ಸಚಿವ ಸಂಪುಟ ವಿಸ್ತರಣೆ ಫೈನಲ್ ಎನ್ನುತ್ತಿದ್ದು, ಈಗ ಅದು ಸೋಮವಾರಕ್ಕೆ ಹೋಗಿದೆ. ಸಚಿವಸ್ಥಾನ ಆಕಾಂಕ್ಷಿಗಳ ಪಟ್ಟಿಯನ್ನು ಯಾವ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಹೈಕಮಾಂಡ್ ರಾಜ್ಯ ನಾಯಕರು ಯಾವ ರೀತಿ..

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಜು.31): ಸಚಿವ ಸಂಪುಟ ವಿಸ್ತರಣೆ ಫೈನಲ್ ಎನ್ನುತ್ತಿದ್ದು, ಈಗ ಅದು ಸೋಮವಾರಕ್ಕೆ ಹೋಗಿದೆ. ಸಚಿವಸ್ಥಾನ ಆಕಾಂಕ್ಷಿಗಳ ಪಟ್ಟಿಯನ್ನು ಯಾವ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಹೈಕಮಾಂಡ್ ರಾಜ್ಯ ನಾಯಕರು ಯಾವ ರೀತಿ ಆಕಾಂಕ್ಷಿಗಳ ಪಟ್ಟಿ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಈ ಜಿಲ್ಲೆಗೆ ಸಚಿವ ಸ್ಥಾನ ಬೇಕು ಅಂತ ಬೇಡಿಕೆ ಇಟ್ಠಿದ್ದೇವೆ, ಕೊಡುತ್ತಾರೆ ಎನ್ನುವ ಸಂಪೂರ್ಣ ವಿಶ್ವಾಸವೂ ಇದೆ ಎಂದು ಮಡಿಕೇರಿ ಶಾಸಕ ಮಂತರ್ ಗೌಡ ಹೇಳಿದ್ದಾರೆ.

ಕೊಡಗಿನ ಭಾಗಕ್ಕೆ ಸಚಿವ ಸ್ಥಾನ ನೀಡಿಲ್ಲ. ರಂಜನ್ ಅವರು ಕೆಲವೇ ತಿಂಗಳ ಅವಧಿಗೆ ಸಚಿವರಾಗಿದ್ದರು. ಆದು ಬಿಟ್ಟರೆ ಮತ್ತೆ ಸಚಿವ ಸ್ಥಾನ ನೀಡಿಲ್ಲ. ಸಚಿವ ಸ್ಥಾನ ನೀಡದಿದ್ದರೆ ಕೊಡಗಿನ ಅಭಿವೃದ್ಧಿ ಬಗ್ಗೆ ಗಂಭೀರ ಚರ್ಚೆಯಾಗಲ್ಲ. ಈ ದೃಷ್ಟಿಯಿಂದ ಒಬ್ಬರಿಗಾದರೂ ಸಚಿವ ಸ್ಥಾನ ನೀಡುವಂತೆ ಕೇಳಿದ್ದೇನೆ ಎಂದು ಮಡಿಕೇರಿ ಶಾಸಕ ಮಂತರ್ ಗೌಡ ಹೇಳಿದ್ದಾರೆ. ನಾನು ಬೇರು ಮಟ್ಟದಿಂದ ಪಕ್ಷದಲ್ಲಿ ಬೆಳೆದು ಬಂದವನು. ಯೂತ್ ಕಾಂಗ್ರೆಸ್, ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಬೆಳೆದು ಬಂದವನು. ನಾನು ಪಕ್ಷಕ್ಕೆ ತ್ಯಾಗ ಮಾಡಿದ್ದೇನೆ, ಆ ವಿಚಾರದಲ್ಲಿ ಸಚಿವಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ.

ದೆಹಲಿಗೆ ಹೋಗಿ ಸಚಿವ ಸ್ಥಾನ ಕೇಳಿದ್ದೇನೆ, ಕೇಳುವುದರಲ್ಲಿ ತಪ್ಪಿಲ್ಲ, ಕೊಡುವುದು ಬಿಡುವುದು ಪಕ್ಷಕ್ಕೆ ಬಿಟ್ಟಿದ್ದು. ಅನುದಾನವನ್ನು ನಾವು ಕೇಳುತ್ತಲೇ ಇರುತ್ತೇವೆ, ಕೇಳಿದ ಕೂಡಲೇ ಎಲ್ಲ ಅನುದಾನ ಕೊಡುವುದಿಲ್ಲ ಅಲ್ಲವೆ.? ಹಾಗೆಯೇ ಸಚಿವ ಸ್ಥಾನದಲ್ಲೂ ಕೂಡ ಕೊಡುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಜಿಲ್ಲೆಯಲ್ಲಿ ಯಾರಿಗೆ ಕೊಟ್ಟರೂ ಖುಷಿಯೇ ಎಂದು ಮಡಿಕೇರಿ ಶಾಸಕ ಮಂತರ್ ಗೌಡ ಹೇಳಿದ್ದಾರೆ.

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸಿಡಬ್ಲ್ಯೂಆರ್ಸಿ ಹೇಳಿರುವುದಕ್ಕೆ ಸಂಬಂಧಸಿದಂತೆ ಪ್ರತಿಕ್ರಿಯಿಸಿದ ಶಾಸಕ ಮಂತರ್ ಗೌಡ ಅವರು ಕರ್ನಾಟಕ ಅಥವಾ ತಮಿಳುನಾಡು ಸರ್ಕಾರ ಆಗಿರಬಹುದು, ಎರಡು ಕೂಡ ಸಿಡಬ್ಲ್ಯೂಆರ್ ಸಿ ನಿಯಮಕ್ಕೆ ಒಳಪಟ್ಟಿದ್ದೇವೆ. ಇಬ್ಬರು ಈ ನಿಯಮಗಳನ್ನು ಪಾಲಿಸಬೇಕು ಸರಿ. ಆದರೆ ಬರಗಾಲದಲ್ಲಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಹೋಗಲು ಅವಕಾಶವಿದೆ. ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.

ಉತ್ತಮ ಮಳೆ

ಅದನ್ನು ನಾವು ಮಾಡಬೇಕಾಗಿದೆ ಎಂದು ಮಡಿಕೇರಿ ಶಾಸಕ ಮಂತರ್ ಗೌಡ ಅಭಿಪ್ರಾಯಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ಕೊಡಗಿನಲ್ಲಿ ಮಡಿಕೇರಿ, ವಿರಾಜಪೇಟೆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಹಾರಂಗಿ ಜಲಾಶಯ ತುಂಬಿದೆ. ಒಳಹರಿವು, ಹೊರಹರಿವು ಎರಡನ್ನು ಸರಿದೂಗಿಸಿಕೊಂಡು ನದಿಗೆ ನೀರು ಹರಿಸಲಾಗುತ್ತಿದೆ. ಆದರೆ ಮಡಿಕೇರಿ ಭಾಗದಲ್ಲಿ ಮಳೆ ಜಾಸ್ತಿಯಾಗಿ ಒಂದಿಷ್ಟು ಸಮಸ್ಯೆಯೂ ಆಗುತ್ತಿದೆ.

ತಮಿಳುನಾಡಿಗೆ ನೀರು ಕೊಡುವುದು ಬಿಡುವುದು ಸರ್ಕಾರಕ್ಕೆ ಬಿಟ್ಟಿದ್ದು. ಆದರೆ ಅದಕ್ಕೂ ಮೊದಲು ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಬರವಿದೆ. ಇಲ್ಲಿನ ಕೆರೆ ಕಟ್ಟೆಗಳ ತುಂಬಿಸುವ ಕೆಲಸವಾಗಲಿ. ಮೊದಲು ನಾಲೆಗಳ ಮೂಲಕ ನೀರು ಹರಿಸಿ ಕೆರೆಕಟ್ಟೆಗಳ ತುಂಬಿಸಲಿ. ನಂತರ ತಮಿಳುನಾಡಿಗೆ ನೀರು ಬಿಡುವ ವಿಚಾರ ಎಂದು ಹೇಳುವ ಮೂಲಕ ಪರೋಕ್ಷವಾಗಿ ತಮಿಳುನಾಡಿಗೆ ನೀರು ಬಿಡುವುದನ್ನು ಶಾಸಕ ಮಂತರ್ ಗೌಡ ವಿರೋಧಿಸಿದ್ದಾರೆ.