ಕಾರವಾರ: ಧೂಳುಮಯ ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ: ಸವಾರರ ಪರದಾಟ
Uttara Kannada News: ವಾಹನ ಸಂಚರಿಸಿದರೆ ಎಲ್ಲವೂ ಧೂಳುಮಯ, ಶಿರಸಿ-ಕುಮಟಾ ರಾ.ಹೆ.ಯಲ್ಲಿ ವಾಹನ ಸವಾರರ ಸಂಕಷ್ಟ, ಜನರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಲು ಆಗ್ರಹ
ಜಿ.ಡಿ. ಹೆಗಡೆ, ಕನ್ನಡಪ್ರಭ ವಾರ್ತೆ, ಕಾರವಾರ
ಕಾರವಾರ (ಅ. 28): ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವವರು ಹಿಡಿಶಾಪ ಹಾಕಿಕೊಂಡು ಸಂಚರಿಸುವಂತೆ ಆಗಿದೆ. ಈ ರಸ್ತೆಯ ಅಕ್ಕಪಕ್ಕದ ನಿವಾಸಿಗಳು ರೋಗ-ರುಜಿನಗಳ ಭಯದಿಂದ ತತ್ತರಿಸುತ್ತಿದ್ದಾರೆ. ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಮೇಲ್ದರ್ಜೆಗೇರಿದೆ. ಶಿರಸಿಯಿಂದ ಅಗಲೀಕರಣ ಕಾರ್ಯ ಆರಂಭವಾಗಿದೆ. ಕೆಲವು ಕಿ.ಮೀ. ದೂರದವರೆಗೆ ಕಾಂಕ್ರಿಟೀಕರಣವಾಗಿದೆ. ಅಮ್ಮಿನಳ್ಳಿ, ಸಂಪಖಂಡ, ಖೂರ್ಸೆ, ಬಂಡಲ, ರಾಗಿಹೊಸಳ್ಳಿ, ಕತಗಾಲವರೆಗೆ ಕಾಮಗಾರಿ ನಡೆಯಬೇಕಿದೆ. ಕಳೆದ ಮಳೆಗಾಲದಲ್ಲಿ ರಸ್ತೆಗಳು ಹೊಂಡ ಬಿದ್ದಿತ್ತು. ಮಳೆ ಮುಗಿದ ಬಳಿಕ ಹೊಂಡವನ್ನು ಮುಚ್ಚಲು ಜೆಲ್ಲಿಯ ಪೌಡರ್, ಮಣ್ಣನ್ನು ಹಾಕಲಾಗಿದೆ. ಇದರಿಂದ ಭಾರಿ ಗಾತ್ರದ ವಾಹನ ಸಾಗಿದರೆ ಧೂಳು ಹಾರುತ್ತಿದೆ.
ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಸಂಕಷ್ಟಎದುರಿಸುವಂತಾಗಿದೆ. ಬಸ್ ಅಥವಾ ಲಾರಿಯಂತಹ ಭಾರಿ ಗಾತ್ರದ ವಾಹನ ಸಾಗಿದರೆ ಕೆಲವು ನಿಮಿಷ ಮಂಜು ಮುಸುಕಿದಂತೆ ಧೂಳು ರಸ್ತೆಯನ್ನೆಲ್ಲ ಆವರಿಸುತ್ತದೆ.
ಬಹುತೇಕ ಕಡೆ ಡಾಂಬರೀಕರಣ ಮಾಡಿದ್ದು ಮಳೆಯಿಂದಾಗಿ ಹಾಳಾಗಿ ಜೆಲ್ಲಿಕಲ್ಲು ಉಳಿದುಕೊಂಡಿದೆ. ಜತೆಗೆ ಅಲ್ಲಿಲ್ಲಿ ಮಳೆ ನೀರು ಸಾರಾಗವಾಗಿ ಹೋಗಲು ರಸ್ತೆಗೆ ಅಡ್ಡಲಾಗಿ ಸ್ಲಾ್ಯಬ್ ನಿರ್ಮಾಣ ಮಾಡಲಾಗಿದ್ದು, ಮಣ್ಣು, ಜೆಲ್ಲಿಗಳನ್ನು ಹಾಕಲಾಗಿದೆ. ಇದರಿಂದಾಗಿ ವಾಹನಗಳ ಸಂಚಾರಕ್ಕೆ ಸಾಕಷ್ಟುತೊಂದರೆ ಆಗುತ್ತಿದೆ. ತಾತ್ಕಾಲಿಕವಾಗಿಯಾದರೂ ಇದನ್ನು ದುರಸ್ತಿ ಮಾಡಲು ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದ ಕಂಪೆನಿ ಕ್ರಮ ಕೈಗೊಳ್ಳಬೇಕಿದೆ.
ಇದನ್ನೂ ಓದಿ: ದಟ್ಟ ಅರಣ್ಯಕ್ಕೆ ಕಾಂಕ್ರೀಟ್ ಬೇಲಿ?: ಸರ್ಕಾರದ ಹಣದ ಮೇಲೆ ಅರಣ್ಯ ಇಲಾಖೆ ಕಣ್ಣು?
ಪ್ರತಿನಿತ್ಯ ಸಾವಿರಾರು ವಾಹನಗಳು ಕುಮಟಾ-ಶಿರಸಿ ಮಾರ್ಗದಲ್ಲಿ ಸಂಚಾರ ಮಾಡುತ್ತವೆ. ಅಮ್ಮಿನಳ್ಳಿಯಿಂದ ಕತಗಾಲವರೆಗೆ ಈ ರಸ್ತೆಯ ಅಕ್ಕಪಕ್ಕದ ನಿವಾಸಿಗಳು, ಅಂಗಡಿಕಾರರು ರೋಗ-ರುಜಿನಗಳ ಆತಂಕ ವ್ಯಕ್ತವಾಗಿದೆ. ಭಾರಿ ವಾಹನ ಸಾಗಿದರೆ ಮನೆ, ಅಂಗಡಿಯನ್ನು ಧೂಳು ಮೆತ್ತಿಕೊಳ್ಳುತ್ತಿದೆ. ಹಗಲು ಇರುಳೆನ್ನದೇ ವಾಹನ ಸಂಚಾರ ಮಾಡುವುದರಿಂದ ಜೆಲ್ಲಿಯ ಹಾಗೂ ಮಣ್ಣಿನ ಧೂಳು ಸ್ಥಳೀಯರ ನಿದ್ದೆಗೆಡಿಸಿದೆ. ಈ ಧೂಳಿನಿಂದ ಅಲರ್ಜಿ, ನೆಗಡಿ, ಕೆಮ್ಮು, ಶ್ವಾಸಕೋಶದ ಸಮಸ್ಯೆ ಕಾಡುವ ಭಯ ಪ್ರಾರಂಭವಾಗಿದೆ.
ಅಮ್ಮಿನಳ್ಳಿಯಿಂದ ಕತಗಾಲವರೆಗೂ ಹೆದ್ದಾರಿ ಅಕ್ಕಪಕ್ಕವೇ ಸಾಕಷ್ಟುಮನೆ, ಅಂಗಡಿಗಳಿದ್ದು, ಪ್ರಾಥಮಿಕ, ಪ್ರೌಢಶಾಲೆಗಳು ಇವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸುವಂತೆ ಆಗಿದೆ. ರಸ್ತೆಯ ಧೂಳು ಸ್ಥಳೀಯ ನಿವಾಸಿಗಳಿಗೆ ತಲೆನೋವಾಗಿದ್ದು, ಗುತ್ತಿಗೆ ಪಡೆದ ಕಂಪೆನಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.
ಒಂದು ವಾಹನ ಸಾಗಿದರೂ ಮನೆಯೆಲ್ಲ ಧೂಳಾಗುತ್ತದೆ. ಕಾಮಗಾರಿ ನಡೆಸಲು ಅಭ್ಯಂತರವಿಲ್ಲ. ವಿರೋಧವಿಲ್ಲ. ಆದರೆ ಜನರಿಗೆ ತೊಂದರೆ ಆಗದಂತೆ ಕೆಲಸ ಮಾಡಬೇಕಿದೆ. ಶಿರಸಿಯಿಂದ ಕುಮಟಾವರೆಗೆ ಕೆಲಸ ಮುಗಿಯಲು ಕಾಲಾವಕಾಶ ಹಿಡಿಯಬಹುದು. ಅಲ್ಲಿಯವರೆಗೆ ಈ ರೀತಿ ಧೂಳು ಏಳದಂತೆ, ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಿದೆ.
-ಮಂಜುನಾಥ ನಾಯ್ಕ, ಅಮ್ಮಿನಳ್ಳಿ