ಕೋಲಾರ(ಆ.13): ರಾಜ್ಯ ಸರ್ಕಾರ ಮಂತ್ರಿ ಮಂಡಲವಿಲ್ಲದೆ ಅನಾಥವಾಗಿದೆ, ಸರ್ಕಾರದಲ್ಲಿ ಮಂತ್ರಿ ಮಂಡಲವಿಲ್ಲದೆ ಮುಖ್ಯಮಂತ್ರಿ ಒಬ್ಬರೇ ಸರ್ಕಾರವನ್ನು ನೋಡಿಕೊಳ್ಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ಮುನಿಯಪ್ಪ ಅಭಿಪ್ರಾಯಪಟ್ಟರು.

ಸೋಮವಾರ ಬಕ್ರಿದ್‌ ಸಂದರ್ಭದಲ್ಲಿ ನಗರಕ್ಕೆ ಆಗಮಿಸಿದ್ದ ಅವರು, ಅಂಜುಮಾನ್‌ ಅಧ್ಯಕ್ಷ ಜಮೀರ್‌ ಅಹಮದ್‌ ನಿವಾಸದಲ್ಲಿ ಸ್ಥಳೀಯ ಅಲ್ಪಸಂಖ್ಯಾತ ಮುಖಂಡರಿಗೆ ಶುಭಾಷಯ ತಿಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಂತ್ರಿ ಮಂಡಲ ರಚನೆಗೆ ಆಗ್ರಹ

ಮುಖ್ಯಮಂತ್ರಿ ಯಡಿಯೂರಪ್ಪ ಒಬ್ಬರೇ ಇಡೀ ರಾಜ್ಯವನ್ನು ನೋಡಿಕೊಳ್ಳಲು ಸಾಧ್ಯವಿಲ್ಲ. ಅವರು ಕೂಡಲೇ ಮಂತ್ರಿ ಮಂಡಲವನ್ನು ರಚಿಸಿ ಮಂತ್ರಿಗಳಿಗೆ ಜವಾಬ್ದಾರಿಯನ್ನು ನೀಡಬೇಕು. ಈಗಾಗಲೇ ಬಿಜೆಪಿಯವರು 20 ಮಂದಿಗೆ ಸಚಿವ ಸ್ಥಾನ ನೀಡಲು ಸಿದ್ಧತೆ ನಡೆಸಿದೆ. ಬಿಜೆಪಿಯ ಹೈಕಮಾಂಡ್‌ ಕೂಡಲೇ ಮಂತ್ರಿ ಮಂಡಲ ರಚಿಸಲು ಅವಕಾಶ ಮಾಡಿ ಕೊಟ್ಟು ಸಂತ್ರಸ್ತ ಜಿಲ್ಲೆಗಳಿಗೆ ನೆರವು ನೀಡಬೇಕು ಎಂದರು.

5 ಸಾವಿರ ಕೋಟಿ ಬಿಡುಗಡೆಗೆ ಒತ್ತಾಯ

ಕೊಡಗು, ಉತ್ತರ ಮತ್ತು ಕರಾವಳಿ ಕರ್ನಾಟಕದಲ್ಲಿನ ನೆರೆ ಪರಿಹಾರ ಕಾರ್ಯಗಳಿಗೆ ಕೇಂದ್ರ ಸರಕಾರ ತಕ್ಷಣ 5 ಸಾವಿರ ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಬೇಕೆಂದು ಕೆ.ಎಚ್‌.ಮುನಿಯಪ್ಪ ಒತ್ತಾಯಿಸಿದರು. ರಾಜ್ಯದ ನೆರೆ ಪರಿಹಾರ ಕಾರ್ಯಗಳನ್ನು ಕೇಂದ್ರ ಹಣಕಾಸು ಹಾಗೂ ಗೃಹ ಸಚಿವರು ವೀಕ್ಷಣೆ ಮಾಡಿ ಹೋಗಿದ್ದಾರೆ. ನೆರೆ ಹಾವಳಿಯಿಂದ ಸುಮಾರು 10 ಸಾವಿರ ಕೋಟಿ ರೂಪಾಯಿಗಳ ಹಾನಿ ಸಂಭವಿಸಿದೆಯೆಂಬ ಮಾಹಿತಿ ಇದೆ ಎಂದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಿಲ್ಲಾಧಿಕಾರಿಗೆ ಸೂಚನೆ:

ಇದೇ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ನಗರದ ಸಮಸ್ಯೆಗಳ ಕುರಿತಂತೆ ಮುನಿಯಪ್ಪ ಅವರ ಗಮನಕ್ಕೆ ತಂದಾಗ, ಅಲ್ಲಿಂದಲೇ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ರನ್ನು ದೂರವಾಣಿಯಲ್ಲಿ ಸಂಪರ್ಕಿಸಿ, ಬಕ್ರಿದ್‌ ಸಂದರ್ಭದಲ್ಲಿ ನಗರಕ್ಕೆ ಆಗಮಿಸಿರುವ ತಮಗೆ ಎಲ್ಲೆಡೆ ಕಸದ ರಾಶಿಗಳ ದರ್ಶನವಾಯಿತು. ಸ್ಥಳೀಯ ಮುಖಂಡರು ನಗರದ ಸಮಸ್ಯೆಗಳ ಕುರಿತು ದೂರುತ್ತಿದ್ದಾರೆ. ಸದ್ಯಕ್ಕೆ ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಕೆಲಸಕ್ಕೆ ಅವಕಾಶ ಇಲ್ಲದೇ ಇರುವುದರಿಂದ ನಗರಸಭೆ ಆಯುಕ್ತರು ಮತ್ತು ಸಿಬ್ಬಂದಿಯನ್ನು ಚುರುಕುಗೊಳಿಸಬೇಕು ಎಂದು ಸೂಚಿಸಿದರು.

ಕೊಳವೆ ಬಾವಿಗಳಲ್ಲಿ ನೀರು ಲಭ್ಯವಿಲ್ಲದಿದ್ದರೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆಗೆ ಆದ್ಯತೆ ಮೇರೆಗೆ ಕ್ರಮ ವಹಿಸಬೇಕು, ಈ ಕುರಿತು ಜನರಿಂದ ಯಾವುದೇ ದೂರುಗಳು ಬಾರದಂತೆ ಎಚ್ಚರವಹಿಸಬೇಕು.

ಚಿಕ್ಕಬಳ್ಳಾಪುರ : ನೆರೆ ಸಂತ್ರಸ್ತರಿಗೆ ನೆರವಿನ ಮಹಾಪೂರ

ಮುಖಂಡರಾದ ಅತಾವುಲ್ಲಾಖಾನ್‌, ಪ್ಯಾರೇಜಾನ್‌, ಷಫೀವುಲ್ಲಾ, ಇಮ್ರಾನ್‌ಖಾನ್‌, ಯೂನುಸ್‌ ಖಾನ್‌, ಅಯೂಬ್‌ಖಾನ್‌, ಊರುಬಾಗಿಲು ಶ್ರೀನಿವಾಸ್‌, ಪ್ರಸಾದ್‌ಬಾಬು, ಖಾದ್ರಿಪುರ ಬಾಬು ಹಾಜರಿದ್ದರು.