ಚಿತ್ರದುರ್ಗ(ಆ.01): ಸೂಳೆಕೆರೆಯಿಂದ ಪೂರೈಕೆಯಾಗುವ ನೀರನ್ನು ಪುಗ್ಸಟ್ಟೆ ಕುಡ್ಕಂಡು ಹಾಯಾಗಿದ್ದ ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯ್ತಿಗಳನ್ನು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೆಯೇ ನಿರ್ವಹಣಾ ವೆಚ್ಚ ಪಾವತಿಸುವಂತೆ ಗಡುವು ನೀಡಿ ಎಚ್ಚರಿಸಿದ್ದಾರೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿಭಾಗದಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸೂಳೆಕೆರೆ ಕುಡಿಯುವ ನೀರು ಸರಬರಾಜು ಯೋಜನೆಯ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, 29 ಹಳ್ಳಿಗಳ ಕುಡಿಯುವ ನೀರಿಗೆ ಚಿತ್ರದುರ್ಗ ನಗರಸಭೆ ಹಣ ವ್ಯಯ ಮಾಡುವುದು ಎಷ್ಟರ ಮಟ್ಟಿಗೆ ಸರಿ? ನೀರು ಬಳಕೆ ಮಾಡುವವರು ನಿರ್ವಹಣಾ ವೆಚ್ಚ ಪಾವತಿಸದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಕುಡಿಯುವ ನೀರಿನ ವೆಚ್ಚವನ್ನು ನಗರಸಭೆ ಏಕೆ ಭರಿಸಬೇಕು?

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸೂಳೆಕೆರೆಯಿಂದ ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆ ಕಳೆದ 2008 -09ರಿಂದ ಜಾರಿಯಲ್ಲಿದೆ. ಇದೇ ಮಾರ್ಗದಲ್ಲಿ ಹೊಳಲ್ಕೆರೆ ಪಟ್ಟಣ ಹಾಗೂ ಉಳಿದ 29 ಗ್ರಾಮಗಳಿಗೂ ಶಾಂತಿಸಾಗರ ಯೋಜನೆಯಡಿ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಪೈಕಿ 9 ಗ್ರಾಮಗಳಿಗೆ ಅನಧಿಕೃತವಾಗಿ ಸಂಪರ್ಕ ಕಲ್ಪಿಸಲಾಗಿದೆ. ನೀರು ಪೂರೈಕೆ ಮಾಡಲು ತಗಲುವ ವಿದ್ಯುತ್‌ ಬಿಲ್‌, ದುರಸ್ತಿ ವೆಚ್ಚ, ನಿರ್ವಹಣಾ ವೆಚ್ಚ ಎಲ್ಲವನ್ನೂ ಚಿತ್ರದುರ್ಗ ನಗರಸಭೆಯಿಂದ ಪಾವತಿ ಮಾಡಲಾಗುತ್ತಿದೆ. ಚಿತ್ರದುರ್ಗ ನಗರಸಭೆಗೆ ಅಂತಹ ಕಾಳಜಿ ಏಕೆ? ಉಳಿದವರು ತಮ್ಮ ಪಾಲಿನ ಮೊತ್ತ ಪಾವತಿಸಬಾರದೆ ಎಂದು ಪ್ರಶ್ನಿಸಿದರು.

ಆಡಿಟ್‌ ಆಕ್ಷೇಪ:

29 ಹಳ್ಳಿಗಳ ಕುಡಿಯುವ ನೀರಿನ ವೆಚ್ಚ ಪಾವತಿಸುವುದರಿಂದ ಚಿತ್ರದುರ್ಗ ನಗರಸಭೆಗೆ ಹೆಚ್ಚಿನ ಹೊರೆಯಾಗುತ್ತಿದೆ. ಲೆಕ್ಕಪರಿಶೋಧನೆಯಲ್ಲಿ ಆಕ್ಷೇಪಣೆ ವ್ಯಕ್ತವಾಗಿದೆ. ಹೀಗಾಗಿ, ನೀರು ಪಡೆಯುತ್ತಿರುವ ಗ್ರಾಮಗಳು ನಿರ್ವಹಣಾ ವೆಚ್ಚ ಪಾವತಿಗೆ ಮುಂದಾಗಬೇಕು. ಶೇ.70ರಷ್ಟುವೆಚ್ಚವನ್ನು ಚಿತ್ರದುರ್ಗ ನಗರಸಭೆ, ಉಳಿದ ಶೇ.30ರಷ್ಟುವೆಚ್ಚವನ್ನು ಇತರೆ ಗ್ರಾಮಗಳು ಪಾವತಿಸಬೇಕು. ಆಯಾ ಗ್ರಾಮಗಳು ನೀರು ಸಂಪರ್ಕ ಪಡೆದಿರುವ ದಿನದಿಂದ ಜಾರಿಗೆ ಬರುವಂತೆ ನಿರ್ವಹಣಾ ವೆಚ್ಚ ಭರಿಸಬೇಕು ಎಂದರು.

ನಿರ್ವಹಣಾ ವೆಚ್ಚ .17.68 ಕೋಟಿ ಬಾಕಿ ಇದೆ. 29 ಗ್ರಾಮಗಳ ಪೈಕಿ ಇದುವರೆಗೂ ಕೇವಲ 5 ಗ್ರಾಮಗಳಿಂದ ಕೇವಲ .32.30 ಲಕ್ಷ ಮಾತ್ರ ಪಾವತಿಯಾಗಿದೆ. ಚಿತ್ರದುರ್ಗ ನಗರಸಭೆ .26.90 ಕೋಟಿ ನಿರ್ವಹಣಾ ವೆಚ್ಚ ಪಾವತಿಗೆ ಸಿದ್ಧವಿದೆ. ಆದರೆ, ಪ್ರಮುಖವಾಗಿ ಜಗಳೂರು .3.25 ಕೋಟಿ, ಹೊಳಲ್ಕೆರೆ .4.13 ಕೋಟಿ, ಚಿಕ್ಕಜಾಜೂರು .1.07 ಕೋಟಿ ಪಾವತಿಸುವುದು ಬಾಕಿ ಇದೆ. ನಿರ್ವಹಣಾ ವೆಚ್ಚ ಬಾಕಿ ಪಾವತಿಸುವಂತೆ ಈ ಹಿಂದೆ ಹಲವು ಬಾರಿ ಸೂಚನೆ ನೀಡಿದರೂ, ಸಂಬಂಧಪಟ್ಟಸ್ಥಳೀಯ ಸಂಸ್ಥೆಗಳು ವೆಚ್ಚ ಪಾವತಿಸುವಲ್ಲಿ ವಿಫಲವಾಗಿವೆ. ಇದರಿಂದ ಶಾಂತಿಸಾಗರ ಕುಡಿಯುವ ನೀರು ಪೂರೈಕೆ ಯೋಜನೆ ನಿರ್ವಹಣೆಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು.

ಹಾಸನ: ಪ್ಲಾಸ್ಟಿಕ್‌ ಬಳಸಿದ್ದಕ್ಕೆ ಹಣ್ಣಿನ ಅಂಗಡಿ ತೆರವು

ಬಾಕಿ ಪಾವತಿಸಲು ೩ ತಿಂಗಳ ಗಡುವು:

ಬಾಕಿ ಉಳಿಸಿಕೊಂಡಿರುವ ಗ್ರಾಮಗಳು ಕಡ್ಡಾಯವಾಗಿ 3 ತಿಂಗಳೊಳಗೆ 3 ಕಂತುಗಳಲ್ಲಿ ಬಾಕಿ ವೆಚ್ಚವನ್ನು ಪಾವತಿಸಲೇಬೇಕು. ತಪ್ಪಿದಲ್ಲಿ ಬಾಕಿ ಮೊತ್ತಕ್ಕೆ ಶೇ.2ರ ಬಡ್ಡಿ ವಿಧಿಸಿ, ವಸೂಲಿ ಮಾಡಲಾಗುವುದು ಎಂದು ಇದೇ ವೇಳೆ ಎಚ್ಚರಿಸಿದರು.

ಪ್ರತಿ ಹಳ್ಳಿಗೆ 70 ಸಾವಿರ ಲೀಟರ್‌:

ಅಮೃತ್‌ ಯೋಜನೆಯಡಿ ಸೂಳೆಕೆರೆ ನೀರು ಸರಬರಾಜು ಯೋಜನೆಯ ಪುನಶ್ಚೇತನ ಅಭಿವೃದ್ಧಿ ಕಾಮಗಾರಿಯಡಿ ಗ್ರಾಮಗಳಿಗೆ ಪ್ರತಿ ಪಾಯಿಂಟ್‌ಗೂ ಗರಿಷ್ಠ 4 ಗಂಟೆ ಅಥವಾ 70 ಸಾವಿರ ಲೀ. ಮಾತ್ರ ನೀರು ಪೂರೈಕೆ ಮಾಡಬೇಕು. ಪ್ರತಿಯೊಂದು ಪಾಯಿಂಟ್‌ಗೂ ಪ್ರೋಮೀಟರ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಲಭ್ಯವಿರುವ ನೀರಿನ ಮಿತ ಬಳಕೆಯಾಗಬೇಕು. ನೀರು ವ್ಯರ್ಥವಾಗದಂತೆ ಸದ್ಬಳಕೆ ಆಗಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಾಸ್ತಿ ಕಂತು ಕೊಡಿ ಪ್ಲೀಸ್‌:

ನಿರ್ವಹಣಾ ವೆಚ್ಚವನ್ನು 3 ಕಂತುಗಳಲ್ಲಿ ಪಾವತಿಸುವ ಬಗ್ಗೆ ಸಭೆಯಲ್ಲಿ ಪಾಲ್ಗೊಂಡಿದ್ದ ಪಿಡಿಒಗಳು ರಾಗ ಎಳೆದರು. ಗ್ರಾಪಂಗಳಲ್ಲಿ ಆದಾಯ ಕುಂಠಿತಗೊಂಡಿದ್ದು, ಇದರಿಂದ ನೀರು ನಿರ್ವಹಣಾ ವೆಚ್ಚ ಪಾವತಿಗೆ ತೊಂದರೆಯಾಗಿದೆ. ಹೆಚ್ಚಿನ ಕಂತುಗಳಲ್ಲಿ ನಿರ್ವಹಣಾ ವೆಚ್ಚ ಬಾಕಿ ಪಾವತಿಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ. ಗ್ರಾಪಂಗಳು ಆದಾಯ ಸಂಗ್ರಹಿಸಲು ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಕರ ಸಂಗ್ರಹಣೆಯ ಗುರಿ ಸಾಧನೆ ಮಾಡಬೇಕು. ಇದು ಪ್ರತಿ ಪಿಡಿಒಗಳ ಕರ್ತವ್ಯ ಎಂದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್‌, ನಗರಸಭೆ ಪೌರಾಯುಕ್ತ ಚಂದ್ರಪ್ಪ ಸೇರಿ ಇತರರು ಇದ್ದರು.