ಮಹಿಳೆಯರಿಗೆ ಶೇ.50 ಟಿಕೆಟ್‌ ದರ ಎಫೆಕ್ಟ್‌: ಮಹಾರಾಷ್ಟ್ರದಲ್ಲಿ ಕರ್ನಾಟಕ ಸಾರಿಗೆ ಬಸ್‌ ಖಾಲಿ ಖಾಲಿ..!

ಮಹಾರಾಷ್ಟ್ರ ಸರ್ಕಾರ ತನ್ನ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗಾಗಿ ಟಿಕೆಟ್‌ ದರವನ್ನು ಶೇ.50ರಷ್ಟು ಕಡಿತಗೊಳಿಸಿ, ನಿಗದಿಪಡಿಸಿದ್ದು, ಇದು ಈಗ ಮಾಹಾರಾಷ್ಟ್ರ ಭಾಗಕ್ಕೆ ಸಂಚರಿಸುವ ಕರ್ನಾಟಕ ರಾಜ್ಯ ಸಾರಿಗೆ ಬಸ್‌ಗಳಿಗೆ ಹಾನಿ ತಂದೊಡ್ಡಿದೆ.

Karnataka Transport Buses Empty in Maharashtra grg

ಅಣ್ಣಾಸಾಬ ತೆಲಸಂಗ

ಅಥಣಿ(ಮೇ.20): ಮಹಾರಾಷ್ಟ್ರ ಸರ್ಕಾರದ ಸಾರಿಗೆ ಇಲಾಖೆ ತನ್ನ ಬಸ್‌ಗಳಲ್ಲಿ ಮಹಿಳೆಯರಿಗೆ ಅರ್ಧ ದರದಲ್ಲಿ ಪ್ರಯಾಣಿಸುವ ಸೌಲಭ್ಯ ನೀಡಿದ್ದರ ಪರಿಣಾಮ ಈಗ ಕರ್ನಾಟಕ ಸಾರಿಗೆ ಬಸ್‌ಗಳು ಮಹಾರಾಷ್ಟ್ರ ಪ್ರದೇಶಗಳಲ್ಲಿ ಖಾಲಿ ಖಾಲಿಯಾಗಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ!

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಹೊಂದಿರುವ ಕಾಂಗ್ರೆಸ್‌ ಪಕ್ಷ ಪ್ರಕಟಿಸಿದ 5 ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯವೂ ಒಂದಾಗಿದೆ. ಆದರೆ, ಇದಕ್ಕೂ ಮೊದಲೇ ಮಹಾರಾಷ್ಟ್ರ ಸರ್ಕಾರ ತನ್ನ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗಾಗಿ ಟಿಕೆಟ್‌ ದರವನ್ನು ಶೇ.50ರಷ್ಟು ಕಡಿತಗೊಳಿಸಿ, ನಿಗದಿಪಡಿಸಿದ್ದು, ಇದು ಈಗ ಮಾಹಾರಾಷ್ಟ್ರ ಭಾಗಕ್ಕೆ ಸಂಚರಿಸುವ ಕರ್ನಾಟಕ ರಾಜ್ಯ ಸಾರಿಗೆ ಬಸ್‌ಗಳಿಗೆ ಹಾನಿ ತಂದೊಡ್ಡಿದೆ.

Free Bus Pass: ಕಾರ್ಮಿಕರ ಉಚಿತ ಬಸ್ ಪಾಸ್‌ಗೆ ತಿಲಾಂಜಲಿ ಇಟ್ಟ ರಾಜ್ಯ ಸರ್ಕಾರ?

ಕರ್ನಾಟಕ ಸಾರಿಗೆಗೆ ಹೇಗೆ ಹಾನಿ?:

ಗಡಿ ಭಾಗವಾದ ಅಥಣಿ ಮತ್ತು ಕಾಗವಾಡದಿಂದ ಮಹಾರಾಷ್ಟ್ರಕ್ಕೆ ತೆರಳುವ ಮಹಿಳೆಯರು, ಕರ್ನಾಟಕ ಸಾರಿಗೆಯಲ್ಲೇ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ ಗ್ರಾಮದವರೆಗೆ ಮಾತ್ರ ಟಿಕೆಟ್‌ ಪಡೆದು ಸಂಚರಿಸುತ್ತಾರೆ. ನಂತರ ಮಹಾರಾಷ್ಟ್ರದ ಬಸ್‌ಗಳನ್ನು ಹತ್ತಿ ಶೇ.50ರಷ್ಟುಕಡಿತ ಪ್ರಯಾಣ ದರದಲ್ಲಿ ಮುಂದಿನ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದಾಗಿ ಕರ್ನಾಟಕದ ಸಾರಿಗೆ ಬಸ್‌ಗಳು ಖಾಲಿ ಖಾಲಿಯಾಗಿ ಸಂಚರಿಸುತ್ತಿದ್ದು, ಇದು ಒಂದು ಕಡೆ ನಷ್ಟಕ್ಕೆ ಕಾರಣವಾಗುತ್ತಿದ್ದರೆ ಮತ್ತೊಂದು ಕಡೆ ಕರ್ನಾಟಕ-ಮಹಾರಾಷ್ಟ್ರ ಸಾರಿಗೆ ಸವಾಲು-ಪೈಪೋಟಿ ಎದುರಾಗುವ ಸನ್ನಿವೇಶ ತಂದೊಡ್ಡಿದೆ.

ಗಡಿ ಭಾಗದ ಅಥಣಿ ಮತ್ತು ಕಾಗವಾಡ ತಾಲೂಕುಗಳ ಜನರು ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ, ಮೀರಜ್‌ ಮತ್ತು ಜತ್ತ ಪಟ್ಟಣಗಳಿಗೆ ವ್ಯಾಪಾರ ವಹಿವಾಟು ನಡೆಸಲು ಪ್ರತಿನಿತ್ಯ ಸಾರಿಗೆ ಬಸ್‌ಗಳಲ್ಲಿ ಸಂಚರಿಸುತ್ತಾರೆ. ಮಹಾರಾಷ್ಟ್ರದ ಅನೇಕ ನಗರಗಳಿಂದ ಕರ್ನಾಟಕ ಗಡಿ ಭಾಗದ ಅನೇಕ ಪಟ್ಟಣಗಳಿಗೆ ವ್ಯಾಪಾರ, ಉದ್ಯೋಗಕ್ಕಾಗಿ ಅನೇಕ ಜನರು ಬರುತ್ತಾರೆ. ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯ ಅಥಣಿ ಘಟಕ, ವಿಜಯಪುರ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಸೇರಿದಂತೆ ಅನೇಕ ಸಾರಿಗೆ ಘಟಕಗಳಿಂದ ಪ್ರತಿನಿತ್ಯ ಅನೇಕ ಸಾರಿಗೆ ಬಸ್‌ಗಳು ಮಹಾರಾಷ್ಟ್ರದ ಕೊಲ್ಲಾಪುರ, ಪುಣೆ, ಮುಂಬೈ, ಶಿರಡಿ, ಸಾಂಗಲಿ, ಮೀರಜ್‌, ಜತ್‌, ಅಕ್ಕಲಕೋಟ ಸೊಲ್ಲಾಪುರ, ಗುಡ್ಡಾಪುರ, ಪಂಡರಪುರ ಸೇರಿದಂತೆ ಅನೇಕ ನಗರಗಳಿಗೆ ತೆರಳುತ್ತವೆ.

ಅಲ್ಲದೇ, ವಿವಿಧ ಕಂಪನಿಗಳಲ್ಲಿ ನೌಕರಿ ಮಾಡುವ ನೌಕರರು ಮತ್ತು ಮಹಾರಾಷ್ಟ್ರದ ವಿವಿಧ ಗ್ರಾಮಗಳಲ್ಲಿರುವ ಬಂಧು-ಬಳಗ, ಸಂಬಂಧಿಕರ ಮನೆಗಳಿಗೆ ಹೋಗುವ ಕರ್ನಾಟಕದ ನೂರಾರು ಮಹಿಳೆಯರು ಸಾರಿಗೆ ಬಸ್‌ಗಳಲ್ಲಿಯೇ ಪ್ರಯಾಣಿಸುತ್ತಾರೆ.

ಕರ್ನಾಟಕ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ಅನೇಕ ಮಹಿಳೆಯರು ಮಹಾರಾಷ್ಟ್ರದ ಗಡಿ ಪ್ರದೇಶದವರೆಗೆ ಮಾತ್ರ ಕರ್ನಾಟಕ ಸಾರಿಗೆ ಬಸ್‌ ದರ ಟಿಕೆಟ್‌ ಪಡೆದುಕೊಂಡು ಪ್ರಯಾಣಿಸುತ್ತಾರೆ. ಅಲ್ಲಿಂದ ಕರ್ನಾಟಕ ಸಾರಿಗೆ ಬಸ್‌ಗಳಿಂದ ಇಳಿದು ಮಹಾರಾಷ್ಟ್ರದಲ್ಲಿರುವ ರಿಯಾಯಿತಿ ದರದ ಲಾಭ ಪಡೆಯಲು ಮಹಾರಾಷ್ಟ್ರದ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಾರೆ.

Chikkamagaluru: ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿಯೇ ಹೆರಿಗೆ ಮಾಡಿಸಿದ ಲೇಡಿ ಕಂಡಕ್ಟರ್

ಹೀಗಾಗಿ ನಮ್ಮ ರಾಜ್ಯದ ಅನೇಕ ಸಾರಿಗೆ ಬಸ್‌ಗಳು ಮಹಾರಾಷ್ಟ್ರ ವಲಯದಲ್ಲಿ ಖಾಲಿಯಾಗೇ ಸಂಚರಿಸುತ್ತಿವೆ. ಇನ್ನೇನಾದರೂ ನಮ್ಮ ಕರ್ನಾಟಕ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದರೆ ಮಹಾರಾಷ್ಟ್ರ ಸಾರಿಗೆ ಬಸ್‌ಗಳು ಕರ್ನಾಟಕದ ಗಡಿಭಾಗದ ಪ್ರದೇಶಗಳಲ್ಲಿ ಖಾಲಿ ಖಾಲಿಯಾಗಿ ಓಡಾಡುವ ಸಂದರ್ಭ ಬಂದರೂ ಅಚ್ಚರಿ ಪಡಬೇಕಾಗಿಲ್ಲ!

ಮಹಾರಾಷ್ಟ್ರದಲ್ಲಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಅರ್ಧ ದರದಲ್ಲಿ ಟಿಕೆಟ್‌ ನೀಡುತ್ತಿರುವುದರಿಂದ ನಮ್ಮ ಸಾರಿಗೆ ಘಟಕದ ಬಸ್‌ಗಳಿಗೆ ಆದಾಯ ಕುಂಠಿತವಾಗುತ್ತಿದೆ. ಆದರೆ, ಯಾವುದೇ ಮಾರ್ಗದಲ್ಲಿ ಬಸ್‌ಗಳನ್ನು ಇನ್ನೂ ಸ್ಥಗಿತಗೊಳಿಸಿಲ್ಲ ಅಂತ ಅಥಣಿ ಘಟಕ ವ್ಯವಸ್ಥಾಪಕ ನಿಜಗುಣಿ ಕೇರಿ ತಿಳಿಸಿದ್ದಾರೆ.  

Latest Videos
Follow Us:
Download App:
  • android
  • ios