ಅಕ್ರಮವಾಗಿ ಕಾಟಿಕೊಂದನ್ನು ಕೊಂದು ಮಾಂಸವನ್ನಾಗಿಸಿ ಸಾಗಿಸುತ್ತಿದ್ದ ಇಬ್ಬರು ಕಳ್ಳಬೇಟೆಗಾರರ ಮೇಲೆ ಕೊಡಗು ಅರಣ್ಯ ಇಲಾಖೆ ಸಿಬ್ಬಂದಿ ಫೈರಿಂಗ್ ಮಾಡಿದ್ದಾರೆ. ಮಡಿಕೇರಿ ತಾಲ್ಲೂಕಿನ ಕೊಳಕೇರಿ ಗ್ರಾಮದವರಾದ..
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಜು.17): ಅಕ್ರಮವಾಗಿ ಕಾಟಿಕೊಂದನ್ನು ಕೊಂದು ಮಾಂಸವನ್ನಾಗಿಸಿ ಸಾಗಿಸುತ್ತಿದ್ದ ಇಬ್ಬರು ಕಳ್ಳಬೇಟೆಗಾರರ ಮೇಲೆ ಕೊಡಗು ಅರಣ್ಯ ಇಲಾಖೆ ಸಿಬ್ಬಂದಿ ಫೈರಿಂಗ್ ಮಾಡಿದ್ದಾರೆ. ಮಡಿಕೇರಿ ತಾಲ್ಲೂಕಿನ ಕೊಳಕೇರಿ ಗ್ರಾಮದವರಾದ ಯಾಕೂಬ್ ಮತ್ತು ಸುಬೈರ್ ಎಂಬುವರ ಮೇಲೆ ದಾಳಿ ಮಡಿಕೇರಿ ವಲಯ ಅರಣ್ಯ ಅಧಿಕಾರಿ ಶಿವಕುಮಾರ್ ಮತ್ತು ಸಿಬ್ಬಂದಿ ಕಳ್ಳಬೇಟೆಗಾರರ ಮೇಲೆ ಫೈರಿಂಗ್ ಮಾಡಿದ್ದಾರೆ. ಬಳಿಕ ಜೀಪು ಪರಿಶೀಲಿಸಿದಾಗ ಅದರಲ್ಲಿ 260 ಕೆ.ಜಿ. ಕಾಟಿ ಮಾಂಸ, ಚಾಕು, ಚೂರಿ ಸೇರಿದಂತೆ ಹಲವು ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಅಲ್ಲದೆ ಮಾಂಸ ಸಾಗಿಸುತ್ತಿದ್ದ ಜೀಪನ್ನು ವಶಕ್ಕೆ ಪಡೆದಿದ್ದಾರೆ. ಗುರುವಾರ ರಾತ್ರಿ ಒಂಭತ್ತುವರೆ ಗಂಟೆಯ ಸಮಯಕ್ಕೆ ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರು ಸಮೀಪದಲ್ಲಿ ಕಾದು ನಿಂತಿದ್ದ ಅರಣ್ಯ ಪೊಲೀಸರು ಆರೋಪಿಗಳ ಜೀಪು ಬರುತ್ತಿದ್ದಂತೆ ತಡೆಯೊಡ್ಡಲು ಹೋಗಿದ್ದಾರೆ. ಆದರೆ ಆರೋಪಿಗಳು ಅರಣ್ಯ ಪೊಲೀಸರ ಮೇಲೆ ಜೀಪು ಚಲಾಯಿಸಲು ಮುಂದಾದರು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದಕ್ಕೂ ಜೀಪು ನಿಲ್ಲಿಸದೇ ಇದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ಫೈರಿಂಗ್ ಮಾಡಿದ್ದಾರೆ. ಆರೋಪಿಗಳು ಅಲ್ಲಿಂದಲೂ ತಪ್ಪಿಸಿಕೊಂಡು ಕಾಫಿ ತೋಟದಲ್ಲಿ ಕಣ್ಮರೆಯಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಮಡಿಕೇರಿ ಡಿಎಫ್ಓ ಅಭಿಷೇಕ್ ಅವರು ಪಟ್ಟಿಘಾಟ್ ಅರಣ್ಯ ಪ್ರದೇಶದಲ್ಲಿ ಬೇಟೆಯಾಡಿ ಕಾಟಿಯನ್ನು ಮಾಂಸವನ್ನಾಗಿಸಿ ಸಾಗಿಸುತ್ತಿದ್ದ ಖಚಿತ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ನಮ್ಮ ಸಿಬ್ಬಂದಿಯ ಮೇಲೆಯೇ ಅವರು ಜೀಪು ಚಲಾಯಿಸಲು ಮುಂದಾದಾಗ ಅನಿವಾರ್ಯವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಬೆಳಿಗ್ಗೆ ಆರೋಪಿಗಳಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಪೊಲೀಸರ ಕಡೆಯಿಂದ ಗೊತ್ತಾಯಿತು. ಪರಿಶೀಲಿಸಿದಾಗ ರಾತ್ರಿ ಘಟನೆಯಲ್ಲಿ ತಪ್ಪಿಸಿಕೊಂಡವರು ಇವರೇ ಎನ್ನುವುದು ಸಾಬೀತಾಗಿದೆ.
ಪ್ರಕರಣ ದಾಖಲು
ಸ್ವಲ್ಪ ದಿನಗಳ ಮುಂಚೆಯೂ ಮಡಿಕೇರಿ ಸಮೀಪದಲ್ಲಿ ಕಾಟಿಯೊಂದನ್ನು ಕೊಂದು ಸಾಗಿಸಿರುವುದು ಪತ್ತೆಯಾಗಿತ್ತು. ಆಗಲೂ ಅದರ ಹಿಂದೆ ದೊಡ್ಡದೊಂದು ಗ್ಯಾಂಗ್ ಇರುವುದು ಗೊತ್ತಾಗಿತ್ತು. ಕಾಟಿ ಮಾಂಸಕ್ಕೆ ಕೇರಳ, ದುಬೈ ಮತ್ತು ಹೊರದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಆದ್ದರಿಂದಲೇ ಇಲ್ಲಿ ಅವುಗಳನ್ನು ಕೊಂದು ಮಾಂಸವನ್ನಾಗಿಸಿ ಸಾಗಿಸುತ್ತಿರುವ ಜಾಲ ಇರುವುದು ಗೊತ್ತಾಗಿದೆ. ಸದ್ಯ ಆರೋಪಿಗಳು ಚಿಕಿತ್ಸೆ ಪಡೆಯುತ್ತಿರುವುದರಿಂದ ಅವರನ್ನು ವಿಚಾರಣೆ ಮಾಡಲು ಸಾಧ್ಯವಾಗಿಲ್ಲ. ಅವರ ವಿರುದ್ಧ ವನ್ಯಜೀವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರು ಗುಣಮುಖರಾದ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದಿದ್ದಾರೆ.
ಆದರೆ ಆರೋಪಿಗಳನ್ನು ಕೇಳಿದರೆ ನಾವು ಭಾಗಮಂಡಲದಿಂದ ಬೆಟಗೇರಿಗೆ ಹೋಗಲು ಜೀಪಿನಲ್ಲಿ ಬರುತ್ತಿದ್ದೆವು. ಅರಣ್ಯ ಇಲಾಖೆಯವರು ಯಾವುದೇ ಕಾರಣವಿಲ್ಲದೆ ನಮ್ಮ ಮೇಲೆ ಗುಂಡಿನ ದಾಳಿ ಮಾಡಿದರು. ನಾವು ಜೀಪು ನಿಲ್ಲಿಸಿದರೂ ಬಿಡದೆ ಫೈರಿಂಗ್ ಮಾಡಿದ್ದರಿಂದ ನಾವು ಜೀಪಿನಿಂದ ಇಳಿದು ಓಡಬೇಕಾಯಿತು. ಯಾವ ಕಾರಣಕ್ಕೆ ನಮ್ಮ ಮೇಲೆ ದಾಳಿ ಮಾಡಿದರು ಎನ್ನುವುದೇ ಗೊತ್ತಾಗಲಿಲ್ಲ. ಹೀಗಾಗಿಯೇ ನಾವು ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ ಎಂದು ಏನೂ ಗೊತ್ತಿಲ್ಲದ ಅಮಾಯಕರತೆ ನಟಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಆರೋಪಿಗಳಿಂದ ಹೇಳಿಕೆ ಪಡೆದುಕೊಂಡಿದ್ದಾರೆ.


