ಸಕಲೇಶಪುರ ತಾಲೂಕಿನ ಲಕ್ಕುಂದ ಗ್ರಾಮದ ಬಳಿ ಲೈನ್ ದುರಸ್ತಿ ಮುಗಿಸಿ ವಾಪಸಾಗುತ್ತಿದ್ದ ಚೆಸ್ಕಾಂ ಸಿಬ್ಬಂದಿಯ ವಾಹನದ ಮೇಲೆ ಒಂಟಿ ಸಲಗವೊಂದು ದಾಳಿಗೆ ಯತ್ನಿಸಿದೆ. ತಡರಾತ್ರಿ ನಡೆದ ಈ ಘಟನೆ ವಾಹನದ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಿಬ್ಬಂದಿ ಅದೃಷ್ಟವಶಾತ್ ಪಾರಾಗಿದ್ದಾರೆ.
ಹಾಸನ (ಜು.9): ಲೈನ್ ದುರಸ್ತಿ ಮುಗಿಸಿ ರಾತ್ರಿ ವಾಪಸ್ ಆಗುತ್ತಿದ್ದ ಚೆಸ್ಕಾಂ ಸಿಬ್ಬಂದಿ ಮೇಲೆ ರಸ್ತೆಗೆ ಅಡ್ಡಲಾಗಿ ನಿಂತ ಒಂಟಿ ಸಲಗ ಏಕಾಏಕಿ ದಾಳಿ ಮಾಡಲು ಯತ್ನಿಸಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಲಕ್ಕುಂದ ಗ್ರಾಮದ ಬಳಿ ನಡೆದಿದೆ. ಅದೃಷ್ಟವಶಾತ್ ಕಾಡಾನೆ ದಾಳಿಯಿಂದ ಸಿಬ್ಬಂದಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಒಂಟಿ ಸಲಗ ಏಕಾಏಕಿ ದಾಳಿ, ಡ್ಯಾಶ್ ಕ್ಯಾಮ್‌ನಲ್ಲಿ ದೃಶ್ಯ ಸೆರೆ
ನಿನ್ನೆ ತಡರಾತ್ರಿ ಸುಮಾರು 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಯಸಳೂರು ವಲಯ ವ್ಯಾಪ್ತಿಯ ಲಕ್ಕುಂದ ಗ್ರಾಮದ ಬಳಿ ಸಿಬ್ಬಂದಿ ವಾಹನದಲ್ಲಿ ವಾಪಸ್ ಆಗುತ್ತಿದ್ದರು. ಶಾಖಾಧಿಕಾರಿ ಮಂಜುನಾಥ್ ಹಾಗೂ ಪವರ್ ಮ್ಯಾನ್ ವಾಹನದಲ್ಲಿದ್ದರು. ವೇಗವಾಗಿ ಸಾಗುತ್ತಿದ್ದ ವೇಳೆ ಕಾಡಾನೆ ರಸ್ತೆಗೆ ನಿಂತಿರುವುದು ಕಾಣುತ್ತಿದ್ದಂತೆ ನಿಧಾನಗೊಳಿಸಿದ್ದಾರೆ. ಆದರೆ ರಸ್ತೆ ದಾಟುವ ಬದಲು ಒಂಟಿ ಸಲ ನೇರ ವಾಹನದತ್ತ ಬಂದು ದಾಳಿ ನಡೆಸಲು ಯತ್ನಿಸಿರುವುದು ವಾಹನದ ಡ್ಯಾಶ್ ಕ್ಯಾಮೆರಾದಲ್ಲಿ ದಾಖಲಾಗಿದೆ.
ಮಳೆಗಾಲದಲ್ಲಿ ಕೆಲಸ ಮಾಡೋ ಚೆಸ್ಕಾಂ ಸಿಬ್ಬಂದಿಗೆ ಕಾಡಾನೆಯದ್ದೇ ಭಯ
ಮಳೆಗಾಲದಲ್ಲಿ ಪದೇಪದೆ ವಿದ್ಯುತ್ ಸಮಸ್ಯೆಯಾಗ್ತಿದೆ. ನಿನ್ನೆಯೂ ವಿದ್ಯುತ್ ಸಮಸ್ಯೆಗೆ ಕರೆ ಬಂದಿದ್ದರಿಂದ ಸರಿಪಡಿಸಲು ವಾಹನದಲ್ಲಿ ತೆರಳಿದ್ದ ಸಿಬ್ಬಂದಿ ಆದರೆ ಬರುವುದು ತಡರಾತ್ರಿಯಾಗಿದೆ. ಮಲೆನಾಡಿನಲ್ಲಿ ಚೆಸ್ಕಾಂ ಸಿಬ್ಬಂದಿಗೆ ಇಂಥ ಅನುಭವಗಳು ಎದುರಾಗುತ್ತಿವೆ. ವನ್ಯಜೀವಿಗಳ ದಾಳಿಗೆ ಭಯದಲ್ಲೇ ಸಂಚರಿಸುವಂತಾಗಿದೆ. ಇತ್ಚೀಚೆಗೆ ಕಾಡಾನೆಗಳ ಹೆಚ್ಚಿರುವುದರಿಂದ ರಾತ್ರಿ ವೇಳೆ ವಿದ್ಯುತ್ ಸಮಸ್ಯೆ ಸರಿಪಡಿಸಲು ತೆರಳುವ ಸಿಬ್ಬಂದಿ ಜೀವಭಯದ ಆತಂಕ ಎದುರಾಗಿದೆ. ಹೀಗಾಗಿ ರಾತ್ರಿ ಕರ್ತವ್ಯಕ್ಕೆ ತೆರಳುವು ಸಿಬ್ಬಂದಿಗೆ ಅಗತ್ಯ ಭದ್ರತೆ ಒದಗಿಸಲು, ಕಾಡಾನೆ ಓಡಾಡುವ ಪ್ರದೇಶದಲ್ಲಿ ಸುರಕ್ಷತಾ ಕ್ರಮ ಬಲಪಡಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.


