ಕೊಡಗಿನಲ್ಲಿ ವಾಡಿಕೆಗಿಂತ ಶೇ.೫ರಷ್ಟು ಹೆಚ್ಚು ಮಳೆಯಾಗುವ (ಶೇ.೧೦೫) ಹವಾಮಾನ ಇಲಾಖೆ ಮುನ್ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪ್ರವಾಹ, ಭೂಕುಸಿತ ಎದುರಿಸಲು ಸಜ್ಜಾಗಿದೆ. ಪೂರ್ವಸಿದ್ಧತಾ ಕ್ರಮವಾಗಿ ರಕ್ಷಣಾ ತರಬೇತಿ, ಅಣಕು ಕಾರ್ಯಾಚರಣೆ ನಡೆಸಲಾಗಿದೆ. ಅಪಾಯಕಾರಿ ಪ್ರದೇಶಗಳ ಜನರ ಸ್ಥಳಾಂತರಕ್ಕೆ ನಿರಾಶ್ರಿತ ಶಿಬಿರ ಸ್ಥಾಪಿಸಲಾಗುತ್ತಿದೆ. ಆದರೆ, ಶಾಶ್ವತ ಪುನರ್ವಸತಿಯೇ ಉತ್ತಮ ಪರಿಹಾರ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ವರದಿ : ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮೇ 20):
ಕೊಡಗು ಜಿಲ್ಲೆಯಲ್ಲಿ ಕಳೆದ ಐದಾರು ವರ್ಷಗಳಿಂದ ಮಳೆಗಾಲ ಶುರುವಾಯಿತ್ತೆಂದರೆ ಆತಂಕ ಮನೆ ಮಾಡಿಬಿಡುತ್ತದೆ. ಅದಕ್ಕೆ ಕಾರಣ 2018 ರಿಂದ ಮೂರ್ನಾಲ್ಕು ವರ್ಷಗಳ ಕಾಲ ನಿರಂತರವಾಗಿ ಎದುರಾದ ಪ್ರವಾಹ ಮತ್ತು ಭೂಕುಸಿತ. ಆದರೆ ಅದೇ ಪರಿಸ್ಥಿತಿ ಈ ಬಾರಿಯೂ ಎದುರಾಗಿ ಬಿಡುತ್ತಾ ಎನ್ನುವ ಆತಂಕ ಶುರುವಾಗಿದೆ. ಅದಕ್ಕೆ ಕಾರಣ ಈ ಬಾರಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಮಳೆ ಸುರಿಯಲಿದೆ ಎನ್ನುವುದು.

ಹೌದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿರುವ ಪ್ರಕಾರ ಜಿಲ್ಲೆಗೆ ಈ ವರ್ಷ ಶೇ 105 ರಷ್ಟು ಸುರಿಯಲಿದೆ. ಅಂದರೆ ವಾಡಿಕೆಗಿಂತ ಶೇ 5 ರಷ್ಟು ಜಾಸ್ತಿ ಮಳೆಯಾಗಲಿದೆ. ಜಿಲ್ಲೆಗೆ ವಾಡಿಕೆಯಷ್ಟು ಮಳೆಯಾದರೆ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ವಾಡಿಕೆಗಿಂತ ಜಾಸ್ತಿ ಮಳೆಯಾಗುತ್ತದೆ ಎನ್ನುವುದೇ ಸ್ವಲ್ಪ ಚಿಂತಿಸಬೇಕಾಗಿರುವ ವಿಷಯ. ಹೀಗಾಗಿಯೇ ಜಿಲ್ಲಾಡಳಿತ ಪ್ರಕೃತಿ ವಿಕೋಪ ಎದುರಿಸಲು ಸಿದ್ಧತೆ ನಡೆಸಿದೆ. ಈಗಾಗಲೇ ಜಿಲ್ಲೆಯಲ್ಲಿ ಮಾರ್ಚಿ ತಿಂಗಳಿನಿಂದಲೂ ಪೂರ್ವ ಮುಂಗಾರು ಮಳೆ ಸಾಕಷ್ಟು ಪ್ರಮಾಣದಲ್ಲಿ ಸುರಿದಿದೆ.

ಮುಂಗಾರು ಮಳೆ ಕೂಡ ಮೇ ಅಂತ್ಯ ಅಥವಾ ಜೂನ್ ಆರಂಭದಿಂದಲೇ ಶುರುವಾಗಲಿದೆ. ಹೀಗಾಗಿಯೇ ಮಳೆಗಾಲ ಎದುರಿಸಲು ಕೊಡಗು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಒಂದೆಡೆ ಈಗಾಗಲೇ ಹಾರಂಗಿ ಜಲಾಶಯದಲ್ಲಿ ಮಳೆಗಾಲದಲ್ಲಿ ಎದುರಾಗಬಹುದಾದ ಪ್ರವಾಹ, ಭೂಕುಸಿತದಂತಹ ಪರಿಸ್ಥಿತಿಗಳಲ್ಲಿ ಜನ, ಜಾನುವಾರುಗಳನ್ನು ಹೇಗೆ ರಕ್ಷಣೆ ಮಾಡಬೇಕು ಎಂದು ಪೂರ್ವ ತರಬೇತಿ ನಡೆಸಲಾಗಿದೆ. ಬೆಂಕಿ, ನೀರಿನ ಅವಘಡಗಳಲ್ಲಿ ಸಿಲುಕಿರುವ ಜನರ ರಕ್ಷಿಸುವ ಅಣಕು ಕಾರ್ಯಾಚರಣೆ ಮಾಡಲಾಗಿದೆ. ಇದೆಲ್ಲದರ ನಡುವೆ ಪ್ರಾಕೃತಿಕ ವಿಕೋಪ ಎದುರಾದಲ್ಲಿ ಜನರ ಸ್ಥಳಾಂತರಕ್ಕೂ ಸಿದ್ಧತೆ ನಡೆಸಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟರಾಜಾ ತಿಳಿಸಿದ್ದಾರೆ.

ಈಗಾಗಲೇ ತಾಲ್ಲೂಕು ಹೋಬಳಿವಾರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರವಾಹ ಪೀಡಿತ ಅಥವಾ ಭೂಕುಸಿತ ಪ್ರದೇಶಗಳ ಜನರಿಗೆ ಆಹಾರ ಕಿಟ್ಗಳನ್ನು ಸಿದ್ಧ ಮಾಡಿಟ್ಟುಕೊಳ್ಳಲು ಕೂಡ ಜಿಲ್ಲಾಧಿಕಾರಿಗಳು ಇತ್ತೀಚೆಗೆ ನಡೆದ ಅಧಿಕಾರಿಗಳ ಸಭೆಯಲ್ಲಿ ಸೂಚಿಸಿದ್ದಾರೆ. ಹಿಂದಿನ ವರ್ಷಗಳಲ್ಲಿ ಪ್ರಾಕೃತಿಕ ಅವಘಡವಾಗಿರುವ ಸ್ಥಳಗಳೇ ಮತ್ತೆ ಅಪಾಯಕಾರಿ ಲಿಸ್ಟಿನಲ್ಲಿವೆ ಎಂದು ಗುರುತ್ತಿಸಲಾಗಿದೆ. ಆದ್ದರಿಂದ ಅಂತಹ ಸ್ಥಳಗಳ ಮೇಲೆ ಹೆಚ್ಚಿನ ನಿಗಾವಹಿಸಲು ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚಿಸಿದೆ. ಒಂದು ವೇಳೆ ಮಳೆ ತೀವ್ರಗೊಂಡು, ರೆಡ್ ಅಲರ್ಟ್ ಘೋಷಿಸಿದರೆ ಯಾವೆಲ್ಲಾ ಸ್ಥಳಗಳು ಅಪಾಯಕಾರಿ ಎಂದು ಗುರುತ್ತಿಸಲಾಗಿದೆಯೋ ಅಂತಹ ಪ್ರದೇಶಗಳ ಜನರ ಸ್ಥಳಾಂತರಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಳೆ ಜಾಸ್ತಿಯಾದರೆ ಅಂತಹ ಸ್ಥಳಗಳ ಜನರಿಗೆ ನೊಟೀಸ್ ನೀಡಿ ಸ್ಥಳಾಂತರ ಮಾಡಲಾಗುವುದು.

ಅದಕ್ಕಾಗಿ ಈಗಾಗಲೇ ಶಾಲೆ, ಸಮುದಾಯ ಭವನ ಸೇರಿದಂತೆ ಹಲವೆಡೆ ನಿರಾಶ್ರಿತ ಶಿಬಿರ ತೆರೆಯಲು ಸಿದ್ಧತೆಯನ್ನು ಮಾಡಲಾಗಿದೆ ಎಂದಿದ್ದಾರೆ. ಆದರೆ ಪ್ರತೀ ವರ್ಷ ಮಳೆಗಾಲ ತೀವ್ರಗೊಂಡಾಗ ನದಿಪಾತ್ರ ಮತ್ತು ಬೆಟ್ಟಪ್ರದೇಶದ ಕುಟುಂಬಗಳನ್ನು ನಿರಾಶ್ರಿತ ಶಿಬಿರಗಳಿಗೆ ಕರೆತಂದು, ಮಳೆಗಾಲ ಮುಗಿಯುವವರೆಗೆ ಅವರನ್ನು ಶಿಬಿರಗಳಲ್ಲಿ ಇರಿಸಿ ಪುನಃ ಅವರನ್ನು ಅದೇ ಸ್ಥಳಗಳಿಗೆ ಕಳುಹಿಸುವುದು ಸರಿಯಲ್ಲ. ಇದು ಆ ಕುಟುಂಬಗಳಿಗೆ ತೀವ್ರ ತೊಂದರೆ ಆಗುತ್ತದೆ. ಜಿಲ್ಲಾಡಳಿತ, ಸರ್ಕಾರಕ್ಕೂ ಅದು ದೊಡ್ಡ ವೆಚ್ಚವಾಗಲಿದೆ. ಹೀಗಾಗಿ ಅಂತಹ ಕುಟುಂಬಗಳಿಗೆ ಶಾಶ್ವತವಾಗಿ ಸುರಕ್ಷಿತ ಸ್ಥಳಗಳಲ್ಲಿ ಮನೆಗಳನ್ನು ನೀಡುವುದು ಉತ್ತಮ ಎನ್ನುತ್ತಿದ್ದಾರೆ ಸ್ಥಳೀಯರು. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎನ್ನುವುದು ಒಂದಿಷ್ಟು ಆತಂಕ ತಂದಿಟ್ಟುರುವುದಂತು ಸತ್ಯ.