ರಾಜ್ಯ ಸರ್ಕಾರವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಜಿಎಫ್ ಸಮಗ್ರ ಟೌನ್‌ಶಿಪ್ ಯೋಜನೆಗೆ ಮರುಜೀವ ನೀಡಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (PPP) ನಿರ್ಮಾಣವಾಗಲಿರುವ ಈ ಯೋಜನೆಯು, ಬೆಂಗಳೂರಿಗೆ ವಲಸೆ ತಡೆಯುವ ಮತ್ತು ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಬಳಿ ಹೊಸ ಆರ್ಥಿಕ ವಲಯ ಸೃಷ್ಟಿಸುವ ಗುರಿ ಹೊಂದಿದೆ. ಇದಕ್ಕಾಗಿ KUIDFC ಸಲಹೆಗಾರರ ನೇಮಕಕ್ಕೆ ಟೆಂಡರ್ ಕರೆದಿದೆ.
ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿ ಸ್ಮಾರ್ಟ್ ಟೌನ್‌ಶಿಪ್ ಯೋಜನೆಗೆ ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವು ಮತ್ತೊಂದು ಮಹತ್ವಾಕಾಂಕ್ಷಿ ಉಪನಗರ ಯೋಜನೆಗೆ ಮರುಜೀವ ನೀಡಿದೆ. ಕೋಲಾರ ಜಿಲ್ಲೆಯ ಕೆಜಿಎಫ್ (ಕೋಲಾರ ಚಿನ್ನದ ಗಣಿ) ಪ್ರದೇಶದಲ್ಲಿ ಸುಸಜ್ಜಿತ 'ಸಮಗ್ರ ಟೌನ್‌ಶಿಪ್' (Integrated Township) ನಿರ್ಮಾಣ ಮಾಡಲು ಸರ್ಕಾರ ಗಂಭೀರ ಹೆಜ್ಜೆ ಇಟ್ಟಿದೆ. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಇನ್ನು ಕೆಲವೇ ದಿನಗಳಲ್ಲಿ ನೀಲನಕ್ಷೆ (DPR) ಸಿದ್ಧವಾಗಲಿದ್ದು, ಅರ್ಹ ಸಲಹೆಗಾರರ ನೇಮಕಾತಿಗಾಗಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮವು (KUIDFC) ಅಧಿಕೃತವಾಗಿ ಟೆಂಡರ್ ಆಹ್ವಾನಿಸಿದೆ.
ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ (PPP) ಮಾದರಿ ಯೋಜನೆ:
ಈ ಬೃಹತ್ ಟೌನ್‌ಶಿಪ್ ಯೋಜನೆಯನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದ (Public-Private Partnership) ಮಾದರಿಯಲ್ಲಿ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪ್ರಸ್ತುತ ಆಹ್ವಾನಿಸಲಾಗಿರುವ ಟೆಂಡರ್ ಮೂಲಕ ಆಯ್ಕೆಯಾಗುವ ಸಲಹಾ ಸಂಸ್ಥೆಯು ಕೆಜಿಎಫ್ ಟೌನ್‌ಶಿಪ್ ಯೋಜನೆಯ ತಾಂತ್ರಿಕ ಸಾಧಕ-ಬಾಧಕಗಳು ಹಾಗೂ ಆರ್ಥಿಕ ಕಾರ್ಯಸಾಧ್ಯತೆಯ ವರದಿಯನ್ನು ಸಿದ್ಧಪಡಿಸಲಿದೆ.
ಈ ಸಂಸ್ಥೆಯು ಪ್ರಸ್ತುತ ಮಾರುಕಟ್ಟೆ ಬೇಡಿಕೆಯನ್ನು ಪರಿಶೀಲಿಸಿ, ಭೂಮಿಯ ಮೌಲ್ಯಮಾಪನ ಮಾಡಲಿದೆ. ಅಷ್ಟೇ ಅಲ್ಲದೆ, ದೇಶ-ವಿದೇಶಗಳಲ್ಲಿ ಯಶಸ್ವಿಯಾಗಿರುವ ಪ್ರಮುಖ ಟೌನ್‌ಶಿಪ್ ಯೋಜನೆಗಳನ್ನು ಆಳವಾಗಿ ಅಧ್ಯಯನ ಮಾಡಿ, ಕೆಜಿಎಫ್‌ಗೆ ಸೂಕ್ತವಾಗುವ ಅತ್ಯಾಧುನಿಕ ಮಾಸ್ಟರ್ ಪ್ಲಾನ್ ರೂಪಿಸಲಿದೆ. ಹಂತ-ಹಂತವಾಗಿ ಯೋಜನೆ ಜಾರಿಗೊಳಿಸುವ ಮೂಲಕ ಸರ್ಕಾರಕ್ಕೆ ನಿರಂತರ ಆದಾಯ ತರುವಂತಹ ಆರ್ಥಿಕ ವ್ಯವಸ್ಥೆಗೆ ಈ ಸಂಸ್ಥೆ ಶಿಫಾರಸು ಮಾಡಲಿದೆ.
ಬೆಂಗಳೂರಿಗೆ ವಲಸೆ ತಪ್ಪಿಸುವ ಮಾಸ್ಟರ್ ಪ್ಲಾನ್:
ರಾಜಧಾನಿ ಬೆಂಗಳೂರಿನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಕೆಜಿಎಫ್, ಒಂದು ಕಾಲದಲ್ಲಿ ದೇಶದ ಅತಿ ದೊಡ್ಡ ಚಿನ್ನದ ಗಣಿ ಕೇಂದ್ರವಾಗಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿತ್ತು. ಆದರೆ, 2001ರಲ್ಲಿ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ (BGML) ಅಧಿಕೃತವಾಗಿ ಬಂದ್ ಆದ ಬಳಿಕ ಇಲ್ಲಿನ ಚಿತ್ರಣವೇ ಬದಲಾಯಿತು. ಸೂಕ್ತ ಉದ್ಯೋಗಾವಕಾಶಗಳಿಲ್ಲದೆ ಇಲ್ಲಿನ ಸ್ಥಳೀಯರು ಮತ್ತು ಯುವಕರು ದಿನನಿತ್ಯ ಜೀವನೋಪಾಯಕ್ಕಾಗಿ ರೈಲು ಹಾಗೂ ಬಸ್‌ಗಳ ಮೂಲಕ ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ಈ ನಿರಂತರ ವಲಸೆಯನ್ನು ತಪ್ಪಿಸಿ, ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.
960 ಎಕರೆ ಭೂಮಿ ಲಭ್ಯ: ಎಕ್ಸ್‌ಪ್ರೆಸ್‌ವೇ ಕನೆಕ್ಟಿವಿಟಿ ಪ್ಲಸ್ ಪಾಯಿಂಟ್!
ಕಳೆದ ವರ್ಷ ಅಂದರೆ 2025ರ ಮಾರ್ಚ್‌ನಲ್ಲಿ ಅಂದಿನ ನಗರಾಭಿವೃದ್ಧಿ ಸಚಿವರಾಗಿದ್ದ ಭೈರತಿ ಸುರೇಶ್ ಅವರು ಬಿಜಿಎಂಎಲ್‌ಗೆ ಸೇರಿದ ಜಾಗದಲ್ಲಿ ಹಂತ ಹಂತವಾಗಿ ಟೌನ್‌ಶಿಪ್ ನಿರ್ಮಿಸುವುದಾಗಿ ಪ್ರಕಟಿಸಿದ್ದರು. ಪ್ರಸ್ತುತ ಬಿಜಿಎಂಎಲ್ ಒಡೆತನದ ಸುಮಾರು 960 ಎಕರೆ ಭೂಮಿ ರಾಜ್ಯ ಸರ್ಕಾರದ ನಿಯಂತ್ರಣದಲ್ಲಿದೆ. ಯೋಜನೆಯ ಮೊದಲ ಹಂತದ ಅಭಿವೃದ್ಧಿಗಾಗಿ ಈಗಾಗಲೇ 300 ಎಕರೆ ಜಾಗವನ್ನು ಗುರುತಿಸಲಾಗಿದೆ.
ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಲಾಭ
ಪ್ರಸ್ತುತ ವೇಗವಾಗಿ ನಿರ್ಮಾಣ ಹಂತದಲ್ಲಿರುವ ಮಹತ್ವಾಕಾಂಕ್ಷೆಯ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಹೆದ್ದಾರಿಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಈ ಹೆದ್ದಾರಿಯು ಉದ್ದೇಶಿತ ಹೊಸ ಇಂಟಿಗ್ರೇಟೆಡ್ ಟೌನ್‌ಶಿಪ್ ನಿರ್ಮಾಣವಾಗಲಿರುವ ಜಾಗದಿಂದ ಕೇವಲ 2.5 ಕಿ.ಮೀ ಅಂತರದಲ್ಲೇ ಹಾದು ಹೋಗುತ್ತದೆ. ಹೆದ್ದಾರಿ ಸಂಪರ್ಕ ಅತ್ಯಂತ ಹತ್ತಿರವಿರುವುದರಿಂದ ಉದ್ದೇಶಿತ ಹೊಸ ಟೌನ್‌ಶಿಪ್ ಅನ್ನು ಕೇವಲ ವಸತಿ ಪ್ರದೇಶವನ್ನಾಗಿ ಮಾಡದೆ, ಬೃಹತ್ ಹೊಸ ಆರ್ಥಿಕ ವಲಯವನ್ನಾಗಿ (Economic Zone) ಮಾರ್ಪಡಿಸಲು ಸರ್ಕಾರ ತಂತ್ರ ರೂಪಿಸಿದೆ. ಈ ಯೋಜನೆ ಯಶಸ್ವಿಯಾದರೆ ಕೋಲಾರ ಜಿಲ್ಲೆಯ ಆರ್ಥಿಕ ಚಿತ್ರಣವೇ ಬದಲಾಗಲಿದ್ದು, ಬೆಂಗಳೂರಿನ ಮೇಲಿನ ಜನಸಂಖ್ಯೆಯ ಒತ್ತಡವೂ ಗಣನೀಯವಾಗಿ ಕಡಿಮೆಯಾಗಲಿದೆ.


