ಅಬ್ಬಬ್ಬಾ, 11 ತಿಂಗಳ ಮಗು ಸೇರಿ 11 ವರ್ಷದೊಳಗಿನ 7 ಮಕ್ಕಳಿಗೆ ಕೊರೋನಾ..!
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮಂಗಳವಾರ(ಜು.7) ಮತ್ತೆ ಹೊಸದಾಗಿ 33 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ತ್ರಿಶತಕದ ಗಡಿ ದಾಡಿದೆ. ಆಘಾತಕಾರಿ ಸಂಗತಿಯೆಂದರೆ 11 ತಿಂಗಳ ಮಗು ಸೇರಿ 11 ವರ್ಷದೊಳಗಿನ 7 ಮಕ್ಕಳಿಗೆ ಕೊರೋನಾಗೆ ತುತ್ತಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ.
ಶಿವಮೊಗ್ಗ(ಜು.08): ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ತ್ರಿಶತಕ ದಾಟಿದೆ. ಆತಂಕಕಾರಿ ವಿಷಯವೆಂದರೆ ಮಂಗಳವಾರ ಜಿಲ್ಲೆಯಲ್ಲಿ 33 ಮಂದಿಗೆ ಸೋಂಕು ತಗಲಿದ್ದು, ಅದರಲ್ಲಿ 11ತಿಂಗಳ ಶಿಶು ಸೇರಿ ಒಟ್ಟು 11 ವರ್ಷದೊಳಗಿನ 7 ಮಕ್ಕಳಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇದರಲ್ಲಿ 20 ಮಂದಿಗೆ ಸೋಂಕಿತರ ಸಂಪರ್ಕದಿಂದ ಕೊರೋನಾ ತಗುಲಿದೆ. ಶೀತ, ಜ್ವರ, ಕೆಮ್ಮಿನಿಂದ ಬಳಲುತ್ತಿದ್ದ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಐವರಲ್ಲಿ ಸೋಂಕು ಹೇಗೆ ತಗುಲಿದೆ ಎಂಬುದನ್ನು ಪತ್ತೆಹಚ್ಚಬೇಕಿದೆ. ಈ ಐವರಿಗೆ ಯಾವುದೇ ಪ್ರಯಾಣದ ಹಿಸ್ಟರಿ ಇಲ್ಲದಿರುವುದು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ತಲೆನೋವು ತಂದಿದೆ. ಒಬ್ಬರು ದಕ್ಷಿಣ ಆಫ್ರಿಕಾದಿಂದ ಜಿಲ್ಲೆಗೆ ಹಿಂತಿರುಗಿದ್ದರೆ, ಮೂವರು ಬೆಂಗಳೂರಿನಿಂದ ಹಾಗೂ ಒಬ್ಬರು ಮಂಗಳೂರಿನಿಂದ ಹಿಂತಿರುಗಿದವರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಟ್ರಾವೆಲ್ ಹಿಸ್ಟರಿ ಇಲ್ಲದ ಕೆಲವರಿಗೂ ಸೋಂಕು ತಗುಲುತ್ತಿದೆ. ಪ್ರತಿದಿನ ಈ ರೀತಿಯ ಪ್ರಕರಣ ಪತ್ತೆಯಾಗುತ್ತಿರುವುದನ್ನು ನೋಡಿದರೆ ಸಮುದಾಯದೊಳಗೆ ಕೊರೋನ ಹಬ್ಬುತ್ತಿದೆಯೇ ಎಂಬ ಸಂಶಯ ವ್ಯಕ್ತವಾಗತೊಡಗಿದೆ.
ಏರುಗತಿಯಲ್ಲಿ ಸಾಗುತ್ತಿರುವ ಸಂಖ್ಯೆ :
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಹೆಚ್ಚಳವಾಗುತ್ತಿದೆ. ಪ್ರತಿದಿನ 20 ಹಾಗೂ 30ಕ್ಕಿಂತ ಹೆಚ್ಚು ಸೋಂಕಿತರ ಸಂಖ್ಯೆ ಕಾಣಿಸಿಕೊಳ್ಳತೊಡಗಿದ್ದು, ಇದು ಮಲೆನಾಡಿಗರನ್ನು ಬೆಚ್ಚಿಬೀಳುವಂತೆ ಮಾಡಿದೆ.
ಶಿವಮೊಗ್ಗ ನಗರದಲ್ಲಿಯೇ 19, ಶಿಕಾರಿಪುರ 8, ಹೊಸನಗರ 3, ಭದ್ರಾವತಿ, ಸಾಗರ, ಹಾಗೂ ಶಿವಮೊಗ್ಗ ಗ್ರಾಮಾಂತರದಲ್ಲಿ ತಲಾ 1 ಪ್ರಕರಣ ಪತ್ತೆಯಾಗಿರುವ ಮಾಹಿತಿ ಲಭಿಸಿದೆ. ಇಲ್ಲಿನ ವಿನೋಬನಗರದ ಹುಡ್ಕೋ ಕಾಲೋನಿ ನಿವಾಸಿಯೊಬ್ಬರು ಹಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ಇವರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಬಸ್ ನಿಲ್ದಾಣ ಬಳಿ ಇರುವ ಪಿಡಬ್ಲ್ಯೂಡಿ ಕ್ವಾಟ್ರಸ್ ನಿವಾಸಿಯೊಬ್ಬರ ಪ್ರಾಥಮಿಕ ಸಂಪರ್ಕದಿಂದ ಅವರ ಕುಟುಂಬದವರಿಗೆ ಪಾಸಿಟಿವ್ ಕಂಡುಬಂದಿದೆ.
ಏನೂ ಆಗಲ್ಲ ಕಣ್ರಪ್ಪ, ಒಂದಿಷ್ಟು ಗಟ್ಟಿ ಮನಸ್ಸು ಮಾಡ್ಕೊಳ್ಳಿ: ಕೊರೋನಾ ಮಣಿಸಿದ 96ರ ಅಜ್ಜಿ!
ರವಿ ವರ್ಮ ಬೀದಿಯ ಒಂದೇ ಕುಟುಂಬದ ನಾಲ್ವರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ. ಇದು ಸಹ ಪ್ರಾಥಮಿಕ ಸಂಪರ್ಕದ ಹಿನ್ನಲೆಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ ಎನ್ನಲಾಗಿದೆ. ಇದೇ ಪ್ರಾಥಮಿಕ ಸಂಪರ್ಕದಿಂದಾಗಿ ಬಡಾವಣೆಯ ಮತ್ತೊಬ್ಬರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ. ಟ್ರಾವೆಲ್ ಹಿಸ್ಟರಿ ಇಲ್ಲದ ಅಶೋಕ ರಸ್ತೆಯ ಆಟೋ ಚಾಲಕರೋರ್ವರಲ್ಲಿ ಸೋಂಕು ಪತ್ತೆಯಾಗಿದೆ. ಇವರು ಅನೇಕ ದಿನಗಳಿಂದ ಶೀತ ಹಾಗೂ ಜ್ವರದಿಂದ ಬಳಲುತ್ತಿದ್ದು ಇವರಲ್ಲಿ ಪಾಸಿಟಿವ್ ಕಂಡುಬಂದಿದೆ.
ಸೌತ್ ಆಫ್ರಿಕಾದಿಂದ ಬಂದ ಸದಾಶಿವಪುರದ ಹಕ್ಕಿಪಿಕ್ಕಿ ಕ್ಯಾಂಪ್‌ನ ನಿವಾಸಿಗೆ ಕೊರೋನ ಪಾಸಿಟಿವ್ ಕಾಣಿಸಿಕೊಂಡಿದೆ. ಜೂನ್ 20 ರಂದು ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಿಂದ ಬಂದಿದ್ದ ಈ ವ್ಯಕ್ತಿ ಹೈದರಾಬಾದ್‌ನಲ್ಲಿ ಕ್ವಾರಂಟೈನ್ ಮುಗಿಸಿಕೊಂಡು ಶಿವಮೊಗ್ಗಕ್ಕೆ ಜೂನ್ 29 ರಂದು ಬಂದಿದ್ದರು. ಇವರಿಗೆ ಇದೀಗ ಸೋಂಕು ದೃಢಪಟ್ಟಿದೆ.
ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಓಲ್ಡ್ ಬಾರ್ ಲೈನ್ ನಿವಾಸಿಯೊಬ್ಬರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ. ಸೋಂಕು ಪತ್ತೆಯಾದ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಇದೀಗ ಸೋಂಕಿತರ ಸಂಖ್ಯೆ 318ಕ್ಕೆ ಏರಿಕೆಯಾಗಿದೆ. ಮಂಗಳವಾರ 12 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.