ಶಕ್ತಿ ಯೋಜನೆ ಎಫೆಕ್ಟ್: ಸಾರಿಗೆ ಸಿಬ್ಬಂದಿಗಿಲ್ಲ ವೇತನ ಗ್ಯಾರಂಟಿ, ಪಗಾರ ಸಿಗದೆ ಪರದಾಟ..!
ಜುಲೈ ತಿಂಗಳ ಪಗಾರ ಆ.10 ಆದರೂ ಸಿಬ್ಬಂದಿ ಕೈ ಸೇರಿಲ್ಲ, ಸರ್ಕಾರದ ಶಕ್ತಿ ಯೋಜನೆಯಿಂದ ಶೂನ್ಯ ಟಿಕೆಟ್, ಸಮಯಕ್ಕೆ ಸರಿಯಾಗಿ ಬರ್ತಾ ಇಲ್ಲ ಸರ್ಕಾರದದ ಆರ್ಥಿಕ ನೆರವು, ಸಮಯಕ್ಕೆ ಸರಿಯಾಗಿ ವೇತನ ಕೈ ಸೇರದೆ ಇಲ್ಲಿನ ಕೆಕೆಆರ್‌ಟಿಸಿ ಸಾವಿರಾರು ಸಿಬ್ಬಂದಿ, ಅವರ ಕುಟುಂಬ ವರ್ಗದ ಸಂಕಷ್ಟ.
ಶೇಷಮೂರ್ತಿ ಅವಧಾನಿ
ಕಲಬುರಗಿ(ಆ.10): ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಅದಾಗಲೇ ಜಾರಿಯಾಗಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯಿಂದ ಮಹಿಳೆಯರು ಫುಲ್ ಖುಷ್ ಇದ್ದಾರೆ, ಆದರೆ ಯೋಜನೆ ಜಾರಿಗೊಂಡ ತಿಂಗಳಿಂದ ಇಲ್ಲಿರುವ ಕಲ್ಯಾಣ ಕರ್ನಾಟಕ ಸಾರಿಗೆ ಸಿಬ್ಬಂದಿಗೆ ಮಾತ್ರ ಸಮಯಕ್ಕೆ ಸರಿಯಾಗಿ ವೇತನ ಕೈ ಸೇರದೆ ಗೋಳಾಡುತ್ತಿದ್ದಾರೆ.
ಕೆಕೆಆರ್‌ಟಿಸಿಯಲ್ಲಿ ಈ ಮುಂಚೆ ಸಿಬ್ಬಂದಿಗೆ ಪ್ರತಿ ತಿಂಗಳು ಒಂದನೇ ತಾರೀಕಿಗೆ ವೇತನ ಜಮೆಯಾಗುತ್ತಿತ್ತು. ಆದರೆ ಕಳೆದ ತಿಂಗಳಿಂದ ಪಗಾರ ಪಾವತಿಯಾಗುವ ಪ್ರಕ್ರಿಯೆ ಸಂಪೂರ್ಣ ಹಳಿ ತಪ್ಪಿದಗೆ. ಕಳೆದ ತಿಂಗಳು 5 ನೇ ತಾರೀಖಿಗೆ ವೇತನವಾದರೆ ಈ ತಿಂಗಳು 10 ತಾರೀಖು ಬಂದ್ರು ಕೂಡಾ ಸಿಬ್ಬಂದಿಯ ವೇತನ ಪಾವತಿಯಾಗಿಲ್ಲ! ತಮ್ಮ ವೇತನಕ್ಕೆ ಗ್ರಹಣ ಅಮರುವಂತಾಗಲು ಶಕ್ತಿ ಯೋಜನೆಯೇ ಅನ್ನೋದು ಸಾರಿಗೆ ಸಿಬ್ಬಂದಿಯ ಅಭಿಮತವಾಗಿದೆ.
ಶಕ್ತಿ ಯೋಜನೆ ಬಸ್‌ಗಳಿಗೆ 2,000 ಖಾಸಗಿ ಡ್ರೈವರ್‌ಗಳ ನೇಮಕ: ರಸ್ತೆಗಿಳಿಯಲಿವೆ ದುರಸ್ತಿಗೊಂಡ 500 ಬಸ್‌ಗಳು
ಕಲ್ಯಾಣ ನಾಡಿನ 7 ಜಿಲ್ಲೆ, ಪಕ್ಕದ ವಿಜಯಪೂರ ಸೇರಿದಂತೆ ಅಷ್ಟಜಿಲ್ಲೆಗಳ ವ್ಯಾಪ್ತಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸಿಪಾಯಿಯಿಂದ ಹಿಡಿದು ಉನ್ನತ ಹುದ್ದೆಗಳವರೆಗೂ ಇರುವ ಸಿಬ್ಬಂದಿಗಳೆಲ್ಲರ ವೇತನ ಪಾವತಿಗೆ ಮಾಸಿಕ 77 ಕೋಟಿ ರು. ಬೇಕು. ಶಕ್ತಿ ಯೋಜನೆ ಜಾರಿಗೊಂಡಾಗಿನಿಂದ ಕೆಕೆಆರ್‌ಟಿಸಿಯಲ್ಲಿ ಬಸ್‌ಗಳ ಓಡಾಟ, ಟ್ರಿಪ್, ಮಹಿಳಾ ಪ್ರಯಾಣಿಕರ ಓಡಾಟವೂ ಹೆಚ್ಚಿದೆ, ಆದರೆ ಕಲೆಕ್ಷನ್ ಶೂನ್ಯ. ಹೀಗಾಗಿ ಸಂಸ್ಥೆ ಆರ್ಥಿಕವಾಗಿ ಅಶಕ್ತವಾಗಿರೋದರಿಂದ ಸಿಬ್ಬಂದಿಗೆ ವೇತನ ಕೊಡುವಲ್ಲಿ ಬಿಕ್ಕಳಿಸುವಂತಾಗಿದೆ.
ಸಂಸ್ಥೆ ಖಾತೆಗೆ ಜಮೆಯಾಗದ ಸಹಾಯಧನ:
ಶಕ್ತಿ ಯೋಜನೆ ಜಾರಿಗೆ ಬಂದ ಜೂ.11ರಿಂದ ಜೂ.30ರ ವರೆಗಿನ ಅವಧಿಯ 47.80 ಕೋಟಿ ರು. ಹಣ ಮರುಪಾವತಿಗೆ ಕೆಕೆಆರ್‌ಟಿಸಿ ಸರ್ಕಾರಕ್ಕೆ ಕೋರಿದೆ. ಆದರೆ ಸಂಸ್ಥೆಯ ಈ ಕೋರಿಕೆಗೆ ಪ್ರತಿಯಾಗಿ ಆರ್ಥಿಕ ಇಲಾಖೆ ಕೆಕೆಆರ್‌ಟಿಸಿಗೆ 37.33 ಕೋಟಿ ರು. ಜಮೆ ಮಾಡಲು ಪರವಾನಿಗೆ ನೀಡಿದೆ, ಆದರೂ ಇಲ್ಲಿಯವರೆಗೂ ಈ ಹಣವೂ ಸಂಸ್ಥೆಗೆ ಜಮೆ ಆಗಿಲ್ಲವೆಂದು ಮೂಲಗಳು ಹೇಳಿವೆ. ಸಿಬ್ಬಂದಿಗೆಲ್ಲ ಪಗಾರ ಮಾಡಲು 77 ಕೋಟಿ ರು. ಮಾಸಿಕ ಬೇಕು, ಆದರೆ ಶೇ.50ರಷ್ಟುಹಣ ಸಂಸ್ಥೆಯ ಖಜಾನೆಯಲ್ಲಿಲ್ಲ, ಅದ್ಹೇಗೆ ಪಗಾರ ಮಾಡೋದು ಎಂದು ಅಧಿಕಾರಿಗಳು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ಏತನ್ಮಧ್ಯೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಸಂಘಟನೆಯವರು ನಿಯೋಗದಲ್ಲಿ ಸಂಸ್ಥೆಯ ಎಂಡಿಯವರನ್ನು ಕಂಡು ಪಗಾರ ವಿಳಂಬವಾಗುತ್ತಿರೋದನ್ನು ಗಮನಕ್ಕೆ ತಂದು ಆಕ್ಷೇಪಿಸಿದ್ದಾರೆಂದು ಗೊತ್ತಾಗಿದೆ. ಹಿಂದೆಲ್ಲ ಮಾಸಿಕ 1ನೇ ತಾರೀಖಿಗೇ ಪಗಾರ ಆಗುತ್ತಿತ್ತು. ಈಗ ಕಳೆದ 2 ತಿಂಗಳಿಂದ ಸಿಬ್ಬಂದಿ ಪಗಾರ ತುಂಬ ವಿಳಂಬವಾಗುತ್ತಿದೆ. ಇದರಿಂದ ಅವರ ಕುಟುಂಬ ನಿವರ್ರಹಣೆಯೂ ಸಂಕಷ್ಟಕ್ಕೆ ಸಿಲುಇಕಿದೆ. ನಿತ್ಯ ದುಡಿಯುವ ಸಿಬ್ಬಂದಿಗೇ ಈ ರೀತಿ ವಿಳಂಬ ವೇತನ ನೀಡಿದರೆ ಹೇಗೆ? ಎಂದು ಎಂಡಿಯವರಿಗೆ ತಮ್ಮ ಮನದಾಳದ ನೋವು- ಯಾತನೆ ವಿವರಿಸಿದ್ದಾರೆಂದು ಗೊತ್ತಾಗಿದೆ.
ಬಂದ ಹಣ ಡೀಸಲ್, ನಿರ್ವಹಣೆಗೆ ವೆಚ್ಚ, ಪಗಾರಕ್ಕೆ ದುಡ್ಡೇ ಇಲ್ಲ!
ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು ಹಾಗೂ ವಿಜಯಪುರ ಸೇರಿದಂತೆ 8 ಜಿಲ್ಲೆಗಳ ವಿಶಾಲ ವ್ಯಾಪ್ತಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 22 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇಋೂಎರಲ್ಲರ ವೇತನಕ್ಕೆ ಪ್ರತಿ ತಿಂಗಳು ವೇತನಕ್ಕೆ 77 ಕೋಟಿ ರುಪಾಯಿ ಬೇಕು. ಶಕ್ತಿ ಯೋಜನೆಯ ಶೂನ್ಯ ಟಿಕೆಟ್‌ಗೆ ಪ್ರತಿಯಾಗಿ ಸರ್ಕಾರದಿಂದ ಧನ ಸಹಾಯ ಬಂದರಷ್ಟೇ ವೇತನ, ಇಲ್ಲದೆ ಹೋದರೇ ಇಲ್ಲ ಅನ್ನೋ ಡೋಲಾಯಮಾನ ಸ್ಥಿಗೆ ಕೆಕೆಆರ್‌ಟಿಸಿ ತಲುಪಿದೆ. ಈ ಮೊದಲು ಪ್ರತಿನಿತ್ಯ ಸಂಸ್ಥೆಗೆ ಟಿಕೆಟ್‌ನಿಂದ 4.50 ಕೋಟಿ ರು. ದಿಂದ 5 ಕೋಟಿ ರು, ವರೆಗೂ ಹಣ ಸಂಗ್ರಹವಾಗುತ್ತಿತ್ತು. ಶಕ್ತಿ ಯೋಜನೆ ಜಾರಿ ಮಾಡಿದ ನಂತರ, ಪುರುಷ ಪ್ರಯಾಣಿಕರ ಟಿಕೆಟ್ ನಿಂದ ಕೇವಲ ಎರಡು ಕೋಟಿ ಮೂವತ್ತು ಲಕ್ಷ ಹಣ ಸಂಗ್ರಹವಾಗುತ್ತಿದೆ. ಸದ್ಯ ಈ ಹಣವನ್ನು ಸಂಸ್ಥೆ ವಾಹನ ನಿರ್ವಹಣೆ, ಡೀಸಲ್‌ಗೆ ವ್ಯಯಿಸುತ್ತಿದೆ. ಪಗಾರಕ್ಕೆ ಹಣವೇ ಇಲ್ಲದೆ ಸಂಸ್ಥೆಯ ಖಜಾನೆ ಬಣಗುಡುತ್ತಿದೆ.
ಶಕ್ತಿ ಯೋಜನೆ ಸಹಾಯ ಧನ ರೂಪದಲ್ಲಿ 126 ಕೋಟಿ ರು. ಸಂಸ್ಥೆಗೆ ಬರಬೇಕು:
ಕೆಕೆಆರ್‌ಟಿಸಿಗೆ ಸರ್ಕಾರದಿಂದ ಮಹಿಳಾ ಪ್ರಯಾಣಿಕರ ಶೂನ್ಯ ಟಿಕೆಟ್‌ಗೆ ಪ್ರತಿಯಾಗಿ ಮರು ಪಾವತಿ ಹಣ 126 ಕೋಟಿ ರುಪಾಯಿಯಷ್ಟುಬಾಕಿ ಇದೆ. ಈ ಮೊತ್ತದ ಪೈಕಿ 2 ಕಂತಲ್ಲಿ ಸಂಸ್ಥೆಗೆ 37 ಕೋಟಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ಹೇಳಿದರೂ ಅದಿನ್ನೂ ಸಂಸ್ಥೆಯ ಖಾತೆಗೆ ಬಂದಿಲ್ಲ. ಹೀಗಾಗಿ ಕೆಕೆಆರ್‌ಟಿಸಿ ತನ್ನ ಸಿಬ್ಬಂದಿಗೆ ವೇತನ ನೀಡಲಾಗದೆ ಪಗಾರ ಇಂದು, ನಾಳೆ ಕೊಡುತ್ತೇವೆ ಎಂದು ಹೇಳುತ್ತ ದಿನ ದೂಡುತ್ತಿದೆ. ಪಗಾರ ವಿಳಂಬ ಕುರಿತಾದ ಸಿಬ್ಬಂದಿಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾಗಿದೆ.
Haveri: ಸೈಕಲ್ ಟಯರ್‌ಗೆ 5 ರೂಪಾಯಿ ಲಗೇಜ್ ಶುಲ್ಕ ವಸೂಲಿ ಮಾಡಿದ ಕಂಡಕ್ಟರ್!
ಸಕಾಲಕ್ಕೆ ವೇತನ ಕೈ ಸೇರದೆ ನಾವೆಲ್ಲರೂ ಸಿಬ್ಬಂದಿ ಗೋಳಾಡುವಂತಾಗಿದೆ. ವೇತನ ನಂಬಿಕೊಂಡು ಅನೇಕ ಕಡೆ ಗೃಹಸಾಲ, ಲೋನ್, ವಿಮಾ ಪಾಲಸಿ ಮಾಡಿಸಿದ್ದೇವೆ. ಮಕ್ಕಳ ಶಾಲಾ ಶುಲ್ಕ, ವಾಹನ ಶುಲ್ಕ ಇತ್ಯಾದಿ ತುಂಬಬೇಕು, ಮನೆ ವೆಚ್ಚ, ಕಿರಾಣಿ ಇವನ್ನೆಲ್ಲ ಕೊಡಬೇಕು, ಮನೆ ಬಾಡಿಗೆಯೂ ಇದೆ. ಹೀಗೆ ವೇತನ ವಿಳಂಬವಾದರೆ ನಾವು ಬಡ್ಡಿ ಕಟ್ಟಬೇಕಾಗುತ್ತದೆ. ದೈನಂದಿನ ಖರ್ಚಿಗೆ ಕೂಡಾ ತೊಂದರೆಯಾಗುತ್ತದೆ ಎಂದು ನೊಂದ ಕೆಕೆಆರ್ಟಿಸಿ ಸಿಬ್ಬಂದಿ ತಿಳಿಸಿದ್ದಾರೆ.
ದುಡಿಯುವ ಕೈಗಳಿಗೆ ತಿಂಗಳಾದ ಮಾರನೇ ದಿನವೇ ವೇತನ ಸಿಗದಿದ್ದರೆ ಅವರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪರದಾಡೋದು ನಿಶ್ಚಿತ. ಆದ್ದರಿಂದ ಸರ್ಕಾರ ಮುಂದಿನ ದಿನಗಳಲ್ಲಿ ಸಾರಿಗೆ ಸಂಸ್ಥೆಗಳಿಗೆ ಶಕ್ತಿ ಯೋಜನೆ ಹಣ ಮುಂಗಡ ಪಾವತಿಸಿ ಪ್ರತಿ ತಿಂಗಳು 1ನೇ ತಾರೀಖಿಗೆ ನೌಕರರ ವೇತನವಾಗುವಂತೆ ಕ್ರಮ ಜರುಗಿಸಬೇಕು. ಆರ್ಥಿಕ ಇಲಾಖೆಗೆ ಸರ್ಕಾರದಿಂದ ಸ್ಪಷ್ಟವಾದಂತಹ ನಿರ್ದೇಶನ ನೀಡಬೇಕು. ಅಂದಾಗ ಈ ಸಮಸ್ಯೆ ಬಗೆಹರಿಯುತ್ತದೆ. ಇದನ್ನು ಹೀಗೇ ಉಪೇಕ್ಷೆ ಮಾಡಿದರೆ ಮುಂದಿನ ದಿನಗಳಲ್ಲಿ ವೇತನ ಸರಿಯಾಗಿ ಸಿಗದೆ ಸಿಬ್ಬಂದಿಗಳ ಸಮೂಹದಲ್ಲಿ ಅಸಮಾಧಾನ ಹೆಚ್ಚುವ ಅಪಾಯವಿದೆ. ಅದು ಕೆಲಸದ ಮೇಲೂ ಪರಿಣಾಮ ಬೀರುವ ಆತಂಕವಿದೆ ಎಂದು ಅಖಿಲ ಕರ್ನಾಟಕ ರಾಜ್ಯರಸ್ತೆ ಸಾರಿಗೆ ನೌಕರರ ಮಹಾ ಮಂಡಳಿ ಅಧ್ಯಕ್ಷ ಚಂದ್ರಕಾಂತ ಗದ್ದಗಿ ಹಾಗೂ ಕಾರ್ಯದರ್ಶಿ ಬಸವರಾಜ ಕಣ್ಣಿ, ಪರ ಹೇಳಿದ್ದಾರೆ.