ಏನೂ ಆಗಲ್ಲ ಕಣ್ರಪ್ಪ, ಒಂದಿಷ್ಟು ಗಟ್ಟಿ ಮನಸ್ಸು ಮಾಡ್ಕೊಳ್ಳಿ: ಕೊರೋನಾ ಮಣಿಸಿದ 96ರ ಅಜ್ಜಿ!

ಕೊರೋನಾ ವಿರುದ್ಧ ಹೋರಾಡಿ ಗೆದ್ದ ಚಿತ್ರದುರ್ಗದ 96ರ ಅಜ್ಜಿ! ಏನೂ ಆಗಲ್ಲ ಕಣ್ರಪ್ಪ, ಒಂದಿಷ್ಟು ಗಟ್ಟಿ ಮನಸ್ಸು ಮಾಡ್ಕೊಳ್ಳಿ| ಸೋಂಕಿಂದ ಚೇತರಿಸಿದ ರಾಜ್ಯದ 2ನೇ ಅತಿಹಿರಿಯ ಮಹಿಳೆ| 

Do Not Worry e Confident Inspirational Words of 96 Year Old Lady Who Fought Against Coronavirus

ಹಿರಿಯೂರು(ಜು.08): ‘ಏನೂ ಆಗಲ್ಲ ಕಣ್ರಪ್ಪ, ಹುಷಾರಾಗ್ತೀರಾ. ಒಂದಿಷ್ಟುಗಟ್ಟಿಮನಸ್ಸು ಮಾಡ್ಕೊಳ್ಳಿ. ಆಸ್ಪತ್ರೆಯಲ್ಲಿ ಖುಷಿಯಾಗಿ ಇರೋದನ್ನು ಕಲೀರಿ.’

- ಇದು ಕೋವಿಡ್‌ ಅನ್ನು ಯಶಸ್ವಿಯಾಗಿ ಗೆದ್ದು ಬಂದಿರುವ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ 96ರ ಹರೆಯದ ವಯೋವೃದ್ಧೆ ಗೋವಿಂದಮ್ಮನ ಸ್ಫೂರ್ತಿದಾಯಕ ನುಡಿಗಳು. ಕೊರೋನಾ ಸೋಂಕಿನ ಭೀತಿಗೆ ಎಳೆ ಪ್ರಾಯದ ಆರೋಗ್ಯವಂತ ಯುವಕ, ಯುವತಿಯರೇ ತಲ್ಲಣಕ್ಕೀಡಾಗುತ್ತಿರುವ ಇಂದಿನ ವಿಷಮ ಪರಿಸ್ಥಿತಿಯಲ್ಲಿ ಕೊರೋನಾ ವಿರುದ್ಧದ ಯುದ್ಧವನ್ನು ಏಳು ದಿನಗಳ ಅಂತರದಲ್ಲಿ ತಣ್ಣಗೆ ಗೆದ್ದು ಮನೆಗೆ ವಾಪಸ್ಸಾಗಿದ್ದಾರೆ.

ವೈರಸ್‌ ತಡೆಗೆ 4ಸಿ ಸೂತ್ರ: ಅಳವಡಿಸ್ಕೊಂಡ್ರೆ ಸೋಂಕು ನಿಗ್ರಹ ಸಾಧ್ಯ!

ಹಿರಿಯೂರಿನ ವೇದಾವತಿ ನಗರ ಬಡಾವಣೆಯ ವರ್ತಕ ಗೋವರ್ಧನ್‌ ಶೆಟ್ಟಿಅವರ ತಾಯಿಯೇ ಈ ವೃದ್ಧೆ ಗೋವಿಂದಮ್ಮ. ಇದೀಗ ಕೊರೋನಾ ಜಯಿಸಿದ ರಾಜ್ಯದ ಎರಡನೇ ಅತೀ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರವಾಗಿದ್ದಾರೆ.

ಆರೋಗ್ಯವಂತ ಅಜ್ಜಿ:

ಕೊರೋನಾ ರೋಗದ ತೀವ್ರತೆಗಿಂತಲೂ ಅದರ ಬಗ್ಗೆ ಭೀತಿಗೊಳಗಾಗಿ ಎಳೆ ಪ್ರಾಯದ ಯುವಕ, ಯುವತಿಯರೇ ಪ್ರಾಣ ಭೀತಿಯಿಂದ ಮಾನಸಿಕ ಸಮಸ್ಯೆಗಳಿಗೆ ತುತ್ತಾಗಿ ಮನೋವೈದ್ಯರನ್ನು ಎಡತಾಕುತ್ತಿದ್ದಾರೆ. ಈ ರೋಗಕ್ಕಿಂತಲೂ ಅದರ ಬಗೆಗಿನ ಅತಿ ಎನ್ನಿಸುವಷ್ಟುಭಯವೇ ಹಲವರನ್ನು ಬಲಿ ಪಡೆಯುತ್ತಿದೆಯೆಂಬ ಅಂಶವನ್ನು ಕೂಡಾ ತಜ್ಞ ವೈದ್ಯರು ಬಹಿರಂಗಪಡಿಸಿದ್ದಾರೆ. ಹೀಗಿರುವಾಗ ಇಳಿವಯಸ್ಸಿನಲ್ಲೂ ಗೋವಿಂದಜ್ಜಿಗೆ ಮಧುಮೇಹ, ರಕ್ತದೊತ್ತಡಗಳು ಇಲ್ಲದಿರುವುದು ಕೊರೋನಾ ಗೆಲ್ಲಲು ಪ್ಲಸ್‌ ಪಾಯಿಂಟ್‌ ಎಂದು ಅವರನ್ನು ಉಪಚರಿಸಿದ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

96ರ ಇಳಿ ವಯಸ್ಸಲ್ಲೂ ಕೊರೋನಾ ಗೆದ್ದು ಬಂದ್ರು ಅಜ್ಜಿ..! ಆತ್ಮಸ್ಥೈರ್ಯವೇ ಬಲ

ಶತಕದಂಚಿನ ವೃದ್ಧಾಪ್ಯದಲ್ಲೂ ರೋಗ ನಿರೋಧಕತೆಯನ್ನು ಕಾಪಿಟ್ಟುಕೊಂಡಿದ್ದ ಗೋವಿಂದಜ್ಜಿಗೆ ಸೋಂಕು ತಗುಲಿದ ನಂತರವೂ ಯಾವುದೇ ರೋಗ ಲಕ್ಷಣಗಳು ಅವರನ್ನು ಬಾಧಿಸಿಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ. ಅವರು ಸೇವಿಸುವ ಆಹಾರ ಕ್ರಮ, ಜೀವನ ಶೈಲಿ ಹಾಗೂ ತಣ್ಣನೆಯ ಮನಸ್ಥಿತಿಯೇ ಅವರ ಆರೋಗ್ಯದ ಗುಟ್ಟು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಸೋಂಕು ತಗಲಿದ್ದು ಹೇಗೆ?:

ಹದಿನೈದು ದಿನಗಳ ಹಿಂದೆ ಹಿರಿಯೂರಿನ ವೇದಾವತಿನಗರ ಬಡಾವಣೆಯ ಆಯುಷ್‌ ವೈದ್ಯರೊಬ್ಬರಿಗೆ ಸೋಂಕು ದೃಢಪಟ್ಟಿತ್ತು. ಅವರ ಬಳಿ ಚಿಕಿತ್ಸೆಗೆ ತೆರಳಿದ್ದ ಗೋವರ್ಧನ್‌ ಶೆಟ್ಟಿ ದೇಹಕ್ಕೆ ಕೊರೋನಾ ತಗಲಿದೆ. ಇದು ದೃಢಪಡುವ ಮುನ್ನವೇ ಗೋವರ್ಧನ್‌ ತಮ್ಮ ಮನೆಯಲ್ಲಿ ಮೊಮ್ಮಗನ ಜನ್ಮದಿನವನ್ನು ಆಚರಿಸಿದ್ದರು. ಈ ವೇಳೆ ಅಲ್ಲಿ ಉಪಸ್ಥಿತರಿದ್ದ ಕೆಲ ಬಂಧು ಮಿತ್ರರು ಹಾಗೂ ಗೋವರ್ಧನ ಶೆಟ್ಟಿ ಅವರ ತಾಯಿ, ಪತ್ನಿ ಹಾಗೂ ಮಗನಿಗೂ ಸೋಂಕು ಪಸರಿಸಿತ್ತು. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ಕ್ವಾರಂಟೈನ್‌ ಮಾಡಿ ನಂತರ ಚಿತ್ರದುರ್ಗ ಕೋವಿಡ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಗೋವರ್ಧನ್‌ ಕುಟುಂಬದ ನಾಲ್ವರು ಸೋಂಕಿತರ ಪೈಕಿ ತಾಯಿ, ಹೆಂಡತಿ, ಸ್ವತಃ ಗೋವರ್ಧನ್‌ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

Latest Videos
Follow Us:
Download App:
  • android
  • ios