ದಿಢೀರನೆ ಕೊರೋನಾ ಸೋಂಕಿತರು ಹೆಚ್ಚಾಗುತ್ತಿದ್ದಾರೆ ಎಂಬ ನೆಪ ಮುಂದಿರಿಸಿ ಕರ್ನಾಟಕಕ್ಕೆ ನಿತ್ಯ ನೌಕರಿಗೆ ತೆರಳುವವರ ಪಾಸ್‌ಗೆ ಕೇರಳ ಸರ್ಕಾರ ಬ್ರೇಕ್‌ ಹಾಕಿದೆ. ಇದರಿಂದಾಗಿ ಗಡಿನಾಡು ಕಾಸರಗೋಡಿನಿಂದ ಮಂಗಳೂರಿಗೆ ಖಾಸಗಿ ವಾಹನದಲ್ಲಿ ನಿತ್ಯ ಪಾಸ್‌ನಲ್ಲಿ ಸಂಚರಿಸುವ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಕನ್ನಡಿಗರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಅಚ್ಚರಿಯ ಸಂಗತಿ ಎಂದರೆ, ಸರ್ಕಾರಿ ನೌಕರರಿಗೆ ಇದರಿಂದ ವಿನಾಯಿತಿ ನೀಡಲಾ​ಗಿ​ದೆ.

ಮಂಗಳೂರು(ಜು.08): ದಿಢೀರನೆ ಕೊರೋನಾ ಸೋಂಕಿತರು ಹೆಚ್ಚಾಗುತ್ತಿದ್ದಾರೆ ಎಂಬ ನೆಪ ಮುಂದಿರಿಸಿ ಕರ್ನಾಟಕಕ್ಕೆ ನಿತ್ಯ ನೌಕರಿಗೆ ತೆರಳುವವರ ಪಾಸ್‌ಗೆ ಕೇರಳ ಸರ್ಕಾರ ಬ್ರೇಕ್‌ ಹಾಕಿದೆ. ಇದರಿಂದಾಗಿ ಗಡಿನಾಡು ಕಾಸರಗೋಡಿನಿಂದ ಮಂಗಳೂರಿಗೆ ಖಾಸಗಿ ವಾಹನದಲ್ಲಿ ನಿತ್ಯ ಪಾಸ್‌ನಲ್ಲಿ ಸಂಚರಿಸುವ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಕನ್ನಡಿಗರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಅಚ್ಚರಿಯ ಸಂಗತಿ ಎಂದರೆ, ಸರ್ಕಾರಿ ನೌಕರರಿಗೆ ಇದರಿಂದ ವಿನಾಯಿತಿ ನೀಡಲಾ​ಗಿ​ದೆ.

ಕೊರೋನಾ ಲಾಕ್‌ಡೌನ್‌ ವೇಳೆ ಮಾಚ್‌ರ್‍ನಲ್ಲಿ ಕಾಸರಗೋಡು ಮತ್ತು ದ.ಕ. ಜಿಲ್ಲಾಡಳಿತ ತಲಪಾಡಿ ಗಡಿ ಸೇರಿದಂತೆ ಉಭಯ ಜಿಲ್ಲೆಗಳ 16ಕ್ಕೂ ಅಧಿಕ ಗಡಿ ಭಾಗಗಳನ್ನು ಬಂದ್‌ ಮಾಡಿತ್ತು. ಲಾಕ್‌ಡೌನ್‌ ಸಡಿಲಗೊಂಡ ಬಳಿಕ ಜೂ.3ರಿಂದ ಒಂದು ತಿಂಗಳ ಮಟ್ಟಿಗೆ ನಿತ್ಯ ಪಾಸ್‌ ಮೂಲಕ ಕ್ವಾರಂಟೈನ್‌ ಇಲ್ಲದೆ ಉಭಯ ಜಿಲ್ಲೆಗಳ ನಡುವೆ ನೌಕರರಿಗಾಗಿ ಸಂಚರಿಸಲು ಅನುಮತಿ ನೀಡಲಾಯಿತು. ಕಾಸರಗೋಡು, ಮಂಜೇಶ್ವರ, ಕಾಞಂಗಾಡ್‌, ಉದುಮ ಮುಂತಾದ ಕಡೆಗಳಿಂದ ಸರ್ಕಾರಿ ನೌಕರರಲ್ಲದೆ, ವೈದ್ಯಕೀಯ, ಖಾಸಗಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ನಿತ್ಯ ಪಾಸ್‌ ಬಳಸಿ ಸಂಚರಿಸುತ್ತಿದ್ದರು. ಮಂಗಳೂರು ಮತ್ತು ಕಾಸರಗೋಡಿಗೆ ಬೆಳಗ್ಗೆ ಹೊರಟರೆ, ಕರ್ತವ್ಯ ಮುಗಿಸಿ ಸಂಜೆ ವಾಪಾಸ್‌ ಆಗಬೇಕು. ದಾರಿ ಮಧ್ಯೆ ತಲಪಾಡಿ ಚೆಕ್‌ ಪೋಸ್ಟ್‌ನಲ್ಲಿ ತಪಾಸಣೆ ನಡೆಸಿ ಬಿಡುತ್ತಿದ್ದರು.

ಏನೂ ಆಗಲ್ಲ ಕಣ್ರಪ್ಪ, ಒಂದಿಷ್ಟು ಗಟ್ಟಿ ಮನಸ್ಸು ಮಾಡ್ಕೊಳ್ಳಿ: ಕೊರೋನಾ ಮಣಿಸಿದ 96ರ ಅಜ್ಜಿ!

ಗಡಿಭಾಗದ ಜನತೆಗೆ ನೌಕರಿಗೆ ತೆರಳುವ ಪಾಸ್‌ನ ಅವಧಿ ಜೂನ್‌ ಅಂತ್ಯಕ್ಕೆ ಮುಕ್ತಾಯಗೊಂಡರೂ ದ.ಕ. ಜಿಲ್ಲಾಡಳಿತ ಅದನ್ನು ಜು.11ರ ವರೆಗೆ ವಿಸ್ತರಿಸಿತ್ತು. ಹೀಗಾಗಿ ಕಾಸರಗೋಡಿನಿಂದ ನಿತ್ಯ ಮಂಗಳೂರಿಗೆ ಆಗಮಿಸುವ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಸ್ವಂತ ವಾಹನದಲ್ಲಿ ಚೆಕ್‌ಪೋಸ್ಟ್‌ ದಾಟಿ ಕರ್ತವ್ಯಕ್ಕೆ ನೆಮ್ಮದಿಯಿಂದ ಹಾಜರಾಗುತ್ತಿದ್ದರು. ಅದೇ ರೀತಿ ಮಂಗಳೂರಿನಿಂದ ಸುಮಾರು 150ಕ್ಕೂ ಅಧಿಕ ಮಂದಿ ಕಾಸರಗೋಡಿಗೆ ಕೆಲಸಕ್ಕೆ ಹೋಗಿ ಬರುತ್ತಿದ್ದರು.

ಕೇರಳದ ದಿಢೀರ್‌ ತಡೆ

ಹೀಗೆ ಮಂಗ​ಳೂ​ರಿಗೆ ಕಾರ​ಸ​ರೋ​ಗಿ​ಡಿ​ನಿಂದ ನೌಕರಿಗೆ ಹೋಗಿಬರುವವರ ಪೈಕಿ ಆರು ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಕಾಸರಗೋಡಿನಲ್ಲಿ ಸಭೆ ನಡೆಸಿದ ಕೇರಳ ಕಂದಾಯ ಸಚಿವರು ಜು. 7ರಿಂದಲೇ ನಿತ್ಯ ಪಾಸ್‌ ಸಂಚಾರಕ್ಕೆ ತಡೆ ಹಾಕಿದ್ದಾರೆ. ಈ ಸಭೆಯಲ್ಲಿ ಗಡಿಭಾಗದ ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಹಾಜರಿದ್ದರು. ಈ ತಡೆಯಿಂದ ಕನ್ನಡಿಗ ನೌಕರರು ಸಂಕಷ್ಟಪಡುವ ಬಗ್ಗೆ ಯಾರೂ ಚಕಾರ ಎತ್ತಿಲ್ಲ. ಇದರಿಂದಾಗಿ ಸಚಿವರು ತೆಗೆದುಕೊಂಡ ತೀರ್ಮಾನ ಮಂಗಳವಾರದಿಂದಲೇ ಜಾರಿಗೆ ಬಂದಿದೆ.

ತಿಂಗಳಲ್ಲಿ 2 ದಿನ ಊರಿಗೆ ಬರಲು ಅವಕಾಶ

ಸಚಿವರ ಸಭೆಯ ತೀರ್ಮಾನ ಪ್ರಕಾರ, ನಿತ್ಯ ಪಾಸ್‌ ಬದಲು, ನಿತ್ಯ ಸಂಚರಿಸುವವರು ಇನ್ನು ಮುಂದೆ ಕರ್ತವ್ಯ ನಿರ್ವಹಿಸುವ ಕೇಂದ್ರ ಸ್ಥಾನದಲ್ಲಿ ಇರಬೇಕು. ಅಂದರೆ, ಕಾಸರಗೋಡಿನಲ್ಲಿ ಕೆಲಸ ಮಾಡುತ್ತಿದ್ದರೆ, ಅಲ್ಲೇ 28 ದಿನಗಳ ಕಾಲ ಇರಬೇಕು. ಮಂಗಳೂರಿನಲ್ಲಿ ಕಾರ್ಯನಿರ್ವಹಿಸುವವರು ಅಲ್ಲಿಯೇ ಇರಬೇಕು. ತಿಂಗಳಲ್ಲಿ 2 ದಿನ ಮಾತ್ರ ಊರಿಗೆ ಹೋಗಿಬರಲು ಅವಕಾಶ ಎಂಬ ಶರ್ತ ವಿಧಿಸಿದೆ.

ಮಂಗಳವಾರ ತಲಪಾಡಿ ಚೆಕ್‌ಪೋಸ್ಟ್‌ಗೆ ಆಗಮಿಸಿದ ಉದ್ಯೋಗಿಗಳು ನಿತ್ಯ ಪಾಸ್‌ ವ್ಯವಸ್ಥೆ ಇಲ್ಲದ ಕಾರಣ ವಾಪಸ್‌ ತೆರಳಿದ್ದಾರೆ. ಮಂಗಳೂರಿನಿಂದ ಕಾಸರಗೋಡಿಗೆ ತೆರಳುವವರಿಗೂ ಇದೇ ತಾಪತ್ರಯ ತಲೆದೋರಿದೆ.

ಅಂದು ಗಡಿ ತೆರವಿಗೆ ತಗಾದೆ, ಇಂದು ಬಂದ್‌!

ಲಾಕ್‌ಡೌನ್‌ ಆರಂಭದ ವೇಳೆ ಕಾಸರಗೋಡಿನಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿತ್ತು. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತ ತಲಪಾಡಿ ಸೇರಿದಂತೆ ಎಲ್ಲ ಗಡಿ ಭಾಗಗಳನ್ನು ಕಟ್ಟುನಿಟ್ಟು ಬಂದ್‌ ಮಾಡಿತ್ತು. ಇದರಿಂದ ಮಂಗಳೂರಿನಲ್ಲಿ ತುರ್ತು ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕೇರಳ ಸರ್ಕಾರ ಅಲ್ಲಿನ ಹೈಕೋರ್ಟ್‌ ಮೆಟ್ಟಿಲೇರಿ, ಅಲ್ಲಿಂದ ಸುಪ್ರೀಂ ಕೋರ್ಟ್‌ ಕದತಟ್ಟಿಗಡಿ ತೆರವುಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಈಗ ತಾನೇ ಸ್ವಯಂಪ್ರೇರಿತವಾಗಿ ಕೊರೋನಾ ಸೋಂಕಿನ ನೆಪದಲ್ಲಿ ಗಡಿ ಬಂದ್‌ ಮಾಡಿ ಇಬ್ಬಂದಿತನ ತೋರಿಸಿದೆ!

ಅಬ್ಬಬ್ಬಾ, 11 ತಿಂಗಳ ಮಗು ಸೇರಿ 11 ವರ್ಷದೊಳಗಿನ 7 ಮಕ್ಕಳಿಗೆ ಕೊರೋನಾ..!

ಕೇರಳ ಸರ್ಕಾರದ ಈ ಏಕಾಏಕಿ ನಿರ್ಧಾರದಿಂದ ಕೆಲಸಕ್ಕೆ ತೆರಳಲು ತೊಂದರೆಯಾಗಿದೆ. ಸರಿಯಾಗಿ ತೆರಳಲು ಸಾಧ್ಯವಾಗದೆ ಕೆಲವರ ಕೆಲಸಕ್ಕೂ ಕುತ್ತು ಬಂದಿದೆ ಎಂದು ನಿತ್ಯ ಸಂಚಾರಿ ಯಶ್‌ರಾಜ್‌, ಮಂಜೇಶ್ವರ ತಿಳಿಸಿದ್ದಾರೆ.

ಗಡಿ ಪ್ರದೇಶ ಮೂಲಕ ಉದ್ಯೋಗಕ್ಕೆ ನಿತ್ಯ ಸಂಚರಿಸುವ ಕೆಲವರಲ್ಲಿ ಕೋವಿಡ್‌ ಸೋಂಕು ಕಾಣಿಸಿದ ಹಿನ್ನೆಲೆಯಲ್ಲಿ ಒಂದೇ ಕಡೆ 28 ದಿನ ಉಳಿದುಕೊಳ್ಳುವಂತೆ ಕೇರಳ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಅಲ್ಲದೆ ಗಡಿ ನುಸುಳಿ ಬರುವವರಿಂದ ಕಾಸರಗೋಡಿನಲ್ಲಿ ಸೋಂಕು ಪತ್ತೆಯಾದ ಕಾರಣ, ಗಡಿ ಪ್ರದೇಶಗಳಲ್ಲಿ ಪೊಲೀಸ್‌ ಪಹರೆ ಹಾಕಲಾಗಿದೆ ಎಂದು ಕಾಸರಗೋಡು ಎಸ್ಪಿ ಶಿಲ್ಪಾ ತಿಳಿಸಿದ್ದಾರೆ.