ಯಾವುದೇ ಧರ್ಮದಲ್ಲಾದರೂ ವ್ಯಕ್ತಿ ಸತ್ತ ಬಳಿಕ ಸಾವಿಗೂ ಗೌರವ ಸಲ್ಲಿಸಬೇಕೆಂಬ ದೃಷ್ಟಿಯಿಂದ ಗೌರವಯುತವಾದ ಶವ ಸಂಸ್ಕಾರ ಮಾಡಬೇಕು ಎನ್ನುವ ನಿಯಮವಿದೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜೂ.28): ಯಾವುದೇ ಧರ್ಮದಲ್ಲಾದರೂ ವ್ಯಕ್ತಿ ಸತ್ತ ಬಳಿಕ ಸಾವಿಗೂ ಗೌರವ ಸಲ್ಲಿಸಬೇಕೆಂಬ ದೃಷ್ಟಿಯಿಂದ ಗೌರವಯುತವಾದ ಶವ ಸಂಸ್ಕಾರ ಮಾಡಬೇಕು ಎನ್ನುವ ನಿಯಮವಿದೆ. ಪ್ರತೀ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗವನ್ನು ಕಾಯ್ದಿರಿಸುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್ ಆದೇಶವೇ ಇದೆ. ಆದರೆ ಇಲ್ಲಿ ಸತ್ತ ಬಳಿಕ ಗೌರವಯುತವಾದ ಶವ ಸಂಸ್ಕಾರಕ್ಕೂ ಅವಕಾಶವಿಲ್ಲದಂತೆ ಆಗಿದೆ. ಹೌದು ಜನರು ಇಂತಹ ಅಮಾನವೀಯ ಪರಿಸ್ಥಿತಿ ಅನುಭವಿಸುತ್ತಿರುವುದು ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಕಣ್ವಬಲಮುರಿಯಲ್ಲಿ. ಕೊಡಗು ಜಿಲ್ಲೆಯಲ್ಲಿ ಸಾವಿರಾರು ಎಕರೆ ಸರ್ಕಾರಿ ಭೂಮಿ ಇದೆ.

ಆದರೂ ಎಷ್ಟೋ ಗ್ರಾಮಗಳಿಗೆ ಇಂದಿಗೂ ಶವ ಸಂಸ್ಕಾರಕ್ಕೂ ಸ್ಮಶಾನವಿಲ್ಲ. ಕಣ್ವ ಬಲಮುರಿಯಲ್ಲಿ ನೂರಕ್ಕೂ ಅಧಿಕ ಕುಟುಂಬಗಳಿವೆ. ಕಾವೇರಿ ನದಿ ದಂಡೆಯಲ್ಲೇ ಗ್ರಾಮವಿದ್ದು, ಮಳೆಗಾಲ ಆರಂಭವಾಯಿತ್ತೆಂದರೆ ವರ್ಷದ ಐದಾರು ತಿಂಗಳು ಕಾವೇರಿ ನದಿ ತುಂಬಿ ಉಕ್ಕಿ ಹರಿಯುತ್ತದೆ. ಈ ಐದಾರು ತಿಂಗಳು ಗ್ರಾಮದಲ್ಲಿ ಯಾರಾದರೂ ಜೀವ ಬಿಟ್ಟರೆ ಹೇಗೆ ಎಂಬ ಆತಂಕದಲ್ಲೇ ಜನರು ಬದುಕು ದೂಡಬೇಕು. ಏಕೆಂದರೆ ಈ ಗ್ರಾಮದ ಜನರು ಯಾರೇ ಸತ್ತರೆಂದರೆ ಕಾವೇರಿ ನದಿಯ ದಂಡೆಯಲ್ಲೇ ಇರುವ ಈ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡಬೇಕು.

ವಿಪರ್ಯಾಸವೆಂದರೆ ಕಾವೇರಿ ನದಿ ಉಕ್ಕಿ ಹರಿಯುವುದರಿಂದ ಸಂಸ್ಕಾರ ಮಾಡಲೆಂದು ಗುಂಡಿ ತೆಗೆದರೆ ಸಾಕು ಗುಂಡಿಯಲ್ಲಿ ನೀರು ಉಕ್ಕಲಾರಂಭಿಸುತ್ತದೆ. ಎಷ್ಟೇ ನೀರನ್ನು ಬಕೆಟ್ಗಳಲ್ಲಿ ತುಂಬಿ ಚೆಲ್ಲಿದರೂ ಮತ್ತೆ ಮತ್ತೆ ತುಂಬುತ್ತಲೇ ಇರುತ್ತದೆ. ಬೇರೆ ದಾರಿಯಿಲ್ಲದೆ ಅದೇ ಕೆಸರು ನೀರು ಇರುವ ಗುಂಡಿಯೊಳಕ್ಕೆ ಶವವನ್ನು ಇಟ್ಟು ಅದು ತೇಲದಂತೆ ಶವದ ಮೇಲೆ ಏನೆಲ್ಲಾ ತೂಕವಿರುವುದನ್ನು ಇಟ್ಟು ಶವ ಹೂಳಬೇಕಾಗಿದೆ. ಮೊನ್ನೆಯಷ್ಟೇ ಗ್ರಾಮದ 42 ವರ್ಷ ವಯಸ್ಸಿನ ಕುಮಾರ್ ಎಂಬುವರು ಅನಾರೋಗ್ಯದಿಂದ ಮೃತಪಟ್ಟಿದ್ದರು.

ಈ ವೇಳೆ ಅವರ ಸಂಸ್ಕಾರ ಮಾಡಲು ಸಂಬಂಧಿಕರು, ಗ್ರಾಮದವರು ಪಡಬಾರದ ಕಷ್ಟ ಪಟ್ಟಿದ್ದಾರೆ. ಶವ ಸಂಸ್ಕಾರ ಮಾಡುವುದಕ್ಕೆ ಗುಂಡಿ ತೆಗೆಯುತ್ತಿರುವಾಗಲೇ ಗುಂಡಿಯಲ್ಲಿ ನೀರು ಬರಲಾರಂಭಿಸಿದೆ. ಎಷ್ಟೇ ನೀರನ್ನು ಹೊರಗೆ ತೆಗೆದರೂ ಮತ್ತೆ ಮತ್ತೆ ತುಂಬಿದೆ. ಕೊನೆ ಬೇರೆ ದಾರಿಯಿಲ್ಲದೆ, ಅಷ್ಟೊಂದು ನೀರು ತುಂಬಿದ ಗುಂಡಿಗೆ ಶವವನ್ನು ಇರಿಸಿ ಸಂಸ್ಕಾರ ಮಾಡಿ ಬಂದಿದ್ದಾರೆ. ಹೀಗೆ ಯಾರೇ ತಮ್ಮ ಸಂಬಂಧಿಕರು ಮೃತಪಟ್ಟರೂ ಕೊನೆಯ ಕ್ಷಣದಲ್ಲೂ ಶವದ ಮೇಲೆ ಏನೆಲ್ಲಾ ಭಾರವನ್ನು ಹಾಕಿ ಹೂಳುವ ಆ ಅಮಾನವೀಯತೆ ಸಂಬಂಧಿಕರನ್ನು ಮತ್ತಷ್ಟು ದುಃಖಕ್ಕೆ ದೂಡುತ್ತಿದೆ.

ಇಂತಹ ಅಮಾನವೀಯತೆಯನ್ನು ತಪ್ಪಿಸುವುದಕ್ಕಾಗಿ ದಯವಿಟ್ಟು ಶವ ಸಂಸ್ಕಾರಕ್ಕಾಗಿ ವ್ಯವಸ್ಥಿತವಾದ ಮತ್ತು ಸುರಕ್ಷಿತವಾದ ಸ್ಥಳದಲ್ಲಿ ಸ್ಮಶಾನ ಮಾಡುವಂತೆ ಹತ್ತಾರು ವರ್ಷಗಳಿಂದ ಪಂಚಾಯಿತಿ ಅಧಿಕಾರಿಗಳಿಂದ ಹಿಡಿದು ಶಾಸಕರವರೆಗೆ ಮನವಿ ಮಾಡಿದ್ದೇವೆ. ಆದರೂ ಇದುವರೆಗೆ ಯಾರೊಬ್ಬರು ಗಮನಹರಿಸುತ್ತಿಲ್ಲ ಎಂದು ಇಲ್ಲಿಯ ಜನರು ಕಣ್ಣೀರಿಟ್ಟಿದ್ದಾರೆ. ಗ್ರಾಮದಲ್ಲಿ ಎಷ್ಟೋ ಕುಟುಂಬಗಳು ಇಂದಿಗೂ ಸರಿಯಾದ ಮನೆಯಿಲ್ಲದೆ, ಸ್ವಂತ ಸೂರಿಲ್ಲದೆ ಗುಡಿಸಲು ಕಟ್ಟಿಕೊಂಡು ಜೀವನ ಮಾಡುತ್ತಿದ್ದಾರೆ. ಅಂತವರು ಸತ್ತಾಗಲೂ ಸಾವಿನಲ್ಲೂ ನೆಮ್ಮಯಿಲ್ಲದ ದುಃಸ್ಥಿತಿ ಇದೆ ಎನ್ನುತ್ತಿದ್ದಾರೆ ಗ್ರಾಮದ ಜನರು. ಇನ್ನಾದರೂ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಬೇಕಾಗಿದೆ.