ ಕ್ರಮ ಬೇಡ ಎಂದು ಕೋರಿದರೂ ತಹಸೀಲ್ದಾರ್ ಕೇಳಲಿಲ್ಲ ಎಂದು ತಿಳಿಸಿದರು.
ಅವಸರ ಏನಿತ್ತು?
ಆಗ ಪೀಠ, ದೀಪಾವಳಿ ಹಬ್ಬಕ್ಕೆ ಸಾಲು-ಸಾಲು ಸರ್ಕಾರಿ ರಜೆ ಇರುವುದನ್ನು ತಿಳಿದು ತಹಸೀಲ್ದಾರ್ಗೆ ಆತುರದ ಕ್ರಮ ಜರುಗಿಸಿದ್ದಾರೆ. ಹೀಗಾಗಿ ಅರ್ಜಿದಾರರು ರಜೆಯ ದಿನದಂದು ಕೋರ್ಟ್ ಬಾಗಿಲು ತಟ್ಟಿದ್ದಾರೆ. ಇದರಿಂದಾಗಿ ಹೈಕೋರ್ಟ್ ನಲ್ಲಿ ನೂರು ಜನ ಕೆಲಸ ಮಾಡುವಂತೆ ಆಗಿದೆ. ಅರ್ಜಿದಾರರಿಗೆ ಕಾನೂನು ಮೊರೆ ಹೋಗುವುದಕ್ಕೆ ಅವಕಾಶ ನೀಡದಂತೆ ಏಕಾಏಕಿ ಕ್ರಮ ಕೈಗೊಳ್ಳುವ ಅವಸರ ಏನಿತ್ತು? ನ.7ರಂದು ತಹಸೀಲ್ದಾರ್ ಕ್ರಮ ಕೈಗೊಳ್ಳದಿದ್ದರೆ ಸ್ವರ್ಗವೇನು ಧರೆಗೆ ಇಳಿದು ಬರುತ್ತಿರಲಿಲ್ಲ ಎಂದು ಪೀಠ ತರಾಟೆಗೆ ತೆಗೆದುಕೊಂಡಿತು.













