ಕೆಜಿಎಫ್‌ನ 35 ವಾರ್ಡ್‌ಗಳ ನಿವೇಶನ ರಹಿತ ಕುಟುಂಬಗಳಿಗೆ ಯಾವುದೇ ತಾರತಮ್ಯವಿಲ್ಲದೆ ಸಂಪೂರ್ಣ ಪಾರದರ್ಶಕವಾಗಿ ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಶಾಸಕಿ ರೂಪಕಲಾ ಶಶಿಧರ್ ತಿಳಿಸಿದ್ದಾರೆ. ಮೊದಲ ಹಂತದಲ್ಲಿ 750 ನಿವೇಶನಗಳನ್ನು ವಿತರಿಸಲಾಗುವುದು.

ಕೋಲಾರ: ನಗರಸಭೆ ವ್ಯಾಪ್ತಿಯ 35 ವಾರ್ಡ್ಗಳಲ್ಲಿ ವಾಸಿಸುತ್ತಿರುವ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡುವ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಗೊಂದಲ, ತಾರತಮ್ಯ ಹಾಗೂ ಲೋಪಗಳಿಗೆ ಅವಕಾಶ ನೀಡದೆ ಸಂಪೂರ್ಣ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಲಾಟರಿ ಮೂಲಕವೇ ಫಲಾನುಭವಿಗಳ ಆಯ್ಕೆ ಮಾಡುವುದು ಖಚಿತ ಎಂದು ಶಾಸಕಿ ರೂಪಕಲಾ ಶಶಿಧರ್ ಸ್ವಷ್ಟಪಡಿಸಿದರು.

ನಿವೇಶನ ರಹಿತ ಕುಟುಂಬಗಳು

ನಗರದ ಹೈಗ್ರೌಂಡ್‌ನಲ್ಲಿ ತಾಲೂಕು ಆಡಳಿತ ಮತ್ತು ನಗಸಭೆ ವತಿಯಿಂದ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಅವರು, ನಗರಸಭೆಯ 35 ವಾರ್ಡ್ಗಳಲ್ಲಿ ವಾಸಿಸುತ್ತಿರುವ ನಿವೇಶನ ರಹಿತ ಕುಟುಂಬಗಳು ನನ್ನ ಎರಡು ಕಣ್ಣುಗಳಿದ್ದಂತೆ. ಪ್ರತಿಯೊಂದು ಕುಟುಂಬಕ್ಕೂ ನ್ಯಾಯ ದೊರೆಯಬೇಕು ಎಂಬುದು ನನ್ನ ಆಶಯ. ಈ ಹಿನ್ನೆಲೆಯಲ್ಲಿ ಯಾರ ಪ್ರಭಾವಕ್ಕೂ ಮಣಿಯದೆ, ಅರ್ಹ ಫಲಾನುಭವಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲು ಲಾಟರಿ ಪದ್ಧತಿಯನ್ನು ಅನುಸರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

20 ಎಕರೆ ಜಾಗದಲ್ಲಿ 750 ನಿವೇಶನಗಳು

ಆಂಡ್ರಸನ್‌ಪೇಟೆಯ ರೋರ್ಸ್‌ ಕ್ಯಾಂಪ್ ಪ್ರದೇಶದಲ್ಲಿ ಸುಮಾರು 20 ಎಕರೆ ಜಾಗದಲ್ಲಿ 750 ನಿವೇಶನಗಳನ್ನು ಅಭಿವೃದ್ಧಿಪಡಿಸಿ ವಿತರಿಸಲು ಯೋಜನೆ ರೂಪಿಸಲಾಗಿದೆ. ಈ ನಿವೇಶನಗಳನ್ನು ಪಡೆಯಲು ೩,೦೦೦ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ, ಸಮರ್ಪಕ ದಾಖಲೆಗಳನ್ನು ಸಲ್ಲಿಸದ ಹಾಗೂ ನಿಗದಿತ ಅರ್ಹತೆಗಳನ್ನು ಹೊಂದಿರದ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ. ಅಂತಿಮವಾಗಿ 1239 ಅರ್ಜಿಗಳು ಸ್ವೀಕೃತಗೊಂಡಿದ್ದು, ಅರ್ಹ ಅರ್ಜಿದಾರರ ಸಮ್ಮುಖದಲ್ಲಿಯೇ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಎಂದು ಹೇಳಿದರು.

750 ನಿವೇಶನಗಳಿಗೆ ಫಲಾನುಭವಿಗಳ ಆಯ್ಕೆ

ಮೊದಲ ಹಂತದಲ್ಲಿ 750 ನಿವೇಶನಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಈ ಹಂತದಲ್ಲಿ ನಿವೇಶನ ದೊರೆಯದ ಅರ್ಹ ಕುಟುಂಬಗಳಿಗೆ ಎರಡನೇ ಹಂತದಲ್ಲಿ ನಿವೇಶನ ಪಡೆಯಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ನೂತನ ಬಡಾವಣೆಯನ್ನು ಆಧುನಿಕ ಸೌಲಭ್ಯಗಳು ಹಾಗೂ ವ್ಯವಸ್ಥಿತ ನಗರಾಭಿವೃದ್ಧಿ ಮಾದರಿಯನ್ನು ಅಳವಡಿಸಿಕೊಂಡು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಗಾಯತ್ರಿ, ನಗರಸಭೆ ಪೌರಾಯುಕ್ತ ಶ್ರೀಧರ್, ಸಿಡಿಪಿಒ ರಾಜೇಶ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜಶೇಖರ್, ಮಾಜಿ ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ ದಯಾಶಂಕರ್, ವೇಣುಗೋಪಾಲ್, ಮಗಿ ಶಶಿಕುಮಾರ್ ಇದ್ದರು.