Bengaluru: ರಸ್ತೆ ಗುಂಡಿ ಮುಚ್ಚಲು ಸೇನೆ ಕರೆಸಲಾ: ಬಿಬಿಎಂಪಿಗೆ ಹೈಕೋರ್ಟ್ ಖಡಕ್ ಎಚ್ಚರಿಕೆ
* ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಕ್ಷಮೆ ಕೇಳಿದ ಮುಖ್ಯ ಎಂಜಿನಿಯರ್
* ಕ್ರಿಯಾ ಯೋಜನೆ ಸಲ್ಲಿಸಲು ಸೂಚನೆ
* ವಿಚಾರಣೆಯನ್ನು ಮಾ.5ಕ್ಕೆ ಮುಂದೂಡಿದ ನ್ಯಾಯಪೀಠ
ಬೆಂಗಳೂರು(ಫೆ.18): ನಗರದ ರಸ್ತೆಯಲ್ಲಿ ಬಿದ್ದಿರುವ ಗುಂಡಿ ಮುಚ್ಚಲು ಬಿಬಿಎಂಪಿ(BBMP) ಅಸಮರ್ಥವಾಗಿದ್ದರೆ, ಆ ಜವಾಬ್ದಾರಿಯನ್ನು ಸೇನೆಗೆ ವಹಿಸಲಾಗುವುದು ಎಂದು ಹೈಕೋರ್ಟ್(High Court) ಖಡಕ್ ಆಗಿ ನುಡಿದೆ. ನಗರದ ರಸ್ತೆ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಲು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ವಿಜಯನ್ ಮೆನನ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಬಿಬಿಎಂಪಿಗೆ ಈ ಎಚ್ಚರಿಕೆ ನೀಡಿದೆ.
ನ್ಯಾಯಾಲಯದ ಆದೇಶದ ಹೊರತಾಗಿಯೂ ವಿಚಾರಣೆಗೆ ಗೈರಾಗಿದ್ದ ಕಾರಣಕ್ಕೆ ಹೈಕೋರ್ಟ್ ಜಾಮೀನು ಸಹಿತ ವಾರೆಂಟ್ ಜಾರಿಗೊಳಿಸಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿ ಎಂಜಿನಿಯರ್ ವಿಭಾಗದ ಮುಖ್ಯಸ್ಥ ಎಸ್.ಪ್ರಭಾಕರ್ ಗುರುವಾರ ವಿಚಾರಣೆಗೆ ಖುದ್ದು ಹಾಜರಾಗಿದ್ದರು.
Pothole Ridden Bengaluru Roads: ಕಿಲ್ಲರ್ ರಸ್ತೆಯಂತಾದ ನಗರದ ಮಿಲ್ಲರ‍್ಸ್ ರಸ್ತೆ!
ಅನಾರೋಗ್ಯ ಹಿನ್ನೆಲೆಯಲ್ಲಿ ಕಳೆದ ಬಾರಿ ವಿಚಾರಣೆಗೆ ಹಾಜರಾಗಲಿಲ್ಲ. ಅದಕ್ಕಾಗಿ ಬೇಷರತ್ ಕ್ಷಮೆಯಾಚಿಸುತ್ತೇನೆ. ಮುಂದೆ ಎಚ್ಚರಿಕೆಯಿಂದ ಇರುತ್ತೇನೆ. ಭವಿಷ್ಯದಲ್ಲಿ ಈ ವರ್ತನೆ ಪುನರಾವರ್ತನೆ ಮಾಡುವುದಿಲ್ಲ. ಕೋರ್ಟ್(Court) ಆದೇಶ ಪಾಲನೆ ಮಾಡಲಾಗುವುದು ಎಂದು ನ್ಯಾಯಪೀಠಕ್ಕೆ ಪ್ರಭಾಕರ್ ಮನವಿ ಮಾಡಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನ್ಯಾಯಾಲಯ ಸೂಚನೆ ನೀಡಿದ್ದರೂ ವಿಚಾರಣೆಗೆ ಗೈರಾಬಹುದೇ? ನಿಮ್ಮನ್ನು ಬಂಧಿಸಿ ಜೈಲಿಗೆ(Jail) ಕಳುಹಿಸಲು ಕಳೆದ ವಿಚಾರಣೆ ವೇಳೆಯೇ ಆದೇಶಿಸಬಹುದಾಗಿತ್ತು. ಆದರೆ, ನ್ಯಾಯಾಲಯ ಸ್ವಲ್ಪ ಉದಾರತೆ ತೋರಿಸಿದೆ. ವಿಚಾರಣೆಗೆ ಹಾಜರಾಗಲು ಸಾಧ್ಯವಾಗದೆ ಹೋದರೆ ವಿನಾಯ್ತಿ ಕೋರಲು ಸೂಕ್ತ ಪದ್ಧತಿ ಇರುತ್ತದೆ ಎಂದು ಚಾಟಿ ಬೀಸಿತು.
ನಿಮ್ಮ ಎಂಜಿನಿಯರುಗಳು ಸಮಸ್ಯೆಯನ್ನು ಸೃಷ್ಟಿ ಮಾಡುತ್ತಿದ್ದಾರೆ. ಹಾಗಾಗಿ, ಈ ಸಮಸ್ಯೆಯನ್ನು ಬಗೆಹರಿಸಲು ನಿಮ್ಮನ್ನು ಕೋರ್ಟ್‌ಗೆ ಕರೆಯಿಸಲಾಗಿದೆ. ಸಮಸ್ಯೆ ಬಗೆಹರಿಸಲು ಕೂಡಲೇ ಕ್ರಮ ಜರುಗಿಸಬೇಕಿದೆ ಎಂದು ತಿಳಿಸಿದ ನ್ಯಾಯಪೀಠ. ರಸ್ತೆ ಗುಂಡಿ ಸಮಸ್ಯೆ ಬಗೆಹರಿಸಲು ಯಾವ ಕ್ರಮ ಜರುಗಿಸಲಾಗಿದೆ? ಯಾವ ತಂತ್ರಜ್ಞಾನ ಅಳವಡಿಸಿಕೊಂಡಿದ್ದೀರಿ? ಎಂದು ಪ್ರಶ್ನಿಸಿತು.
ಬಿಬಿಎಂಪಿ ಪರ ವಕೀಲರು(Advocate) ಉತ್ತರಿಸಿ, ರಸ್ತೆ ಗುಂಡಿ ಮುಚ್ಚುವುದಕ್ಕೆ ಹಿಂದೆ ಗುತ್ತಿಗೆ ನೀಡಲಾಗಿದ್ದ ಸಂಸ್ಥೆಯನ್ನೇ ಮತ್ತೆ ನಿಯೋಜಿಸಲಾಗಿದೆ. ಆರು ತಿಂಗಳ ಕಾಲ ಗುತ್ತಿಗೆ ಅವಧಿ ವಿಸ್ತರಿಸಲಾಗಿದೆ. 182.38 ಕಿ.ಮೀ. ವ್ಯಾಪ್ತಿಯಲ್ಲಿನ ರಸ್ತೆ ಗುಂಡಿ ಮುಚ್ಚಲು ಕಾರ್ಯಾದೇಶ ನೀಡಲಾಗಿದೆ. ಫೆ.14ರಿಂದ ರಸ್ತೆ ಗುಂಡಿ ಮುಚ್ಚುವ ಕೆಲಸ ಆರಂಭಿಸಲಾಗಿದೆ. ಸ್ವಯಂಚಾಲಿತವಾಗಿ ಗುಂಡಿ ಮುಚ್ಚುವ ಯಂತ್ರಗಳ ಖರೀದಿಗೆ ಸಂಬಂಧಿಸಿದಂತೆ ಅಲ್ಪಾವಧಿಯ ಟೆಂಡರ್ ಕರೆಯಲಾಗಿದೆ. ಮಾ.3ರೊಳಗೆ ಟೆಂಡರ್ ಅಂತಿಮಗೊಳಿಸಲಾಗುವುದು. ರಸ್ತೆ ಗುಂಡಿ ಭರ್ತಿ ಕಾರ್ಯ ಆರಂಭಿಸಲಾಗಿದ್ದು, ಪೂರ್ಣಗೊಳಿಸಲು ಸ್ವಲ್ಪ ಕಾಲಾವಕಾಶಬೇಕಿದೆ ಎಂದು ತಿಳಿಸಿದರು.
Pothole free Bengaluru Roads: ಶೀಘ್ರ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಿ: ಬಿಬಿಎಂಪಿಗೆ ಹೈಕೋರ್ಟ್ ಚಾಟಿ!
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸದ್ಯ ರಸ್ತೆ ಗುಂಡಿ ಮುಚ್ಚಲು ನೀವು ಅನುಸರಿಸುತ್ತಿರುವ ತಂತ್ರಜ್ಞಾನವು ಸೂಕ್ತವಾಗಿಲ್ಲ. ಗುಂಡಿ ಮುಚ್ಚಿದ ನಂತರ ಮಳೆ(Rain) ಬಂದ ಕೂಡಲೇ ಮತ್ತೆ ರಸ್ತೆ ಗುಂಡಿ ಏರ್ಪಡುತ್ತದೆ. ಈ ವಿಚಾರದಲ್ಲಿ ಅಧೀನ ಸಿಬ್ಬಂದಿ ಮಾತು ಕೇಳದೆ ನಿಮ್ಮ ವಿವೇಚನೆಯನ್ನು ಬಳಸಿ ಸಮಸ್ಯೆ ಪರಿಹರಿಸಿ. ರಸ್ತೆ ಗುಂಡಿ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಅಸಮರ್ಥವಾಗಿದ್ದರೆ ಹೇಳಿ, ಈ ಕಾರ್ಯವನ್ನು ಸೇನೆಗೆ ನಿಯೋಜಿಸಲಾಗುವುದು. ಸಮರ್ಪಕವಾಗಿ ರಸ್ತೆಗಳು ರಿಪೇರಿಯಾಗಬೇಕು. ರಿಪೇರಿ ಕಾರ್ಯ ತುಂಬಾ ಅವಧಿಗೆ ಬಾಳಿಕೆ ಬರಬೇಕು. ಅದಷ್ಟೇ ನಮ್ಮ ಕಾಳಜಿಯಾಗಿದೆ ಎಂದು ಪ್ರಭಾಕರ್ ಅವರಿಗೆ ಮೌಖಿಕವಾಗಿ ಸೂಚಿಸಿತು
ಕ್ರಿಯಾ ಯೋಜನೆ ಸಲ್ಲಿಸಲು ಸೂಚನೆ
ಅಂತಿಮವಾಗಿ ರಸ್ತೆ ರಿಪೇರಿಗೆ ಏಜೆನ್ಸಿಯು ಹಾಟ್ ಮಿಕ್ಸ್ ಆನ್‌ವ್ಹೀಲ್ಸ್ ತಂತ್ರಜ್ಞಾನ ಬಳಸುತ್ತದೆ ಎಂದು ಬಿಬಿಎಂಪಿ ತಿಳಿಸಿದೆ. ರಸ್ತೆ ರಿಪೇರಿ ಮತ್ತು ಅದಕ್ಕೆ ಸೂಕ್ತ ತಂತ್ರಜ್ಞಾನ ಬಳಕೆ ಮಾಡುವುದರಿಂದ ಸಾವುಗಳನ್ನು ತಪ್ಪಿಸಬಹುದು ಎಂಬುದು ಅರ್ಜಿದಾರರ ಪರ ವಕೀಲರ ಕಳಕಳಿಯಾಗಿದೆ. ಹಾಗಾಗಿ, ಮುಂದಿನ ವಿಚಾರಣೆ ವೇಳೆಗೆ ಕ್ರಿಯಾ ಯೋಜನೆ ಮತ್ತು ಅಲ್ಪಾವಧಿ ಟೆಂಡರ್‌ಗೆ ಸಂಬಂಧಿಸಿದ ಬೆಳವಣಿಗೆ ಬಗ್ಗೆ ತಿಳಿಸುವಂತೆ ಬಿಬಿಎಂಪಿಗೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಮಾ.5ಕ್ಕೆ ಮುಂದೂಡಿತು. ಅಂದು ಸಹ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಪ್ರಭಾಕರ್ ಅವರಿಗೆ ಸೂಚಿಸಿತು.