Kodagu: ತನ್ನ ಶಿಷ್ಯಂದಿರಿಗೆ ಈಜುಕೊಳವನ್ನೇ ದಸರಾ ಉಡುಗೊರೆಯಾಗಿ ನೀಡಿದ ಶಿಕ್ಷಕರು
ಸರ್ಕಾರಿ ಶಾಲೆ ಎಂದರೆ ಪೋಷಕರಿಗೆ ಒಂದಿಷ್ಟು ಅಸಡ್ಡೆ ಎನ್ನುವುದೇನು ನಿಜ. ಆದರೆ ಅಲ್ಲಿರುವ ಶಿಕ್ಷಕರಲ್ಲಿ ಕೆಲವರು ತಮ್ಮ ಶಾಲೆ ಎಂದರೆ ಇದು ನಮ್ಮ ಮನೆ ಏನೋ ಎನ್ನುವಷ್ಟೇ ಆಸಕ್ತಿ ವಹಿಸಿ ಶಾಲೆಯ ಅಭಿವೃದ್ಧಿಗೆ ಪಣತೊಡುತ್ತಾರೆ ಎನ್ನುವುದು ಮಾತ್ರ ಸುಳ್ಳಲ್ಲ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಅ.25): ಸರ್ಕಾರಿ ಶಾಲೆ ಎಂದರೆ ಪೋಷಕರಿಗೆ ಒಂದಿಷ್ಟು ಅಸಡ್ಡೆ ಎನ್ನುವುದೇನು ನಿಜ. ಆದರೆ ಅಲ್ಲಿರುವ ಶಿಕ್ಷಕರಲ್ಲಿ ಕೆಲವರು ತಮ್ಮ ಶಾಲೆ ಎಂದರೆ ಇದು ನಮ್ಮ ಮನೆ ಏನೋ ಎನ್ನುವಷ್ಟೇ ಆಸಕ್ತಿ ವಹಿಸಿ ಶಾಲೆಯ ಅಭಿವೃದ್ಧಿಗೆ ಪಣತೊಡುತ್ತಾರೆ ಎನ್ನುವುದು ಮಾತ್ರ ಸುಳ್ಳಲ್ಲ. ಹಾಗೆ ದಿನಬೆಳಗಾದರೆ ಸಾಕು ಶಾಲೆಯನ್ನೇ ತಮ್ಮ ಜೀವನ ಎಂದುಕೊಂಡಿರುವ ಶಿಕ್ಷಕರೊಬ್ಬರು ಶಾಲೆಯ ವಿದ್ಯಾರ್ಥಿಗಳು ಈಜುಕೊಳದ ಬಗ್ಗೆ ಆಸೆ ವ್ಯಕ್ತಪಡಿಸಿದ್ದೇ ತಡ ದಸರಾ ರಜೆ ಮುಗಿಸಿ ಬಂದ ವಿದ್ಯಾರ್ಥಿಗಳಿಗೆ ಈಜುಕೊಳವನ್ನೇ ಉಡುಗೊರೆಯಾಗಿ ನೀಡಿದ್ದಾರೆ.
ಹೌದು ಇಂತಹ ವಿಶೇಷ ವ್ಯಕ್ತಿತ್ವದ ಶಿಕ್ಷಕರು ಇರುವುದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಸಮೀಪ ಮುಳ್ಳೂರು ಶಾಲೆಯಲ್ಲಿ. ಈ ಶಾಲೆಯ ಮುಖ್ಯ ಶಿಕ್ಷಕ ಸತೀಶ್ ಮತ್ತು ಸಹಶಿಕ್ಷಕ ಜಾನ್ ಇಂತಹ ಹಲವು ವಿಶಿಷ್ಟ ಕೆಲಸ ಮಾಡುತ್ತಾ ಶಾಲೆಯನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ. ಕಿರಿಯ ಪ್ರಾಥಮಿಕ ಶಾಲೆಯಾಗಿರುವ ಇಲ್ಲಿ 35 ವಿದ್ಯಾರ್ಥಿಗಳಿದ್ದಾರೆ. ಬಹುತೇಕ ಬಡ ಹಾಗೂ ಮಧ್ಯಮ ಕುಟುಂಬಗಳಿಂದ ಬಂದಿರುವ ಈ ವಿದ್ಯಾರ್ಥಿಗಳು ದಸರಾ ರಜೆಗೂ ಮುನ್ನ ಸರ್ ಖಾಸಗಿ ಶಾಲೆಗಳಲ್ಲಿ ಈಜುಕೊಳ ಇರುತ್ತೆ. ನಮ್ಮ ಶಾಲೆಯಲ್ಲೂ ಇರಬೇಕಿತ್ತು ಸರ್ ಎಂದು ಕೇಳಿದ್ದರಂತೆ.
ದೇಹದ ಬಗ್ಗೆ ಕಾಮೆಂಟ್ ಮಾಡೋದು ಕೀಳು ಮನಸ್ಥಿತಿ: ರಾಷ್ಟ್ರಪ್ರಶಸ್ತಿ ವಿಜೇತ ನಟಿ ನಿತ್ಯಾ ಮೆನನ್
ಹೀಗೆ ವಿದ್ಯಾರ್ಥಿಗಳು ತಮ್ಮ ಮನೋಭಿಲಾಷೆಯನ್ನು ವ್ಯಕ್ತಪಡಿಸಿದ್ದು ಅಷ್ಟೇ. ಅಕ್ಟೋಬರ್ ತಿಂಗಳಲ್ಲಿ ನೀಡಿದ ದಸರಾ ರಜೆ ಸಂದರ್ಭ ಈ ಶಾಲೆಯ ಶಿಕ್ಷಕರಾದ ಸತೀಶ್ ಮತ್ತು ಸಹಶಿಕ್ಷಕರಾದ ಜಾನ್ ಹಾಗೂ ವಿದ್ಯಾರ್ಥಿಗಳೂ ಸೇರಿ 12 ದಿನಗಳಲ್ಲಿ ಪುಟಾಣಿ ಈಜುಕೊಳವನ್ನು ನಿರ್ಮಿಸಿಯೇ ಬಿಟ್ಟಿದ್ದಾರೆ. ಶಾಲಾ ಆವರಣದಲ್ಲಿ ಇರುವ ಚಿಕ್ಕ ಜಾಗದಲ್ಲಿ ಸ್ಥಳೀಯವಾಗಿವೇ ದೊರೆತ ಕಲ್ಲು, ಮರಳನ್ನು ಉಪಯೋಗಿಸಿ ಈಜುಕೊಳ ನಿರ್ಮಿಸಿದ್ದಾರೆ. ಜೊತೆಗೆ ತಮ್ಮ ಸ್ವಂತ ಕೈಯಿಂದಲೇ ಶಿಕ್ಷಕರು 6 ಸಾವಿರ ರೂಪಾಯಿಯನ್ನು ವಹಿಯಿಸಿ ಅದಕ್ಕೆ ಬಣ್ಣ ಬಳಿದಿದ್ದಾರೆ. ಅಲ್ಲದೆ ಈ ಈಜುಕೊಳಕ್ಕೆ ಚಿಕ್ಕದಾದ ಒಂದು ತೂಗು ಸೇತುವೆಯನ್ನು ನಿರ್ಮಿಸಿದ್ದಾರೆ.
ದಸರಾ ರಜೆ ಇದ್ದಿದ್ದರಿಂದ ಈ ರಜೆಯಲ್ಲಿ ಸ್ವತಃ ಈ ಶಿಕ್ಷಕರೇ ಗುದ್ದಲಿ, ಪಿಕಾಸಿ ಹಿಡಿದು ಮಣ್ಣು ಅಗೆದು ಸಿಮೆಂಟ್ ಕಲೆಸಿ ಅವರೇ ಕೆಲಸ ಮಾಡಿದ್ದಾರೆ. ತೂಗು ಸೇತುವೆಯನ್ನು ಸ್ವತಃ ಇವರೇ ಮಾಡಿದ್ದಾರೆ. ಹೀಗೆ ತಾವೇ ದೈಹಿಕ ಶ್ರಮ ಹಾಕಿ ಈಜುಕೊಳ ನಿರ್ಮಿಸಿ ದಸರಾ ರಜೆ ಮುಗಿಸಿ ಶಾಲೆಗೆ ಬರುತ್ತಿದ್ದಂತೆ ತಮ್ಮ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಿದ್ದಾರೆ. ಈಗ ಈ ಶಾಲೆಯ ವಿದ್ಯಾರ್ಥಿಗಳ ಸಂತಸಕ್ಕೆ ಪಾರವೇ ಇಲ್ಲ. ಶಾಲೆಗೆ ಬರುವ ವಿದ್ಯಾರ್ಥಿಗಳು ಒಂದು ಅರ್ಧ ಗಂಟೆಯಾದರೂ ಈಜುಕೊಳದಲ್ಲಿ ಇಳಿದು ಆಟವಾಡಿ ಸಂಭ್ರಮಿಸುತ್ತಿದ್ದಾರೆ. ಇದು ಈಗ ಮಕ್ಕಳ ಆಟಕ್ಕೆ ಸೀಮಿತವಾಗದೆ, ಪರಿಸರದ ಪಾಠವನ್ನು ಕಲಿಯುವುದಕ್ಕೂ ಪ್ರಯೋಗ ಶಾಲೆ ಎನ್ನುವಂತಾಗಿದೆ.
ಕಾಂತಾರ ನಂತರ ಮತ್ತೊಂದು ಐತಿಹಾಸಿಕ ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕಿಯಾದ ಸಪ್ತಮಿ ಗೌಡ
ವಿದ್ಯಾರ್ಥಿಗಳು ನಮ್ಮ ಶಾಲೆಯಲ್ಲೂ ಈಜುಕೊಳ ಇರಬೇಕಿತ್ತು ಎಂದು ಆಸೆ ವ್ಯಕ್ತಪಡಿಸಿದ್ದರು. ಹೀಗಾಗಿಯೇ ವಿದ್ಯಾರ್ಥಿಗಳ ಆಸೆಗೆ ತಕ್ಕೆ ಪ್ರತೀ ವರ್ಷದ ದಸರೆಯಲ್ಲಿ ಒಂದೊಂದು ವಿಶೇಷವಾಗಿ ಏನಾದರೂ ಒಂದನ್ನು ಮಾಡುತ್ತಿದ್ದೆವು. ಈ ಬಾರಿ ಈಜುಕೊಳ ನಿರ್ಮಿಸಿದ್ದೇವೆ ಎನ್ನುತ್ತಾರೆ ಶಿಕ್ಷಕ ಸತೀಶ್. ಶಾಲೆಯಲ್ಲಿ ಇದೊಂದೇ ಅಲ್ಲ, ಸ್ಥಳೀಯವಾಗಿ ಸಿಗುವ ವಿವಿಧ ವಸ್ತುಗಳನ್ನು ಬಳಸಿ ಶಾಲೆಯಲ್ಲಿ ಅದ್ಭುತವಾದ ಕಲಿಕೋಪಕರಣಗಳ ಕೊಠಡಿಯನ್ನು ಮಾಡಿದ್ದಾರೆ. ದೊಡ್ಡ ಲ್ಯಾಬರೋಟರಿಯೇ ಇಲ್ಲಿದ್ದು ಇದೆಲ್ಲವನ್ನೂ ಮುಖ್ಯ ಶಿಕ್ಷಕ ಸತೀಶ್ ಅವರ ಪರಿಶ್ರಮ ಎನ್ನುತ್ತಾರೆ ಗ್ರಾಮದವರು.