ಬೆಂಗಳೂರು [ಆ.17]: ಶಾಸೊತ್ರೕಕ್ತವಾಗಿ ಗಣೇಶ ಪ್ರತಿಮೆಗಳನ್ನು ಪ್ರತಿಷ್ಠಾಪಿಸುವಂತೆಯೇ ವಿಸರ್ಜನೆಗೆ ಕೂಡ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅವಕಾಶ ಕಲ್ಪಿಸುತ್ತಿದೆ. ಪೂಜೆ, ನೃತ್ಯ ಪ್ರದರ್ಶನಕ್ಕೆ ಕಲಾವಿದರು ಹಾಗೂ ವಿಸರ್ಜನೆಗೆ ಮೊಬೈಲ್‌ ಟ್ಯಾಂಕರ್‌ ಅನ್ನು ವ್ಯವಸ್ಥೆ ಮಾಡುತ್ತಿದೆ.

ಹೌದು, ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಇದೇ ಮೊದಲ ಬಾರಿಗೆ 10 ಲಾರಿಗಳನ್ನು ಬಳಸಿಕೊಂಡು ವಿಸರ್ಜನೆಗೆ ಅವಕಾಶ ಕಲ್ಪಿಸುತ್ತಿದೆ. ಒಂದೇ ಕಡೆ ಎರಡು ಲಾರಿಗಳಿರುತ್ತವೆ, ಒಂದು ಲಾರಿಯಲ್ಲಿ ಕಲಾವಿದರು ಹಾಗೂ ಪೂಜಾರಿಗಳು ಇರುತ್ತಾರೆ. ಮತ್ತೊಂದು ಲಾರಿಯಲ್ಲಿ ವಿಸರ್ಜನೆಗೆ ಟ್ಯಾಂಕರ್‌ ಇರುತ್ತದೆ. ವಾಹನಕ್ಕೆ ಜಿಪಿಎಸ್‌ ಅಳವಡಿಸಲಾಗಿರುತ್ತದೆ. ಗಣೇಶ ಪ್ರತಿಷ್ಠಾಪನೆ ಮಾಡುವವರು ನೋಂದಣಿ ಮಾಡಿಕೊಂಡರೆ, ವಾಹನ ಯಾವ ಬಡಾವಣೆಯಲ್ಲಿದೆ ಎಂಬುದು ತಿಳಿಯಲಿದೆ. ತಮ್ಮ ಬಡಾವಣೆಗೆ ಬರುವ ದಿನ ವಿಸರ್ಜನೆ ಮಾಡಲು ಅವಕಾಶ ದೊರೆಯಲಿದೆ.

ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಶುಕ್ರವಾರ ಬಿಬಿಎಂಪಿ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್‌, ಮನೆಗಳಲ್ಲಿಯೇ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಈಗಾಗಲೇ 32 ಕಲ್ಯಾಣಿಗಳು ಹಾಗೂ 100 ಮೊಬೈಲ್‌ ಟ್ಯಾಂಕರ್‌ಗಳನ್ನು ನಿರ್ಮಿಸಲಾಗಿದೆ. ಈ ಬಾರಿ ಹೊಸದಾಗಿ 10 ಲಾರಿಗಳನ್ನು ಹೆಚ್ಚುವರಿಯಾಗಿ ಬಳಿಸಿಕೊಳ್ಳಲಾಗುತ್ತಿದೆ. ಮಂಡಳಿ ವತಿಯಿಂದ ಸದ್ಯದಲ್ಲಿಯೇ ಆ್ಯಪ್‌ ಕೂಡ ಸಿದ್ಧಪಡಿಸಲಾಗುತ್ತದೆ. ನೋಂದಣಿ ಮಾಡಿಕೊಳ್ಳುವ ಪ್ರತಿಯೊಬ್ಬರೂ ವಾಹನಗಳು ಯಾವ ಬಡಾವಣೆಯಲ್ಲಿ ಸಂಚರಿಸುತ್ತಿವೆ ಎಂಬುದನ್ನು ಜಿಪಿಎಸ್‌ ಮೂಲಕ ತಿಳಿಯಬಹುದು ಎಂದು ಹೇಳಿದರು.

ಮನೆಗಳಲ್ಲಿ ಪ್ರತಿಷ್ಠಾಪಿಸುವವರಿಗೆ ಮಾತ್ರ ಈ ವಾಹನದಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆಗೆ ಅವಕಾಶವಿದೆ. ಸಂಘ ಸಂಸ್ಥೆಗಳು ಹಾಗೂ ದೊಡ್ಡ ಮಟ್ಟದಲ್ಲಿ ಪ್ರತಿಷ್ಠಾಪಿಸುವವರಿಗೆ ಅವಕಾಶವಿಲ್ಲ. ಹಬ್ಬ ಆರಂಭವಾದ ಮೊದಲ ಒಂದು ವಾರ ವಾಹನವು ವಿವಿಧ 30 ಕಡೆ ಸಂಚರಿಸಲಿದೆ. ಆಯಾ ಬಡಾವಣೆ ನಿವಾಸಿಗಳು ಟ್ಯಾಂಕರ್‌ನಲ್ಲಿಯೇ ವಿಸರ್ಜಿಸಬಹುದು ಎಂದು ತಿಳಿಸಿದರು.

ರಾಜ್ಯಾದ್ಯಂತ ನೂರಕ್ಕೆ ನೂರರಷ್ಟುಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಗಣೇಶ ಮೂರ್ತಿಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕನಿಷ್ಠ ಶೇ.80ರಿಂದ 85ರಷ್ಟುಗುರಿ ಮುಟ್ಟಲು ಪ್ರಯತ್ನಿಸಲಾಗುವುದು. ಎಲ್ಲರೂ ಸಹಕರಿಸಿದರೆ ಶೇ.100 ಪರಿಸರ ಸ್ನೇಹಿ ಹಬ್ಬ ಸಾಧ್ಯವಾಗುತ್ತದೆ. ಪಿಒಪಿ ಮಾರಾಟ ಮತ್ತು ರಚನೆ ಮಾಡುವವರ ಟ್ರೇಡ್‌ ಲೈಸನ್ಸ್‌ ರದ್ದುಗೊಳಿಸುವುದು ಮತ್ತು ಮಾರಾಟ ಮಾಡುವವರು ಹಾಗೂ ರಚನೆ ಮಾಡುವವರ ಮೇಲೆ ಕ್ರಮ ಜರುಗಿಸಲಾಗುವುದು. ಕಳೆದ ವಾರ ಯಲಹಂಕದಲ್ಲಿ 168 ಪಿಒಪಿ ಮೂರ್ತಿಗಳನ್ನು ವಶಕ್ಕೆ ಪಡೆದು ಕಲ್ಲು ಕ್ವಾರಿಗಳಲ್ಲಿ ವಿಸರ್ಜಿಸಲಾಗಿದೆ ಎಂದು ಹೇಳಿದರು.

ನಗರದ ಹೊರ ವಲಯದ ಕುಂಬಳಗೋಡು ಮತ್ತು ಕೋಗಿಲೆ ಕ್ರಾಸ್‌ ಸೇರಿದಂತೆ ಹಲವೆಡೆ ಪಿಒಪಿ ಮಾರಾಟ ಮಾಹಿತಿ ಬಂದಿದ್ದು, ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌ ಹಾಗೂ ಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.

 5 ಅಡಿಗಿಂತ ಎತ್ತರದ ಗಣೇಶನಿಗೆ ನಿಷೇಧ

ಪಿಒಪಿ ತಡೆಗಟ್ಟುವಂತೆ ಈಗಾಗಲೇ ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು, ನಗರಸಭೆಗಳಿಗೆ ಸೂಚನೆ ನೀಡಲಾಗಿದೆ. ಬೇರೆ ರಾಜ್ಯಗಳಿಂದ ಬರುವ ಗಣೇಶ ಪ್ರತಿಮೆಗಳನ್ನು ಚೆಕ್‌ಪೋಸ್ಟ್‌ಗಳಲ್ಲಿಯೇ ತಡೆಯಲು ಪೊಲೀಸ್‌ ಹಾಗೂ ಸಾರಿಗೆ ಇಲಾಖೆ ಆಯುಕ್ತರಿಗೆ ಮನವಿ ಮಾಡಲಾಗಿದೆ. ಐದು ಅಡಿಗಳಿಗಿಂತ ಎತ್ತರದ ಮೂರ್ತಿಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.