Asianet Suvarna News Asianet Suvarna News

ಹಾಡಹಗಲೇ ಪೊಲೀಸರ ಮನೆಗೆ ನುಗ್ಗಿ ದರೋಡೆ ಮಾಡಿದ ಕಳ್ಳ: 12 ಗಂಟೆಯೊಳಗೆ ಜೈಲು ಸೇರಿದ

ಮಡಿಕೇರಿಯಲ್ಲಿ ಪೊಲೀಸರ ಮನೆಗೆ ಹಾಡಹಗಲೇ ನುಗ್ಗಿ ದರೋಡೆ ಮಾಡಿದ್ದ ಕಳ್ಳನನ್ನು 12 ಗಂಟೆಯೊಳಗೆ ಮಡಿಕೇರಿ ಕೊಡಗು ಪೊಲೀಸರು ಬಂಧಿಸಿದ್ದಾರೆ.

Karnataka Police home robbed Rajasthani thief and madikeri police arrested within 12 hours sat
Author
First Published Nov 6, 2023, 7:54 PM IST

ವರದಿ : ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ನ.06):
ಮಡಿಕೇರಿ ನಗರದ ಜನನಿಬಿಡ ಪ್ರದೇಶದಲ್ಲಿರುವ ಪೊಲೀಸ್‌ ಅಧಿಕಾರಿಯ ಮನೆಗೆ ಹಾಡಹಗಲೇ ನುಗ್ಗಿ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ ಚಿನ್ನದ ಸರ ಹಾಗೂ ಹಣವನ್ನು ದರೋಡೆ ಮಾಡಿದ್ದ ಖದೀಮನನ್ನು ಕೇವಲ 12 ಗಂಟೆಯೊಳಗೆ ಮಡಿಕೇರಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಮನೆಗೆ ನುಗ್ಗಿ ದರೋಡೆ ಮಾಡಿದ ಆರೋಪಿ ವಿಕಾಸ್ ಚೋರ್ಡಿಯಾ (33) ಆಗಿದ್ದಾನೆ. ಮಡಿಕೇರಿ ನಗರದ ಕಾಲೇಜು ರಸ್ತೆಯಲ್ಲಿ ಇರುವ ಐಡಿಬಿಐ ಬ್ಯಾಂಕು ಎದುರಿಗೆ ಇರುವ ನಿವೃತ ಪೊಲೀಸ್ ಅಧಿಕಾರಿ ಪ್ರಭಾಕರ್ ಎಂಬುವರ ಮನೆಯಲ್ಲಿ ಅವರ ಪತ್ನಿ ಸಾಕಮ್ಮ ಎಂಬುವರು ಭಾನುವಾರ ಸಂಜೆ ಒಬ್ಬರೇ ಇರುವಾಗ ಮನೆಗೆ ನುಗ್ಗಿದ್ದ ಖದೀಮ ವಿಕಾಸ್ ಸಾಕಮ್ಮ ಅವರಿಗೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿದ್ದನು. ಬಳಿಕ ಸಾಕಮ್ಮ ಅವರ ಕೊರಳಿನಲ್ಲಿ ಇದ್ದ 27 ಗ್ರಾಂ ತೂಕದ ಚಿನ್ನದ ಸರ ಹಾಗೂ ಉಂಗುರವನ್ನು ಕಿತ್ತು ಪರಾರಿಯಾಗಿದ್ದನು.

ಕರ್ನಾಟಕದ ಜನತೆಗೆ ಉಚಿತ ವಿದ್ಯುತ್‌ ಯೂನಿಟ್‌ಗಳ ಮಿತಿ ಹೆಚ್ಚಿಸಿದ ಸರ್ಕಾರ! ಯಾರಿಗೆಲ್ಲಾ ಅನ್ವಯ ಗೊತ್ತಾ?

ಭಾನುವಾರ ಸಂಜೆ ವಾಯುವಿಹಾರಕ್ಕೆಂದು ಹೋಗಿದ್ದ ನಿವೃತ್ತ ಪೊಲೀಸ್‌ ಅಧಿಕಾರಿ ಪ್ರಭಾಕರ್ ಅವರು ವಾಪಸ್ ಮನೆಗೆ ಬಂದಾಗ ದರೋಡೆಯಾಗಿರುವ ಘಟನೆ ಗೊತ್ತಾಗಿತ್ತು. ಕೂಡಲೇ ಮಡಿಕೇರಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಕೂಡಲೇ ತನಿಖೆ ಆರಂಭಿಸಿದ್ದ ಪೊಲೀಸರು ಸಿಸಿಟಿವಿ ಹಾಗೂ ಇತರೆ ಮಾಹಿತಿಯ ಮೂಲಗಳಿಂದ ಆರೋಪಿ ವಿಕಾಸ್ ಚೋರ್ಡಿಯನನ್ನು ಬಂಧಿಸಿದ್ದಾರೆ. ನಂತರ, ತನಿಖೆ ನಡೆಸಿ ಬಳಿಕ ನ್ಯಾಯಲಕ್ಕೆ ಒಪ್ಪಿಸಿದ್ದಾರೆ.

ರೆಸಾರ್ಟ್ ನಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಆರೋಪಿ : ಕಳ್ಳ ವಿಕಾಸ್ ಚೋರ್ಡಿಯ ಮೂಲತಃ ರಾಜಸ್ಥಾನದವನು. ಉದ್ಯೋಗ ಅರಸಿ ಕೊಡಗಿಗೆ ಬಂದಿದ್ದ ಖದೀಮ ಕೆಲವು ತಿಂಗಳ ಹಿಂದೆ ಮಡಿಕೇರಿ ಹೊರವಲಯ ಹಾಗೂ ಮಡಿಕೇರಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿರುವ ಇಬ್ಬನಿ ರೆಸಾರ್ಟಿನಲ್ಲಿ ಹೌಸ್‌ ಕೀಪಿಂಗ್ ಕೆಲಸ ಮಾಡುತ್ತಿದ್ದನು. ಭಾನುವಾರ ಮಡಿಕೇರಿಗೆ ಬಂದಿದ್ದ ಖದೀಮ ಪ್ರಭಾಕರ್ ಮತ್ತು ಸಾಕಮ್ಮ ಅವರ ಮನೆಯ ಮೇಲೆ ಕಣ್ಣು ಹಾಕಿದ್ದನು. ನಗರದ ಹಲವೆಡೆ ಸುತ್ತಾಡಿದ ಪಾಪಿ ಮನೆಯಲ್ಲಿ ಒಂಟಿಯಾಗಿ ಮಹಿಳೆ ಇರುವುದನ್ನು ಗಮನಿಸಿದ್ದನು. ಹೀಗಾಗಿ ಯಾರಿಗೂ ಗೊತ್ತಾಗದಂತೆ ಸಾಕಮ್ಮ ಅವರ ಮನೆಗೆ ನುಗ್ಗಿದ್ದನು. ಒಳಗೆ ಹೋದವನೇ ಕೈಗೆ ಸಿಕ್ಕ ಕಬ್ಬಿಣದ ರಾಡಿನಿಂದ ಸಾಕಮ್ಮ ಅವರ ಮೇಲೆ ಹಲ್ಲೆ ಮಾಡಿ ಅವರ ಕೊರಳಿನಲ್ಲಿದ್ದ 27 ಗ್ರಾಂ ಚಿನ್ನದ ಸರ ಹಾಗೂ ಕೈಯಲ್ಲಿದ್ದ ಚಿನ್ನದ ಉಂಗುರವನ್ನು ದೋಚಿದ್ದನು.

ಮುಸ್ಲಿಂ ವ್ಯಕ್ತಿ ಅತಿಕ್ರಮಿಸಿದ್ದ ಜಾಗದಲ್ಲಿ ಟಿಪ್ಪು ಧ್ವಂಸಗೊಳಿಸಿದ್ದ ಗೋಪಾಲಕೃಷ್ಣ ದೇಗುಲ ಪತ್ತೆ!

ಇನ್ನು ಕಳ್ಳತನ ಮಾಡುವ ಖದೀಮ ಮನೆಗೆ ನುಗ್ಗಿದ್ದ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಮಡಿಕೇರಿ ಪೊಲೀಸರು ಕೂಡಲೇ ಕಾರ್ಯ ಪ್ರವೃತ್ತರಾಗಿದ್ದರು. ಸಿಸಿ ಕ್ಯಾಮೆರಾದಲ್ಲಿ ಇದ್ದ ವಿಡಿಯೋವನ್ನು ಪೊಲೀಸರೇ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಆ ವಿಡಿಯೋ ಇಬ್ಬನಿ ರೆಸಾರ್ಟಿನಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೂ ತಲುಪಿತ್ತು. ಪೊಲೀಸರೂ ಕೂಡ ಎರಡು ಮೂರು ರೆಸಾರ್ಟ್ ಹೋಂಸ್ಟೇಗಳಲ್ಲಿ ಈತನ ಬಗ್ಗೆ ವಿಚಾರಿಸಿದ್ದರು. ಹೀಗಾಗಿ, ಕಳ್ಳ ವಿಕಾಸ್‌ ಕೊಡಗು ಜಿಲ್ಲೆಯನ್ನು ಬಿಟ್ಟು ಹೋಗುವಷ್ಟರಲ್ಲಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯವನ್ನು ಕಕ್ಕಿದ್ದಾನೆ. ಸದ್ಯ ಆತನನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಿದ್ದು ಕಂಬಿ ಹಿಂದಕ್ಕೆ ತಳ್ಳಲಾಗಿದೆ.

Follow Us:
Download App:
  • android
  • ios