ಕೊಡಗಿನ ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ತ್ಯಾಜ್ಯ ಸುರಿಯುತ್ತಿರುವ ಕೇರಳಿಗರು!
ಕೇರಳದ ವಿವಿಧ ತ್ಯಾಜ್ಯವನ್ನು ಕೊಡಗಿನ ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿದ್ದ ಹಿನ್ನೆಲೆ ಮಂಗಳವಾರ ವಿರಾಜಪೇಟೆ ತಾಲೂಕಿನ ಮಾಕುಟ್ಟ ಅರಣ್ಯ ಪ್ರದೇಶಕ್ಕೆ ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಭೇಟಿ ನೀಡಿ ಪರಿಶೀಲಿಸಿದರು.
ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜ.31): ಕೇರಳದ ವಿವಿಧ ತ್ಯಾಜ್ಯವನ್ನು ಕೊಡಗಿನ ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿದ್ದ ಹಿನ್ನೆಲೆ ಮಂಗಳವಾರ ವಿರಾಜಪೇಟೆ ತಾಲೂಕಿನ ಮಾಕುಟ್ಟ ಅರಣ್ಯ ಪ್ರದೇಶಕ್ಕೆ ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಭೇಟಿ ನೀಡಿ ಪರಿಶೀಲಿಸಿದರು. ಪೆರುಂಬಾಡಿ ಚೆಕ್ ಪೋಸ್ಟ್‌ನಿಂದ ಮಾಕುಟ್ಟ ಚೆಕ್ ಪೋಸ್ಟ್‌ವರೆಗೆ ರಸ್ತೆ ಬದಿ ಹಾಗೂ ಸೂಕ್ಷ್ಮ ಪ್ರದೇಶಗಳಿಗೆ ತೆರಳಿ ವೀಕ್ಷಣೆ ಮಾಡಿದರು. ರಸ್ತೆ ಬದಿ ಹಾಗೂ ಅರಣ್ಯ ಪ್ರದೇಶದಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ತ್ಯಾಜ್ಯ ಎಸೆಯುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ತ್ಯಾಜ್ಯವನ್ನು ಹೆಕ್ಕಿ ವಿಲೇವಾರಿ ಮಾಡುವ ಕಾರ್ಯದಲ್ಲಿ ತೊಡಗಿದ್ದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಮಾಕುಟ್ಟದಲ್ಲಿರುವ ಪೊಲೀಸ್ ಹಾಗೂ ಅರಣ್ಯ ಇಲಾಖೆ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿಯನ್ನು ಅವಲೋಕಿಸಿದರು. ಕೇರಳ ಭಾಗದಿಂದ ಬರುವ ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಿ ಒಳಗೆ ಬಿಡುವಂತೆ ಅಲ್ಲಿನ ಸಿಬ್ಬಂದಿಗೆ ಸೂಚಿಸಿದರು. ಕೇರಳ ಕಡೆಯಿಂದ ಕೆಲವರು ತ್ಯಾಜ್ಯವನ್ನು ವಾಹನದಲ್ಲಿ ತಂದು ನಮ್ಮ ರಾಜ್ಯದ ಅರಣ್ಯ ಪ್ರದೇಶದೊಳಗೆ ಎಸೆಯಲು ಮುಂದಾಗುತ್ತಿದ್ದಾರೆ. ಅಂಥ ಪ್ರಕಣವನ್ನು ಪತ್ತೆ ಮಾಡಿ ವಾಪಸ್ ಕಳುಹಿಸಲಾಗುತ್ತದೆ ಎಂದು ಚೆಕ್‌ಪೋಸ್ಟ್ ಸಿಬ್ಬಂದಿ ಹೇಳಿದರು.
ಜೊತೆಗೆ ಗಡಿ ಮೂಲಕ ಕೊಡಗಿಗೆ ಬರುವ ಪ್ರವಾಸಿಗರು ರಸ್ತೆ ಬದಿ ವಾಹನ ನಿಲ್ಲಿಸಿ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಎಸೆದು ಹೋಗುತ್ತಿದ್ದಾರೆ. ಇದನ್ನು ನಿಯಂತ್ರಿಸುವುದು ಬಹಳ ಸವಾಲಿನ ಕೆಲಸವಾಗಿದೆ. ಮಾಕುಟ್ಟದಿಂದ ಪೆರುಂಬಾಡಿವರೆಗೆ ರಸ್ತೆ ಬದಿ ವಾಹನ ನಿಲ್ಲಿಸದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಹೀಗಿದ್ದರೂ ಕೆಲವರು ಎಸೆದು ಹೋಗುತ್ತಿದ್ದಾರೆಂದು ಅಲ್ಲಿನ ಚಿತ್ರಣವನ್ನು ಆರ್‌ಎಫ್‌ಒಗಳಾದ ಸುಹಾನ ಹಾಗೂ ಡೆನ್ಸಿ ದೇಚಮ್ಮ ಅಧ್ಯಕ್ಷರ ಬಳಿ ಹೇಳಿಕೊಂಡರು.
Bengaluru: ತ್ಯಾಜ್ಯದಿಂದ ಹದಗೆಟ್ಟಬಾಹ್ಯಾಕಾಶ: ಡಾ| ಆನಂದನ್ ಆತಂಕ
ರವಿ ಕಾಳಪ್ಪ ಅವರು ಮಾತನಾಡಿ, ಪರಿಸರ ಚೆನ್ನಾಗಿದ್ದರೆ ನಾವು ಚೆನ್ನಾಗಿರುತ್ತೇವೆ. ಅರಣ್ಯ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವವರಿಗೆ ದಂಡ ವಿಧಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹೆದ್ದಾರಿಯಲ್ಲಿ ಗಸ್ತು ತೆರಳಿ ನಿರಂತರವಾಗಿ ತಪಾಸಣೆ ಮಾಡುತ್ತಿರಬೇಕು ಎಂದು ಸೂಚಿಸಿದರು.
BIG 3: ಇಲ್ಲಿ ಎಲ್ಲಿ ನೋಡಿದ್ರೂ ಕಸ.. ಕಸ.. ಕಸ..! ವಾಸನೆ ತಾಳಲಾರದೇ ಸ್ಥಳಿಯರೆಲ್ಲಾ ನಿತ್ಯ ಆಕ್ರೋಶ!
ಚೆಕ್‌ಪೋಸ್ಟ್‌ನಲ್ಲಿ ಬರುವವರಿಗೆ ಸ್ವಚ್ಛತೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ಆಯಕಟ್ಟಿನ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಗಮನಿಸುತ್ತಿರಬೇಕು. ನಮ್ಮ ಪ್ರದೇಶದ ಶುಚಿತ್ವ ಹಾಗೂ ಸುರಕ್ಷತೆ ನಿಟ್ಟಿನಲ್ಲಿ ಪೊಲೀಸ್ ಹಾಗೂ ಅರಣ್ಯ ಇಲಾಖೆ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುವಂತೆ ಹೇಳಿದರು.