- Home
- Karnataka Districts
- ಮಲ್ಲಳ್ಳಿ ಜಲಪಾತದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿದ ಆಂಧ್ರದ ವಿದ್ಯಾರ್ಥಿಗಳು: ಕೊನೆಗೂ ನಡೆದ ರೋಚಕ ರಕ್ಷಣೆ
ಮಲ್ಲಳ್ಳಿ ಜಲಪಾತದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿದ ಆಂಧ್ರದ ವಿದ್ಯಾರ್ಥಿಗಳು: ಕೊನೆಗೂ ನಡೆದ ರೋಚಕ ರಕ್ಷಣೆ
ಪ್ರವಾಸಿ ತಾಣವಾದ ಮಲ್ಲಳ್ಳಿ ಜಲಪಾತದಲ್ಲಿ ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದ ಆಂಧ್ರಪ್ರದೇಶದ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ಅಗ್ನಿಶಾಮಕ ಸಿಬ್ಬಂದಿ ಸಾಹಸಮಯ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಸಾಹಸಮಯ ಕಾರ್ಯಾಚರಣೆ
ಕೊಡಗು (ಜು.06): ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮಲ್ಲಳ್ಳಿ ಜಲಪಾತದಲ್ಲಿ ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದ ಆಂಧ್ರಪ್ರದೇಶದ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ಅಗ್ನಿಶಾಮಕ ಸಿಬ್ಬಂದಿ ಸಾಹಸಮಯ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಜಲಪಾತದ ಬಂಡೆ ಹಿಡಿದು ಜೀವ ಉಳಿಸಿಕೊಳ್ಳಲು ಹೋರಾಡಿದ ವಿದ್ಯಾರ್ಥಿಗಳು ಕೊನೆಗೂ ಸುರಕ್ಷಿತವಾಗಿ ಹೊರಬಂದಿದ್ದಾರೆ.
ಆಂಧ್ರಪ್ರದೇಶ ಮೂಲದವರು
ರಕ್ಷಿಸಲ್ಪಟ್ಟವರನ್ನು ಆಂಧ್ರಪ್ರದೇಶ ಮೂಲದ ಗಣೇಶ್ ನಾಯಕ್ (21) ಹಾಗೂ ಸಂತೋಷ್ ಕುಮಾರ್ (23) ಎಂದು ಗುರುತಿಸಲಾಗಿದೆ. ಪ್ರವಾಸಕ್ಕಾಗಿ ಸ್ನೇಹಿತರೊಂದಿಗೆ ಕೊಡಗಿಗೆ ಬಂದಿದ್ದ ಇಬ್ಬರೂ, ಜಲಪಾತದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ ಎಂದು ಭಾವಿಸಿ, ಎಚ್ಚರಿಕೆಗಾಗಿ ಅಳವಡಿಸಿದ್ದ ರಕ್ಷಣಾ ಬೇಲಿಯನ್ನು ದಾಟಿ ನೀರಿನೊಳಗೆ ಇಳಿದಿದ್ದರು.
ಜೀವ ಉಳಿಸಿಕೊಳ್ಳುವ ಏಕೈಕ ಪ್ರಯತ್ನ
ಆದರೆ ಇದೇ ವೇಳೆ ಜಲಪಾತದ ಮೇಲ್ಭಾಗದಲ್ಲಿರುವ ವಿದ್ಯುತ್ ಉತ್ಪಾದನಾ ಘಟಕದಿಂದ ಏಕಾಏಕಿ ಹೆಚ್ಚಿನ ಪ್ರಮಾಣದ ನೀರನ್ನು ಹರಿಬಿಡಲಾಗಿತ್ತು. ಕ್ಷಣಾರ್ಧದಲ್ಲೇ ನೀರಿನ ಹರಿವು ಹೆಚ್ಚಾಗಿ, ಇಬ್ಬರು ವಿದ್ಯಾರ್ಥಿಗಳು ಪ್ರಬಲ ಸೆಳೆತದ ನಡುವೆ ಸಿಲುಕಿಕೊಂಡರು. ತಪ್ಪಿಸಿಕೊಳ್ಳಲು ಸಾಧ್ಯವಾಗದೆ, ಜೀವ ಉಳಿಸಿಕೊಳ್ಳುವ ಏಕೈಕ ಪ್ರಯತ್ನವಾಗಿ ಜಲಪಾತದ ಮಧ್ಯದಲ್ಲಿದ್ದ ಬಂಡೆಯನ್ನು ಹಿಡಿದು ಸುಮಾರು ಒಂದು ಗಂಟೆ ಕಾಲ ಸಹಾಯಕ್ಕಾಗಿ ಕಾಯಬೇಕಾಯಿತು.
ರಕ್ಷಣಾ ಉಪಕರಣಗಳ ನೆರವಿನಿಂದ ಕಾರ್ಯಾಚರಣೆ
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹಗ್ಗ ಸೇರಿದಂತೆ ವಿಶೇಷ ರಕ್ಷಣಾ ಉಪಕರಣಗಳ ನೆರವಿನಿಂದ ಕಾರ್ಯಾಚರಣೆ ನಡೆಸಿ, ಅಪಾಯದಲ್ಲಿದ್ದ ಇಬ್ಬರನ್ನೂ ಸುರಕ್ಷಿತವಾಗಿ ಹೊರತಂದರು. ಸ್ಥಳದಲ್ಲಿದ್ದ ಪ್ರವಾಸಿಗರು ಹಾಗೂ ಸ್ಥಳೀಯರು ಕಾರ್ಯಾಚರಣೆಯನ್ನು ವೀಕ್ಷಿಸಿದರು.
ಪ್ರವಾಸಿಗರಿಗೆ ಮನವಿ
ರಕ್ಷಣೆ ಬಳಿಕ ಇಬ್ಬರು ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರವಾಸಿ ತಾಣಗಳಲ್ಲಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವುದು ಎಷ್ಟು ದೊಡ್ಡ ಅಪಾಯಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಘಟನೆ ಮತ್ತೊಮ್ಮೆ ಎಚ್ಚರಿಕೆಯ ಗಂಟೆಯಾಗಿದೆ. ಅಧಿಕಾರಿಗಳು ಎಚ್ಚರಿಕೆ ಫಲಕಗಳು ಹಾಗೂ ರಕ್ಷಣಾ ಬೇಲಿಗಳನ್ನು ನಿರ್ಲಕ್ಷಿಸದೆ, ಸುರಕ್ಷತಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರವಾಸಿಗರಿಗೆ ಮನವಿ ಮಾಡಿದ್ದಾರೆ.

