ಗುಡಿಬಂಡೆ ತಾಲೂಕಿನ ಉಪ ವಲಯ ಅರಣ್ಯಾಧಿಕಾರಿ ಕಲ್ಲು ಗಣಿ ಗುತ್ತಿಗೆಗೆ ನಿರಪೇಕ್ಷಣಾ ಪತ್ರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 43 ಸಾವಿರ ರೂ. ಲಂಚ ಪಡೆಯುವಾಗ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಚಿಕ್ಕಬಳ್ಳಾಪುರ: ಗುಡಿಬಂಡೆ: ಕಟ್ಟಡ ಕಲ್ಲು ಗಣಿ ಗುತ್ತಿಗೆಗೆ ನಿರಪೇಕ್ಷಣಾ ಪತ್ರ ನೀಡಲು 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಕೊನೆಗೆ 43 ಸಾವಿರಕ್ಕೆ ಒಪ್ಪಿಕೊಂಡಿದ್ದ ಉಪ ವಲಯ ಅರಣ್ಯಾಧಿಕಾರಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕಟ್ಟಡ ಕಲ್ಲು ಗಣಿ ಗುತ್ತಿಗೆಗೆ ನಿರಪೇಕ್ಷಣಾ ಪತ್ರ
ಗುಡಿಬಂಡೆ ತಾಲೂಕಿನ ಉಪ ವಲಯ ಅರಣ್ಯಾಧಿಕಾರಿ ವಿಶ್ವನಾಥ್ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿ. ಗೌರಿಬಿದನೂರು ತಾಲೂಕಿನ ನಗರಗೆರೆ ಹೋಬಳಿಯ ಜಿ. ಕೊತ್ತೂರು ಗ್ರಾಮದ ಸರ್ವೆ ಸಂಖ್ಯೆ 356ರಲ್ಲಿ ಕಟ್ಟಡ ಕಲ್ಲು ಗಣಿ ಗುತ್ತಿಗೆ ಪಡೆಯಲು ಅರ್ಜಿದಾರರೊಬ್ಬರು ಮುಂದಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯಿಂದ ನಿರಪೇಕ್ಷಣಾ ಪತ್ರ ಪಡೆಯಲು ವಿಶ್ವನಾಥ್ ಅವರನ್ನು ಸಂಪರ್ಕಿಸಿದ್ದರು.
ಈ ವೇಳೆ ನಿರಪೇಕ್ಷಣಾ ಪತ್ರ ನೀಡಲು ವಿಶ್ವನಾಥ್ ಅವರು 50 ಸಾವಿರ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಬಳಿಕ ಮಾತುಕತೆ ನಡೆಸಿ 43 ಸಾವಿರ ನೀಡುವಂತೆ ಕೇಳಿದ್ದರು. ಈ ಬಗ್ಗೆ ಅರ್ಜಿದಾರರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಹಣ ಸ್ವೀಕರಿಸುತ್ತಿದ್ದಾಗಲೇ ಲಾಕ್
ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಡಾ. ಶಿವಕುಮಾರ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ನವೆಂಬರ್ 20ರಂದು ಬೆಳಿಗ್ಗೆ 10.15ರ ಸುಮಾರಿಗೆ 43 ಸಾವಿರ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ವಿಶ್ವನಾಥ್ ಅವರನ್ನು ಹಿಡಿದಿದ್ದಾರೆ.
















