ಶಿವಮೊಗ್ಗ ಅಕ್ರಮ ಕಸಾಯಿಖಾನೆ ಉತ್ತರಪ್ರದೇಶದ ರೀತಿ ನೆಲಸಮ: ಗೋವುಗಳ ರಕ್ಷಣೆ
ಕಸಾಯಿಖಾನೆಯಲ್ಲಿ ಮಾಂಸಕ್ಕಾಗಿ ಅಕ್ರಮವಾಗಿ ದನಗಳನ್ನು ವಧಿಸಲಾಗಿದ್ದು, ಗೋ ಮಾಂಸ ಕೂಡ ಪತ್ತೆಯಾಗಿದೆ. ಏಳಕ್ಕೂ ಹೆಚ್ಚು ದನಗಳನ್ನು ಕಡಿದು ಹಾಕಿದ್ದ ದಂಧೆಕೋರರು 12ಕ್ಕೂ ಹೆಚ್ಚು ಗೋವುಗಳನ್ನು ಕಸಾಯಿಖಾನೆಯಲ್ಲಿ ಕಟ್ಟಿ ಹಾಕಿದ್ದರು.
ಶಿವಮೊಗ್ಗ(ಜ.14): ಶಿವಮೊಗ್ಗದ ಸೂಳೇಬೈಲು ಬಡಾವಣೆಯಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಗೋ ಕಸಾಯಿಖಾನೆ ಮೇಲೆ ಶುಕ್ರವಾರ ದಾಳಿ ನಡೆಸಿದ ಪೊಲೀಸರು 12 ಗೋವುಗಳನ್ನು ರಕ್ಷಿಸಿದ್ದಾರೆ. ಇದೇ ವೇಳೆ ಉತ್ತರ ಪ್ರದೇಶ ಮಾದರಿ ಕಾರ್ಯಾಚರಣೆ ಮಾಡಿದ ಪಾಲಿಕೆ ಅಧಿಕಾರಿಗಳು ಜೆಸಿಬಿ ಬಳಸಿ ಕಸಾಯಿಖಾನೆ ನೆಲಸಮ ಮಾಡಿದ್ದಾರೆ.
ಈ ಕಸಾಯಿಖಾನೆಯಲ್ಲಿ ಮಾಂಸಕ್ಕಾಗಿ ಅಕ್ರಮವಾಗಿ ದನಗಳನ್ನು ವಧಿಸಲಾಗಿದ್ದು, ಗೋ ಮಾಂಸ ಕೂಡ ಪತ್ತೆಯಾಗಿದೆ. ಏಳಕ್ಕೂ ಹೆಚ್ಚು ದನಗಳನ್ನು ಕಡಿದು ಹಾಕಿದ್ದ ದಂಧೆಕೋರರು 12ಕ್ಕೂ ಹೆಚ್ಚು ಗೋವುಗಳನ್ನು ಕಸಾಯಿಖಾನೆಯಲ್ಲಿ ಕಟ್ಟಿಹಾಕಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
SHIVAMOGGA: ಜಿಲ್ಲೆಯಲ್ಲಿ ಚರ್ಮಗಂಟು ರೋಗಕ್ಕೆ 1057 ಜಾನುವಾರು ಬಲಿ!
ಸೂಳೇಬೈಲು ಬಡಾವಣೆಯ ಅಜೀಜ್ ಎಂಬಾತ ನಿರ್ಮಿಸಿದ್ದ ಗೋಮಾಂಸದ ಅಕ್ರಮ ಕಸಾಯಿಖಾನೆ ಕಟ್ಟಡವನ್ನು ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಚನ್ನಬಸಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನೆಲಸಮ ಮಾಡಲಾಯಿತು.
ಅಜೀಜ್ ಮನೆ ಮೇಲೆ ನಿಖರ ಮಾಹಿತಿ ಮೇರೆಗೆ ತುಂಗಾ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಜಂಟಿ ದಾಳಿ ಮಾಡಿದ್ದು, ರಕ್ಷಣೆ ಮಾಡಿದ 12 ಹಸುಗಳನ್ನು ಗೋಶಾಲೆಗೆ ಬಿಟ್ಟಿದ್ದಾರೆ. ಆರೋಪಿ ಅಜೀಜ್ ಪರಾರಿಯಾಗಿದ್ದು, ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ. ಮಿಥುನ್ ತಿಳಿಸಿದ್ದಾರೆ.
ಗೋವುಗಳ ಕಾಲುಗಳನ್ನು ಕಟ್ಟಿಕುತ್ತಿಗೆಯನ್ನು ಸೀಳಿ ಹತ್ಯೆ ಮಾಡಲಾಗಿದೆ. ಅವುಗಳನ್ನು ಕೊಟ್ಟಿಗೆಯ ಒಂದು ಮೂಲೆಯಲ್ಲಿ ಹಾಕಲಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದ ಹಸುಗಳನ್ನು ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.