ಚಿಕ್ಕಬಳ್ಳಾಪುರ : ನೆರೆ ಸಂತ್ರಸ್ತರಿಗೆ ನೆರವಿನ ಮಹಾಪೂರ
ನೆರೆಯಿಂದ ಸಂತ್ರಸ್ತರಾದ ಜನರರಿಗಾಗಿ ಕೋಲಾರದ ಜನ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಕಳುಹಿಸಿದ್ದಾರೆ. ನಾನಾ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಸಾರ್ವಜನಿರು ಅಪಾರ ಪ್ರಮಾಣದಲ್ಲಿ ಆಹಾರ ಸಾಮಗ್ರಿ ಮತ್ತಿತರ ಅಗತ್ಯ ವಸ್ತುಗಳನ್ನು ನೀಡಿದ್ದಾರೆ. ಸೋಮವಾರ ಬಕ್ರೀದ್ ಹಬ್ಬ ಇದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಮುಸ್ಲಿಂರು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹಿಸಿದರು.
ಚಿಕ್ಕಬಳ್ಳಾಪುರ(ಆ.13): ನೆರೆ ಹಾವಳಿಯಿಂದ ಸರ್ವಸ್ವವನ್ನೂ ಕಳೆದುಕೊಂಡ ಜನತೆಗೆ ನೆರವಾಗಲು ಜಿಲ್ಲೆಯ ಜನತೆ ಉದಾರತೆಯ ಮಹಾಪೂರವನ್ನೇ ಹರಿಸಿದ್ದಾರೆ. ನಾನಾ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಸಾರ್ವಜನಿರು ಅಪಾರ ಪ್ರಮಾಣದಲ್ಲಿ ಆಹಾರ ಸಾಮಗ್ರಿ ಮತ್ತಿತರ ಅಗತ್ಯ ವಸ್ತುಗಳನ್ನು ನೀಡಿದ್ದಾರೆ.
ಭಗತ್‌ಸಿಂಗ್ ಚಾರಿಟಬಲ್ ಟ್ರಸ್ಟ್:
ನಗರದ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಕಾರ್ಯಕರ್ತರು ಅಗತ್ಯವಸ್ತುಗಳನ್ನು ಸಂಗ್ರಹಿಸುತ್ತಿದ್ದು, ಲಾರಿ ಲೋಡ್‌ನಷ್ಟುವಸ್ತುಗಳನ್ನು ಸಂಗ್ರಹಿಸಿ ಕೊಂಡೊಯ್ಯಲು ಮುಂದಾಗಿದ್ದಾರೆ. ಗುಡಿಬಂಡೆಯಲ್ಲಿ ಗ್ರೀನ್ ವಾರಿಯರ್ಸ್ ತಂಡ, ಇಂಡಿಯನ್ ಮೀಡಿಯಾ ಕೌನ್ಸಿಲ್ ಸೇರಿದಂತೆ ನಾನಾ ಸಂಘಟನೆಗಳು ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮಾಡಿ, ಅದನ್ನು ಸಂತ್ರಸ್ತರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಗುಡಿಬಂಡೆ ಪಟ್ಟದಲ್ಲಿನ ವ್ಯಾಪಾರಸ್ಥರು, ಸಾರ್ವಜನಿಕರ ಜೊತೆಗೆ ಪೆರೇಸಂದ್ರ ಗ್ರಾಮಸ್ಥರಿಂದ ಅಕ್ಕಿ, ಬೇಳೆ, ಟೀ ಪುಡಿ, ಅಡುಗೆ ಎಣ್ಣೆ, ಸಾಂಬಾರುಪುಡಿ, ನೀರಿನ ಬಾಟೆಲ್, ರೆಸ್ಕ್, ಬ್ರೆಡ್, ಬನ್, ಬಿಸ್ಕೆಟ್, ಔಷಧಿ, ಬಟ್ಟೆ, ಮೇಣದ ಬತ್ತಿ ಸೇರಿದಂತೆ ಹಲವು ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಕ್ಯಾಂಟರ್, ಟೆಂಪೋ ವಾಹನಗಳಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಕಳುಹಿಸಿದ್ದಾರೆ.
ಜೆಡಿಎಸ್‌ನಿಂದ ಸಂಗ್ರಹ:
ಸೋಮವಾರ ಬೆಳಗ್ಗೆ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ, ಜಿಪಂ ಸದಸ್ಯ ಮುನೇಗೌಡ ಸೇರಿದಂತೆ ಇತರರು ಸುಮಾರು 10 ಲಕ್ಷಕ್ಕೂ ಹೆಚ್ಚು ಮೌಲ್ಯದ ನಾನಾ ಪದಾರ್ಥಗಳನ್ನು ಸಂಗ್ರಹಿಸಿ ವಾಹನಗಳ ಮೂಲಕ ಉತ್ತರ ಕರ್ನಾಟಕಕ್ಕೆ ಕಳುಹಿಸಿದರು.
ಪರಿಹಾರ ಕೇಂದ್ರದಲ್ಲಿ ಹಸುಗೂಸಿಗೆ ಎಣ್ಣೆ ಸ್ನಾನ ಮಾಡಿಸಿದ ಅಧಿಕಾರಿ
ಉಪ್ಪಾರ ಸಂಘದ ನೆರವು
ಭಗೀರಥ ಉಪ್ಪಾರ ಸಮುದಾಯದಿಂದ ಸೋಮವಾರ ನೆರೆ ಸಂತ್ರಸ್ತರಿಗೆ ನಾನಾ ಪದಾರ್ಥಗಳನ್ನು ಸಂಗ್ರಹಿಸಿ ಉತ್ತರ ಕರ್ನಾಟಕಕ್ಕೆ ಕಳುಹಿಸುವ ಕೆಲಸ ಮಾಡಲಾಯಿತು. ಸಂಘದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಸಂಘದ ಜಿಲ್ಲಾಧ್ಯಕ್ಷ ಡಿ.ಬಿ. ಗಂಗಾಧರ್ ನೇತೃತ್ವದಲ್ಲಿ ಮಂಚನಬಲೆ ಗ್ರಾಮಸ್ಥರಿಂದ ಅಕ್ಕಿ, ಬೇಳೆ, ಟೀಪುಡಿ, ಅಡುಗೆ ಎಣ್ಣೆ, ಸಾಂಬಾರುಪುಡಿ, ನೀರಿನ ಬಾಟೆಲ್ ಸೇರಿದಂತೆ ಹಲವು ಪದಾರ್ಥಗಳನ್ನು ಸಂಗ್ರಹಿಸಿ ವಾಹನದ ಮೂಲಕ ನೆರೆ ಪೀಡಿತ ಪ್ರದೇಶಗಳಿಗೆ ಕಳುಹಿಸಿದರು.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮುಸಲ್ಮಾನರ ಕೊಡುಗೆ
ಸೋಮವಾರ ಬಕ್ರೀದ್ ಹಬ್ಬ ಇದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಮುಸ್ಲಿಂರು, ಪ್ರಶಾಂತನಗರದಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದರು. ಈ ಸಂದರ್ಭದಲ್ಲಿ ಹಲವು ಮುಸ್ಲಿಂ ಯುವಕರು, ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಪ್ರಾರ್ಥನೆಗೆ ಬರುವ ಬಹುತೇಕ ಮುಸ್ಲಿಂರು ದೇಣಿಗೆ ನೀಡಿದರು.