M Ivan Prince: ಕೇವಲ ಒಂದು ವರ್ಷ ಮೂರು ತಿಂಗಳ ವಯಸ್ಸಿನ ಎಂ.ಇವಾನ್ ಪ್ರಿನ್ಸ್ 100 ಮೀಟರ್ ಓಟವನ್ನು ಕೇವಲ 57 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ್ದಾನೆ. ಈ ಅದ್ಭುತ ಸಾಧನೆಗಾಗಿ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾನೆ. ಬಾಲಕನ ತಾಯಿ ಕಾವೇರಿ ಕೂಡ ಕ್ರೀಡಾಪಟುವಾಗಿದ್ದಾರೆ.

ಸೋಮವಾರಪೇಟೆ (ಕೊಡಗು): ಕೇವಲ ಒಂದು ವರ್ಷ ಮೂರು ತಿಂಗಳ ವಯಸ್ಸಿನಲ್ಲೇ 100 ಮೀಟರ್ ಓಟವನ್ನು ಕೇವಲ 57 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ ಎಂ.ಇವಾನ್ ಪ್ರಿನ್ಸ್(M.Ivan Prince) ನ್ಯಾಷನಲ್ ಬುಕ್ ಆಫ್ ರೆಕಾರ್ಡ್‌(National Book of Records)ನಲ್ಲಿ ಸ್ಥಾನ ಪಡೆದು ಗಮನ ಸೆಳೆದಿದ್ದಾನೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ಜನಿಸಿರುವ ಮಗುವಿನ ಸಾಧನೆ ಅಚ್ಚರಿ

2025ರ ಏ.4 ರಂದು ಜನಿಸಿರುವ ಇವಾನ್ ಪ್ರಿನ್ಸ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಲಾಲ್‌ಬಾಗ್ ದಾಸರಹಳ್ಳಿ ಗ್ರಾಮ(Lalbagh Dasarahalli village)ದಲ್ಲಿ ವಾಸವಾಗಿದ್ದಾನೆ. ಈತ ಕೊಡಗು(Kodagu) ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗೆಜ್ಜೆಹಣಕೋಡು ಗ್ರಾಮ(Gejjehanakodu Village)ದ ಎಚ್.ಎಲ್.ಕಾವೇರಿ, ಮಹೇಂದ್ರ ಕುಮಾರ್ ದಂಪತಿ(HL Kaveri and Mahendra Kumar)ಯ ಪುತ್ರ.

ತಾಯಿ ಕಾವೇರಿ ಕೂಡ ಹಾಕಿ ಕ್ರೀಡಾಪಟು

ಬಾಲಕನ ತಾಯಿ ಕಾವೇರಿ ಅವರು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾಪಟುವಾಗಿದ್ದು, ಕ್ರೀಡಾ ಹಿನ್ನೆಲೆಯ ಕುಟುಂಬದಲ್ಲಿ ಬೆಳೆದಿರುವ ಇವಾನ್ ಚಿಕ್ಕ ವಯಸ್ಸಿನಲ್ಲಿಯೇ ಓಟದ ಸ್ಪರ್ಧೆಯಲ್ಲಿ ವಿಶೇಷ ಆಸಕ್ತಿ ತೋರಿದ್ದಾನೆ. ಇತ್ತೀಚೆಗೆ ಕಂಠೀರವ ಸ್ಟೇಡಿಯಂನಲ್ಲಿ ತನ್ನ ಕ್ರೀಡಾ ಚಟುವಟಿಕೆ ಹಾಗೂ ಸಾಧನೆಯ ಮೂಲಕ ಗಮನ ಸೆಳೆದಿರುವ ಬಾಲಕ ೧೦೦ ಮೀಟರ್ ಓಟದ ಸಾಧನೆ ನ್ಯಾಷನಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ.