ಬೆಂಗಳೂರು(ಮೇ.08): ವಿಶ್ವದ ವಿವಿಧ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರು ಮೇ 11ರಂದು ನಗರದಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

ಕೊರೋನಾ ಸೋಂಕು ಹರಡದಂತೆ ನಿಯಂತ್ರಿಸುವುದಕ್ಕಾಗಿ ಗುರುವಾರ ವಿಮಾನ ನಿಲ್ದಾಣ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಸಚಿವರು, ಪ್ರಯಾಣಿಕರ ಪರೀಕ್ಷೆ ನಡೆಸುವುದು, ಸ್ಕ್ರೀನಿಂಗ್‌ ವ್ಯವಸ್ಥೆ ಸೇರಿದಂತೆ ಸಿದ್ಧತೆಗಳ ಪರಿಶೀಲನೆ ನಡೆಸಿದರು. ಅಲ್ಲದೆ, ಕೈಗೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಚನೆ ಮತ್ತು ಮಾರ್ಗದರ್ಶನಗಳನ್ನು ನೀಡಿದರು.

ಬಿಬಿಎಂಪಿ ಚುನಾವಣೆ 6 ತಿಂಗಳು ಮುಂದಕ್ಕೆ?

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್‌, ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ವಿವಿಧ ದೇಶಗಳಿಂದ ಒಟ್ಟು 6,500ಕ್ಕೂ ಅಧಿಕ ಪ್ರಯಾಣಿಕರು ಆಗಮಿಸುವ ನಿರೀಕ್ಷೆ ಇದೆ. ಅವರೆಲ್ಲರನ್ನು ತಪಾಸಣೆ ನಡೆಸಿ ಎರಡು ಹಂತದ ಪರೀಕ್ಷೆಗೆ ಒಳಪಡಿಸಲಾಗುವುದು. ಅವರಿಗೆ ಯಾವುದೇ ಸೋಂಕು ಇಲ್ಲ ಎಂಬುದು ದೃಢಪಟ್ಟನಂತರವೇ ಮನೆಗೆ ಕಳುಹಿಸಲಾಗುವುದು ಎಂದರು.

ಒಟ್ಟು ಹದಿನಾಲ್ಕು ದಿನಗಳ ಕಾಲ ಎಲ್ಲ ಪ್ರಯಾಣಿಕರನ್ನು ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿ ಇರಿಸಲಾಗುವುದು. ಅದಕ್ಕಾಗಿ ಹೋಟೆಲ್‌ಗಳು, ಶಾಲಾ ಕಾಲೇಜು, ಹಾಸ್ಟೆಲ್‌ ಮತ್ತಿತರ ಕಡೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇವರನ್ನು ಕ್ವಾರಂಟೈನ್‌ನಲ್ಲಿ ಇರಿಸುವುದರಿಂದ ಸಾರ್ವಜನಿಕರಿಗಾಗಲಿ, ಅಕ್ಕ ಪಕ್ಕದವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಈ ಬಗ್ಗೆ ಯಾರೂ ಸಹಾ ಆತಂಕ ಪಡುವ ಅಗತ್ಯವಿಲ್ಲ ಎಂದು ವಿವರಿಸಿದರು.

ಲಾಕ್‌ಡೌನ್‌ನಿಂದ ಕಷ್ಟದಲ್ಲಿರೋ ಮೈಸೂ​ರು ಝೂಗೆ 20 ಲಕ್ಷ: ಸುಧಾಮೂರ್ತಿ

ವಿದೇಶಗಳಿಂದ ಬರುವವರಿಗಾಗಿ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಬೇಕಾದ ಸಿದ್ಧತೆಗಳ ಕುರಿತು ಗುರುವಾರ ಮಧ್ಯಾಹ್ನ ನಡೆದ ಟಾಸ್ಕ್‌ಫೋರ್ಸ್‌ ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಕುರಿತು ಅಗತ್ಯ ಸೂಚನೆಗಳನ್ನು ನೀಡಿದ್ದು, ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದ್ದು, ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಇಲಾಖೆಯ ಸಿಬ್ಬಂದಿಗಳು ಪ್ರಯಾಣಿಕರ ಸುರಕ್ಷತೆ ಮತ್ತು ರಕ್ಷಣೆಗಾಗಿ ಈಗಾಗಲೇ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ಯಾರೂ ಸಹಾ ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.