ಬೆಂಗಳೂರುಮೇ.08): ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಮುಂಬರುವ ಸೆಪ್ಟೆಂಬರ್‌ನಲ್ಲಿ ನಡೆಯಬೇಕಾದ ಬಿಬಿಎಂಪಿ ಚುನಾವಣೆ ಬಹುತೇಕ ಮುಂದೂಡಿಕೆ ಸಾಧ್ಯತೆ ಇದೆ. ಬಿಬಿಎಂಪಿ ಸದಸ್ಯರ ಅಧಿಕಾರಾವಧಿ ಸೆಪ್ಟೆಂಬರ್‌ಗೆ ಅಂತ್ಯಗೊಳ್ಳಲಿದೆ.

ಈ ಹಿನ್ನೆಲೆಯಲ್ಲಿ ಆಗಸ್ಟ್‌ ಕೊನೆ ವಾರದೊಳಗೆ ಬಿಬಿಎಂಪಿಗೆ ಚುನಾವಣೆ ನಡೆದು ಸೆಪ್ಟೆಂಬರ್‌ ತಿಂಗಳಲ್ಲಿ ಮೇಯರ್‌ ಹಾಗೂ ಉಪ ಮೇಯರ್‌ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಕೊರೋನಾ ತುರ್ತು ಪರಿಸ್ಥಿತಿ ಇರುವುದರಿಂದ ಚುನಾವಣೆ ನಡೆಸುವುದು ಅನುಮಾನವಾಗಿದೆ.

ಲಾಕ್‌ಡೌನ್‌ನಿಂದ ಕಷ್ಟದಲ್ಲಿರೋ ಮೈಸೂ​ರು ಝೂಗೆ 20 ಲಕ್ಷ: ಸುಧಾಮೂರ್ತಿ

ಬಿಬಿಎಂಪಿ ಚುನಾವಣೆಯನ್ನು ನಿಗದಿತ ವೇಳೆಗೆ ನಡೆಸಬೇಕು ಎಂದು ಈಗಾಗಲೇ ಹೈಕೋರ್ಟ್‌ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೆ, ಕೊರೋನಾ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಲಾಕ್‌ಡೌನ್‌ ಮಾಡಲಾಗಿದೆ. ಜತೆಗೆ ಚುನಾವಣೆಗೆ ಬೇಕಾದ ಸಿದ್ಧತೆಗಳನ್ನು ಪ್ರಾದೇಶಿಕ ಚುನಾವಣಾ ಆಯೋಗ ಮಾಡಿಕೊಂಡಿಲ್ಲ. ಕೊರೋನಾ ಸೋಂಕು ಸದ್ಯಕ್ಕೆ ನಿವಾರಣೆ ಆಗುವುದು ಅನುಮಾನವಾದ ಹಿನ್ನೆಲೆಯಲ್ಲಿ ಕನಿಷ್ಠ 6 ತಿಂಗಳ ಕಾಲ ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ಸಾಧ್ಯತೆಗಳು ನಿಚ್ಚಳವಾಗಿವೆ.

ಆಗಸ್ಟ್‌ ತಿಂಗಳೊಳಗೆ ಚುನಾವಣೆ ನಡೆಸಬೇಕಾದರೆ 2011ರ ಜನಗಣತಿ ಪ್ರಕಾರ ವಾರ್ಡ್‌ ಪುನರ್‌ ವಿಂಗಡಣೆ ಮಾಡಬೇಕು. ನಂತರ ಪುನರ್‌ ವಿಂಗಡಣೆ ಕುರಿತಂತೆ ಸಾರ್ವಜನಿಕರ ಆಕ್ಷೇಪಣೆಗೆ 15 ದಿನಗಳ ಕಾಲಾವಕಾಶ ನೀಡಬೇಕು. ನಂತರ ಮೀಸಲಾತಿ ಪಟ್ಟಿಪ್ರಕಟಿಸಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಆದರೆ, ಈ ಪ್ರಕ್ರಿಯೆಗಳನ್ನು ಸರ್ಕಾರ ಇನ್ನೂ ಪೂರ್ಣಗೊಳಿಸಿದಂತೆ ಕಾಣುತ್ತಿಲ್ಲ.

'ಉತ್ತರ ಭಾರತದಲ್ಲಿ ಸಿಲುಕಿದ ಕನ್ನಡಿಗರನ್ನ ಕರೆತರಲು ವಿಶೇಷ ರೈಲು'

ನಗರದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕಂತೂ ವಾರ್ಡ್‌ ಪುನರ್‌ ವಿಂಗಡಣೆ ಕಾರ್ಯ ಕೈಗೊಳ್ಳಲು ಸಾಧ್ಯವಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕರಡನ್ನು ಮಾತ್ರ ಪ್ರಕಟಿಸಿ ಸುಮ್ಮನಾಗಿದೆ. ಇನ್ನು ಅಂತಿಮ ಪಟ್ಟಿಪ್ರಕಟಿಸಲಾಗಿಲ್ಲ.

ಒಂದು ವೇಳೆ ಸರ್ಕಾರ ವಾರ್ಡ್‌ ಪುನರ್‌ ವಿಂಗಡಣೆ ಮಾಡಿದರೂ ಪುನರ್‌ ವಿಂಗಡಣೆ ಬಗ್ಗೆ ಪ್ರತಿಪಕ್ಷದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ ಕೋರ್ಟ್‌ ಮೆಟ್ಟಿಲೇರುವ ಸಾಧ್ಯತೆ ಇರುವುದರಿಂದ ಯಾವುದೇ ಕಾರಣಕ್ಕೂ ಬಿಬಿಎಂಪಿಗೆ ಸಕಾಲಕ್ಕೆ ಚುನಾವಣೆ ನಡೆಯುವುದೇ ಅನುಮಾನ. ಒಂದು ವೇಳೆ ಕೊರೋನಾ ಸೋಂಕು ಹರಡುವುದು ಮುಂದುವರಿದರೆ ಈ ವರ್ಷ ಬಿಬಿಎಂಪಿಗೆ ಚುನಾವಣೆ ನಡೆಯುವುದು ಅನುಮಾನವಾಗಿದೆ.