ಕೋಲಾರ(ಆ.01): ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಸರ್ಕಾರ ರೈತರಿಗೆ ಉಚಿತವಾಗಿ ವಿತರಿಸಲು ಪೂರೈಸಿದ್ದ ಜೋಳದ ಕಿಟ್‌ಗಳನ್ನು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಅಕ್ರಮವಾಗಿ ದಾಸ್ತಾನು ಮಾಡಿ ದುಬಾರಿ ಬೆಲೆಗೆ ಮಾರಾಟ ಮಾಡುವಾಗ ರೈತರಿಗೆ ಸಿಕ್ಕುಬಿದ್ದಿರುವ ಘಟನೆ ಬಂಗಾರಪೇಟೆಯಲ್ಲಿ ನಡೆದಿದೆ.

ಸದರಿ ಅಧಿಕಾರಿಯನ್ನು ಅಮಾನತು ಮಾಡುವಂತೆ ನೂರಾರು ರೈತರು ಕಾಮಸಮುದ್ರ ರೈತ ಸಂಪರ್ಕ ಕೇಂದ್ರದ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು. ತಾಲೂಕಿನ ಕಾಮಸಮುದ್ರ ಹೋಬಳಿ ಕೇಂದ್ರದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ಎಎಒ ಆಗಿ ಅಧಿಕಾರವಹಿಸಿಕೊಂಡ ಬಳಿಕ ಶ್ರೀಧರ್‌ ಸರ್ಕಾರದಿಂದ ರೈತರಿಗೆ ಬರುವ ಯಾವುದೇ ಸೌಲಭ್ಯಗಳನ್ನು ತಲುಪಿಸದೆ ಅಕ್ರಮವಾಗಿ ಮಾರಾಟ ಮಾಡುವ ಮೂಲಕ ರೈತರಿಗೆ ಸರ್ಕಾರದ ಯೋಜನೆಗಳು ತಲುಪದಂತೆ ವಂಚಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅಧಿಕಾರಿಗಳಿಂದ ರೈತರಿಗೆ ವಂಚನೆ:

ಕೋಲಾರ ಜಿಲ್ಲೆಯನ್ನು ಕಾಡುತ್ತಿರುವ ಬರದಿಂದ ರೈತರನ್ನು ಸ್ವಲ್ಪವಾದರೂ ಮೇಲೆತ್ತಲು ಕೃಷಿ ಭಾಗ್ಯ ಯೋಜನೆಯ ಮೂಲಕ ರೈತರಿಗೆ ಉಚಿತವಾಗಿ ವಿವಿಧ ಬಿತ್ತನೆ ಬೀಜಗಳನ್ನು ಹಾಗೂ ಕೃಷಿ ಸಲಕರಣೆಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸುತ್ತಿದೆ. ದೇವರು ವರ ಕೊಟ್ಟರೂ ಪೂಜಾರಿ ಕೊಡ ಎಂಬ ಗಾದೆ ಮಾತಿನಂತೆ ಸರ್ಕಾರ ರೈತರ ಅಭಿವೃದ್ಧಿಗೆ ಸೌಲಭ್ಯಗಳನ್ನು ಒದಗಿಸುತ್ತಿದ್ದರೂ ಸಹ ಇಲ್ಲಿನ ಅಧಿಕಾರಿಗಳು ಸರ್ಕಾರದಿಂದ ಯಾವುದೇ ಯೋಜನೆಗಳು ಬಂದಿಲ್ಲ ಎಂದು ಸಬೂಬು ಹೇಳಿ ಮುಗ್ಧ ರೈತರನ್ನು ವಂಚಿಸುತ್ತಿದ್ದಾರೆ ಎಂದರು.

ಚಿತ್ರದುರ್ಗ: ಬಿಲ್‌ ಕೊಡದೆ ಪುಗ್ಸಟ್ಟೆ ನೀರು ಕುಡಿದವರ ಬಗ್ಗೆ ಡಿಸಿ ಗರಂ..!

ಈಗ ಜೋಳದ ಕಟ್ಟುಗಳು ಕಾಮಸಮುದ್ರ ರೈತ ಸಂಪರ್ಕ ಕೇಂದ್ರಕ್ಕೆ ಒಂದು ಲೋಡ್‌ ಬಂದಿದ್ದು, ಅದನ್ನು ದಾಸ್ತಾನು ಮಾಡದೆ ಇದೇ ಕೇಂದ್ರಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವ ಕವಿತಾ ಎಂಬುವರ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿ ಒಂದು ಕಿಟ್‌ಗೆ 600 ರು.ಗಳಂತೆ ಮಾರಾಟ ಮಾಡುತ್ತಿರುವಾಗ ರೈತರ ಕೈಗೆ ಸಿಕ್ಕಿಬಿದ್ದಿದ್ದಾರೆ.

ರೈತರ ಪ್ರತಿಭಟನೆ

ಅಧಿಕಾರಿ ಶ್ರೀಧರ್‌ ಭ್ರಷ್ಟಾಚಾರವನ್ನು ಖಂಡಿಸಿ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ನೂರಾರು ರೈತರು ರೈತ ಸಂಪರ್ಕ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿದು ಸಹಾಯಕ ನಿರ್ದೇಶಕ ನಾಗರಾಜ್‌ ಸ್ಥಳಕ್ಕೆ ಬಂದಾಗ ಪ್ರತಿಭಟನೆ ಮತ್ತಷ್ಟುಕಾವು ಪಡೆದುಕೊಂಡಿತು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತನಿಖೆ ನಡೆಸುವ ಭರವಸೆ:

ಈ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಶ್ರೀಧರ್‌ ರೈತರೊಂದಿಗೆ ಸೌರ್ಜನ್ಯವಾಗಿ ವರ್ತಿಸುವುದಿಲ್ಲ, ಯಾವುದೇ ಮಾಹಿತಿ ಸಹ ನೀಡದೆ ದೌರ್ಜನದಿಂದ ನಡೆದುಕೊಳ್ಳುವರೆಂದು ಆರೋಪಿಸಿ ಅವರನ್ನು ಅಮಾನತು ಮಾಡಬೇಕೆಂದು ಪಟ್ಟುಹಿಡಿದರು. ಎರಡು ದಿನಗಳೊಳಗೆ ಅಧಿಕಾರಿಯ ಅಕ್ರಮಗಳ ಬಗ್ಗೆ ತನಿಖೆ ಮಾಡುವೆ ಅಕ್ರಮ ಸಾಬೀತಾದರೆ ಕಾನೂನು ಕ್ರಮಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.

ಈ ವೇಳೆ ತಾಪಂ ಸದಸ್ಯರಾದ ಜೆಸಿಬಿ ನಾರಾಯಣಪ್ಪ, ವೆಂಕಟೇಶ್‌, ಗ್ರಾಪಂ ಅಧ್ಯಕ್ಷ ಆದಿನಾರಾಯಣ, ಜಿಪಂ ಸದಸ್ಯ ಶಾಹೀದ್‌ ಮತ್ತಿತರರು ಇದ್ದರು.