Shramik Nivas policy Karnataka: ರಾಜ್ಯ ಸರ್ಕಾರವು ಕಾರ್ಮಿಕರಿಗಾಗಿ 'ಶ್ರಮಿಕ್ ನಿವಾಸ್' ನೀತಿಯನ್ನು ಜಾರಿಗೊಳಿಸಿದ್ದು, ಕೈಗಾರಿಕೆಗಳ ಸಮೀಪದಲ್ಲೇ ಗುಣಮಟ್ಟದ ವಸತಿ ಸೌಕರ್ಯ ಒದಗಿಸಲಿದೆ. ಮೊದಲ ಹಂತದಲ್ಲಿ 30 ಸಾವಿರ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ.
ಬೆಂಗಳೂರು (ನ.15): ಕಾರ್ಮಿಕರಿಗೆ ತಾವು ಕೆಲಸ ಮಾಡುವ ಕೈಗಾರಿಕೆಗಳ ಸಮೀಪದಲ್ಲೇ ಗುಣಮಟ್ಟದ ವಸತಿ ಸೌಕರ್ಯ ಕಲ್ಪಿಸುವ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಶ್ರಮಿಕ್ ನಿವಾಸ್ ನೀತಿ ಜಾರಿಗೊಳಿಸಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ನೂತನ ನೀತಿ ಅನುಷ್ಠಾನಕ್ಕೆ ಚಾಲನೆ ನೀಡಿದರು.
ಕಾರ್ಮಿಕರಿಗಾಗಿ ಫ್ಯಾಕ್ಟರಿ ಪಕ್ಕದಲ್ಲೇ ವಸತಿ ವ್ಯವಸ್ಥೆ
ಈ ಕುರಿತು ಮಾಹಿತಿ ನೀಡಿರುವ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಶ್ರಮದಿಂದ ಕೂಡಿರುವ ಕೆಲಸ ಮಾಡುವ ಉದ್ಯೋಗಿಗಳಿಗೆ ನೆಮ್ಮದಿ ನೀಡುವಂತಹ ಸೂರಿನ ವ್ಯವಸ್ಥೆ ಮಾಡುವುದು ಸರ್ಕಾರದ ಉದ್ದೇಶ. ಇದರಿಂದ ನಿತ್ಯ ಬೇರೆ ಊರುಗಳಿಂದ ಸಂಚರಿಸುವುದು ತಪ್ಪಲಿದೆ ಹಾಗೂ ಉತ್ಪಾದಕತೆ ಹೆಚ್ಚಲಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಹೊಂದಿರುವ ಕೈಗಾರಿಕೆಗಳ ಸಮೀಪದಲ್ಲಿ ಡಾರ್ಮಿಟರಿ, ಒಂದು ಮತ್ತು ಎರಡು ರೂಮಿನ ಮನೆಗಳನ್ನು ನಿರ್ಮಿಸಿ ಕೈಗೆಟಕುವ ದರದಲ್ಲಿ ಅಥವಾ ಉಚಿತವಾಗಿ ವಾಸಕ್ಕೆ ಕೊಡಲಾಗುವುದು ಎಂದಿದ್ದಾರೆ.
30 ಸಾವಿರ ಮನೆಗಳ ನಿರ್ಮಾಣ:
ರಾಜ್ಯದ ಕೈಗಾರಿಕಾ ಪ್ರದೇಶಗಳು ಬೃಹತ್ ಹೂಡಿಕೆಗೆ ಅನುಕೂಲವಾಗುವಂತೆ ಮತ್ತು ಆಕರ್ಷಣೀಯ ಸೌಕರ್ಯಗಳನ್ನು ಹೊಂದಿರಬೇಕು ಎನ್ನುವುದು ನಮ್ಮ ಬಯಕೆ. ಶ್ರಮಿಕ್ ನಿವಾಸ್ ಯೋಜನೆಯಡಿ ಮೊದಲ ಹಂತದಲ್ಲಿ 30 ಸಾವಿರ ಮನೆಗಳನ್ನು ನಿರ್ಮಿಸಲಾಗುವುದು. 100 ಉದ್ಯೋಗಿಗಳಿಗೆ ವಸತಿ ಸೌಕರ್ಯ ನೀಡಿದಲ್ಲಿ ಒಂದು ಕೋಟಿ ರು. ಸಬ್ಸಿಡಿ ಕೊಡಲಾಗುತ್ತದೆ. ಅದೇ ರೀತಿ ಒಂದು ಸಾವಿರ ಉದ್ಯೋಗಿಗಳಿಗೆ ಸೂರು ಕಲ್ಪಿಸಿದಲ್ಲಿ 10 ಕೋಟಿ ರು. ಮತ್ತು 2500 ನೌಕರರಿಗೆ ವಸತಿ ಸೌಕರ್ಯ ಒದಗಿಸಿದಲ್ಲಿ ಗರಿಷ್ಠ 25 ಕೋಟಿ ರು. ಸಬ್ಸಿಡಿ ಕೊಡಲಾಗುತ್ತದೆ. ಈ ಮನೆಗಳಲ್ಲಿ ಉದ್ಯೋಗಿಗಳು ವಾಸ ಮಾಡಲು ಆರಂಭಿಸಿದ ದಿನದಿಂದ ಪರಿಗಣಿಸಿ, ಸಬ್ಸಿಡಿ ಹಣವನ್ನು ಮೂರು ವರ್ಷಗಳಲ್ಲಿ ಮೂರು ಸಮಾನ ಕಂತುಗಳಲ್ಲಿ ನೀಡಲಾಗುವುದು. ಬೃಹತ್ ಕೈಗಾರಿಕೆಗಳು ಅದನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಶ್ರಮಿಕ್ ನಿವಾಸ್ ಯೋಜನೆಯಡಿ ವಸತಿ ಸುಸಜ್ಜಿತ ವಸತಿ ನಿರ್ಮಾಣ
ಶ್ರಮಿಕ್ ನಿವಾಸ್ ಯೋಜನೆ ಅಡಿ ಗರಿಷ್ಠ 10 ಚದರ ಮೀ. ವಿಸ್ತೀರ್ಣದ ಡಾರ್ಮಿಟರಿ, ಗರಿಷ್ಠ 30 ಚದರ ಮೀ. ವಿಸ್ತೀರ್ಣದವರೆಗೆ ಸಿಂಗಲ್ ಬೆಡ್ ರೂಂ ಇರುವಂತಹ, ಗರಿಷ್ಠ 60 ಚದರ ಮೀ. ವಿಸ್ತೀರ್ಣದ ಡಬ್ಬಲ್ ಬೆಡ್ರೂಂ ಮನೆ ಕಟ್ಟಲು ಅವಕಾಶವಿದೆ. ಆದರೆ, ಉದ್ಯಮಿಗಳು ಕೆಐಎಡಿಬಿ ಮೂಲಕ ತಮಗೆ ಮಂಜೂರಾಗಿರುವ ನಿವೇಶನದ ಒಳಗೇ ನಿರ್ಮಿಸುವುದು ಕಡ್ಡಾಯ ಎಂದು ಮಾಹಿತಿ ನೀಡಿದ್ದಾರೆ.
ಯೋಜನೆ ಅಡಿ ವರ್ಷಕ್ಕೆ ಗರಿಷ್ಠ 10 ಸಾವಿರ ಕೆಲಸಗಾರರಿಗೆ ವಸತಿ ಸೌಕರ್ಯ ಒದಗಿಸಬೇಕೆನ್ನುವುದು ಗುರಿಯಾಗಿದೆ. ಹೆಚ್ಚಿನ ಕೆಲಸಗಾರರ ಕೋರಿಕೆಗಳನ್ನು ಮುಂದಿನ ವರ್ಷದಲ್ಲಿ ಪರಿಗಣಿಸಲಾಗುವುದು. ಯೋಜನೆಯಂತೆ ಕಂಪೆನಿಯ ಕಾಯಂ ಉದ್ಯೋಗಿಗಳು ಮಾತ್ರ ಈ ಅನುಕೂಲ ಪಡೆಯಲು ಅರ್ಹರಾಗಿರುತ್ತಾರೆ. ಕೆಲಸಗಾರರ ಅವಲಂಬಿತರನ್ನು ಅದರಡಿ ಪರಿಗಣಿಸಲಾಗುವುದಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ್ ವಿವರಿಸಿದ್ದಾರೆ.














