Asianet Suvarna News Asianet Suvarna News

Kodagu: ಊರ ಹೆಬ್ಬಾಗಿಲಲ್ಲೇ ಗಬ್ಬೆದ್ದು ನಾರುವ ಕಸ, 15 ದಿನಗಳಲ್ಲಿ ಘಟಕ ಬಳಕೆ ಮಾಡುವುದಾಗಿ ಸಿಇಒ ಭರವಸೆ

ಊರ ಹೆಬ್ಬಾಗಿಲಿನ ಹೆದ್ದಾರಿ ಪಕ್ಕದಲ್ಲೇ ಬೆಟ್ಟದಂತೆ ಬೆಳೆಯುತ್ತಿರುವ ಕಸದ ರಾಶಿ. ಕಸದ ರಾಶಿಯಲ್ಲಿ ಹುಡುಕಾಡಿ ಮೇಯುತ್ತಿರುವ ದನ, ಎಮ್ಮೆಗಳು. ಮಾಂಸದ ತ್ಯಾಜ್ಯಗಳನ್ನು ಹುಡುಕಾಡುತ್ತಿರುವ ನಾಯಿಗಳು.   ಕಸದ ರಾಶಿಯಿಂದ ಗಾಳಿ ಮೂಲಕ ಬರುತ್ತಿರುವ ಗಬ್ಬುವಾಸನೆ ತಡೆಯಲಾರದೆ ಮಾಸ್ಕ್ ಬಳಸಿ ಮೂಗು ಮುಚ್ಚಿ ನಿಂತಿರುವ ಜನರು ಇವೆಲ್ಲ ಕಂಡುಬಂದಿದ್ದು ಕೊಡಗಿನ ಶನಿವಾರಸಂತೆಯಲ್ಲಿ.

Kodagu district shanivarasanthe people have problems with garbage gow
Author
First Published Jan 27, 2023, 5:47 PM IST

ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಜ.27): ಕೊಡಗು ಜಿಲ್ಲೆ ಎಂದರೆ ತನ್ನ ಪ್ರಕೃತಿ ಸೌಂದರ್ಯದಿಂದ ದೇಶ, ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಅದನ್ನು ಎಷ್ಟು ಸಾಧ್ಯವೋ ಅಷ್ಟು ಸ್ವಚ್ಛವಾಗಿ ಉಳಿಸಿಕೊಳ್ಳಬೇಕಾಗಿರುವುದು ಎಲ್ಲರ ಜವಾಬ್ದಾರಿ. ಆದರೆ ಇಲ್ಲಿ ಗ್ರಾಮಾಡಳಿತವೇ ನಿತ್ಯ ಕಸದ ರಾಶಿಯನ್ನು ಸುರಿದು ಇಡೀ ಪರಿಸರವನ್ನು ಹಾಳು ಮಾಡುತ್ತಿದೆ. ಊರ ಹೆಬ್ಬಾಗಿಲಿನ ಹೆದ್ದಾರಿ ಪಕ್ಕದಲ್ಲೇ ಬೆಟ್ಟದಂತೆ ಬೆಳೆಯುತ್ತಿರುವ ಕಸದ ರಾಶಿ. ಕಸದ ರಾಶಿಯಲ್ಲಿ ಹುಡುಕಾಡಿ ಮೇಯುತ್ತಿರುವ ದನ, ಎಮ್ಮೆಗಳು. ಮಾಂಸದ ತ್ಯಾಜ್ಯಗಳನ್ನು ಹುಡುಕಾಡುತ್ತಿರುವ ನಾಯಿಗಳು. ಕಸದ ರಾಶಿಯಿಂದ ತೇಲಿ ಬಂದು ರಸ್ತೆಯ ಮೇಲೆ ಬೀಳುತ್ತಿರುವ ಪ್ಲಾಸ್ಟಿಕ್, ಕಸದ ತುಂಡುಗಳು. ಕಸದ ರಾಶಿಯಿಂದ ಗಾಳಿ ಮೂಲಕ ಬರುತ್ತಿರುವ ಗಬ್ಬುವಾಸನೆ ತಡೆಯಲಾರದೆ ಮಾಸ್ಕ್ ಬಳಸಿ ಮೂಗು ಮುಚ್ಚಿ ನಿಂತಿರುವ ಜನರು. ಇಂತಹ ದೃಶ್ಯಗಳು ನಿತ್ಯ ಕಂಡುಬರುವುದು ಸಾಮಾನ್ಯ. ಅಷ್ಟಕ್ಕೂ ಈ ದೃಶ್ಯಗಳು ಕಂಡು ಬರುತ್ತಿರುವುದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯಲ್ಲಿ.

ರಸ್ತೆ ಬದಿಯಲ್ಲಿ ಕಸ ಸುರಿಯಬೇಡಿ, ಸುರಿದರೆ 20 ಸಾವಿರ ದಂಡ ವಿಧಿಸಲಾಗುತ್ತದೆ ಎನ್ನುವ ನಿಯಮವನ್ನು ಪಂಚಾಯಿತಿ ಮಾಡಿದೆ. ಅಷ್ಟೇ ಅಲ್ಲ, ಇಲ್ಲಿ ಯಾರೂ ಕಸ ಸುರಿಯಬಾರದು ಎಂದು ಸಿ.ಸಿ. ಕ್ಯಾಮೆರಾಗಳನ್ನು ಪಂಚಾಯಿತಿ ಅಧಿಕಾರಿಗಳು ಅಳವಡಿಸಿದ್ದಾರೆ. ಆದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಪಂಚಾಯಿತಿಯೇ ರಸ್ತೆ ಬದಿಯಲ್ಲಿ ಲೋಡ್ ಗಟ್ಟಲೆ ಕಸ ಸುರಿದರೆ ಏನು ಮಾಡುವುದು. ಅಷ್ಟಕ್ಕೂ ಕಸ ಸುರಿಯುತ್ತಿರುವುದು ಯಾವುದೇ ಕಾಡು ದಾರಿಯ ರಸ್ತೆ ಬದಿಯಲ್ಲಿ ಅಲ್ಲ. ಬದಲಾಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಹೆಬ್ಬಾಗಿಲಿನಲ್ಲೇ ಕಸ ಸುರಿಯಲಾಗುತ್ತಿದೆ.

ಹೀಗಾಗಿ ಯಾರಾದರೂ ಈ ರಸ್ತೆಯ ಮೂಲಕ ಬಂತೆಂದರೆ ಕಸದ ರಾಶಿ, ಗಬ್ಬು ವಾಸನೇ ಸ್ವಾಗತ ಮಾಡುತ್ತದೆ. ಅದರಲ್ಲೂ ಶಾಲಾ ಕಾಲೇಜು ಮತ್ತು ಸಾರ್ವಜನಿಕ ಆಸ್ಪತ್ರೆಗಳು ಪಕ್ಕದಲ್ಲಿಯೇ ಇದ್ದರೂ ಅಲ್ಲಿಯೇ ಕಸ ಸುರಿಯಲಾಗುತ್ತಿದೆ. ಇದರಿಂದಾಗಿ ಆಸ್ಪತ್ರೆಗೆ ಬರುವ ನೂರಾರು ರೋಗಿಗಳು ಪಡಬಾರದ ಕಷ್ಟಪಡುವಂತೆ ಆಗಿದೆ. ಆಸ್ಪತ್ರೆಯ ಗೇಟ್ ಬಳಿಯೇ ಕಸದ ರಾಶಿ ಇದ್ದು ಅಲ್ಲಿಂದ ಹೊಮ್ಮುವ ವಾಸನೆಯನ್ನು ಸೇವಿಸಿಯೇ ರೋಗಿಗಳು ಮತ್ತು ಅವರ ಸಂಬಂಧಿಕರು ಓಡಾಡಬೇಕಾಗಿದೆ. ರಸ್ತೆಯ ಮತ್ತೊಂದು ಬದಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಕಾಲೇಜುಗಳಿದ್ದು, ನೂರಾರು ವಿದ್ಯಾರ್ಥಿಗಳು, ಶಿಕ್ಷಕರು ನಿತ್ಯ ವಾಸನೆಯಲ್ಲೇ ನಿತ್ಯ ದಿನ ದೂಡಬೇಕಾಗಿದೆ ಎನ್ನುವುದು ಗ್ರಾಸ್ಥರಾದ ಯಶ್ವಂತ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ಅಕ್ರಮ ಕಸಾಯಿಖಾನೆ ಉತ್ತರಪ್ರದೇಶದ ರೀತಿ ನೆಲಸಮ: ಗೋವುಗಳ ರಕ್ಷಣೆ

ಕಸವನ್ನು ಊರ ಹೆಬ್ಬಾಗಿಲಿನಲ್ಲಿ ಅದರಲ್ಲೂ ಆಸ್ಪತ್ರೆ, ಶಾಲಾ ಕಾಲೇಜುಗಳಿದ್ದರೂ ಅಲ್ಲಿಯೇ ಕಸವನ್ನು ಸುರಿಯುತ್ತಿರುವುದರಿಂದ ಎಲ್ಲರಿಗೂ ತೀವ್ರ ತೊಂದರೆಯಾಗುತ್ತಿದೆ. ನಾಯಿ, ಎಮ್ಮೆ, ದನಗಳು ಹೆದ್ದಾರಿಗೆ ಬಂದು ವಾಹನ ಸವಾರರಿಗೂ ತೀವ್ರ ತೊಂದರೆ ಆಗುತ್ತಿದೆ. ಶಾಲಾ ವಿದ್ಯಾರ್ಥಿಗಳಿಗೆ ಕಾಂಪೌಂಡ್ ಪಕ್ಕದಲ್ಲಿಯೇ ಬಿಸಿಯೂಟ ತಯಾರಿಸಲಾಗುತ್ತದೆ. ಈ ವೇಳೆ ಕಸ ಗಾಳಿಯಲ್ಲಿ ಹಾರಿ ಬಂದು ಅಡುಗೆಗೆ ಬೀಳುವ ಸಾಧ್ಯತೆಯೂ ಇದೆ. ಈ ಎಲ್ಲಾ ಸಮಸ್ಯೆಗಳನ್ನು ಪಂಚಾಯಿತಿಯ ಅಧ್ಯಕ್ಷರು ಮತ್ತು ಪಿಡಿಓ ಅವರ ಗಮನಕ್ಕೆ ತರಲಾಗಿದೆ. ಕಳೆದ ಎಂಟು ವರ್ಷಗಳಿಂದ ತಹಶೀಲ್ದಾರ್ ಮತ್ತು ಶಾಸಕರ ಗಮನಕ್ಕೂ ತಂದು ಕಸವನ್ನು ಇಲ್ಲಿ ಹಾಕದಂತೆ ಮನವಿ ಮಾಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಲಕ್ಷಾಂತರ ರೂಪಾಯಿ ವ್ಯಯಿಸಿ ಕಸ ವಿಲೇವಾರಿ ಘಟಕವನ್ನು ನಿರ್ಮಿಸಿದ್ದರೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕಸವನ್ನು ಸ್ಥಳಾಂತರ ಮಾಡದೆ, ಇದೇ ಜಾಗದಲ್ಲಿಯೇ ಕಸ ಸುರಿಯಲಾಗುತ್ತಿದೆ ಎಂದು ಸ್ಥಳೀಯರಾದ ನಟೇಶ್ ಅವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

BIG 3: ಇಲ್ಲಿ ಎಲ್ಲಿ ನೋಡಿದ್ರೂ ಕಸ.. ಕಸ.. ಕಸ..! ವಾಸನೆ ತಾಳಲಾರದೇ ಸ್ಥಳಿಯರೆಲ್ಲಾ ನಿತ್ಯ ಆಕ್ರೋಶ!

ಶಾಲಾ ಕಾಲೇಜು ಮತ್ತು ಆಸ್ಪತ್ರೆ ಇರುವ ಸ್ಥಳದಲ್ಲಿಯೇ ಹೆದ್ದಾರಿ ಪಕ್ಕದಲ್ಲಿ ಕಸ ಸುರಿಯುತ್ತಿರುವುದನ್ನು ನಿಲ್ಲಿಸಿ ಆದಷ್ಟು ಬೇಗ ಇರುವ ಕಸವನ್ನು ಇಲ್ಲಿಂದ ಸ್ಥಳಾಂತರ ಮಾಡಬೇಕು. ಇಲ್ಲದಿದ್ದರೆ ಪಂಚಾಯಿತಿ ಮುಂಭಾಗಕ್ಕೆ ಕಸ ಸುರಿಯಬೇಕಾಗುತ್ತದೆ ಎಂದು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪಂಚಾಯಿತಿ ಸಿಇಓ ಡಾ ಆಕಾಶ್ ಅವರು ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿದ್ದು ಆದಷ್ಟು ಬೇಗವೇ ಕಸ ವಿಲೇವಾರಿಗೆ ಘಟಕಕ್ಕೆ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಆದಷ್ಟೂ ಬೇಗ ಕಸವನ್ನು ಅಲ್ಲಿಂದ ತೆರವು ಮಾಡಬೇಕು ಎನ್ನುವುದು ಸುವರ್ಣ ನ್ಯೂಸ್‍ನ ಆಗ್ರಹ.

Follow Us:
Download App:
  • android
  • ios