Pothole free Bengaluru Roads: ಶೀಘ್ರ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಿ: ಬಿಬಿಎಂಪಿಗೆ ಹೈಕೋರ್ಟ್ ಚಾಟಿ!
*ಬೆಂಗಳೂರಿನ ರಸ್ತೆಗಳ ಅವ್ಯವಸ್ಥೆ ಬಗ್ಗೆ ಸಿಜೆ ತೀವ್ರ ಅಸಮಾಧಾನ
*ಬಿಬಿಎಂಪಿ ದುರಸ್ತಿ ಮಾಡುತ್ತಿಲ್ಲ: ಸಾರ್ವಜನಿಕ ಹಿತಾಸಕ್ತಿ ಅರ್ಜಿ
*ಸರ್ಕಾರ ಹಾಗೂ ಬಿಬಿಎಂಪಿ ಕಾಯೋನ್ಮುಖವಾಗಬೇಕು: ಹೈಕೋರ್ಟ್
ಬೆಂಗಳೂರು (ಜ. 6): ಗುಂಡಿಗಳನ್ನು (Potholes) ಮುಚ್ಚಿ ರಸ್ತೆಗಳನ್ನು ಉತ್ತಮ ಸ್ಥಿತಿಗೆ ತರುವ ದಿಸೆಯಲ್ಲಿ ಸರ್ಕಾರ ಹಾಗೂ ಬಿಬಿಎಂಪಿ (BBMP) ಕಾಯೋನ್ಮುಖವಾಗಬೇಕು ಎಂದು ಹೈಕೋರ್ಟ್ (High Court) ನಿರ್ದೇಶಿಸಿದೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿನ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದರೂ ಬಿಬಿಎಂಪಿ ದುರಸ್ತಿ ಮಾಡುತ್ತಿಲ್ಲ ಎಂದು ಆರೋಪಿಸಿ ಎಲ್.ಅಶ್ವಥ್ ನಾರಾಯಣ ಚೌಧರಿ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಬೆಂಗಳೂರಿನ ರಸ್ತೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆಗಳು ದುಸ್ಥಿತಿಯಲ್ಲಿವೆ. ಅವುಗಳ ದುರಸ್ತಿಗಾಗಿ ಬಿಬಿಎಂಪಿಗೆ ಕನಿಷ್ಠ 105 ಕೋಟಿ ರು. ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಈ ಹಿಂದೆ ನಿರ್ದೇಶಿಸಿತ್ತು ಎಂದು ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ಬೆಂಗಳೂರಿನ ರಸ್ತೆಗಳು ತುಂಬಾ ಕೆಟ್ಟಸ್ಥಿತಿಯಲ್ಲಿವೆ. ಯಾವ ರಸ್ತೆ ನೋಡಿದರೂ ಗುಂಡಿಗಳೇ ಇವೆ. ಕೂಡಲೇ ಗುಂಡಿ ಮುಚ್ಚಿ ರಸ್ತೆಯನ್ನು ಉತ್ತಮ ಸ್ಥಿತಿಗೆ ತರಬೇಕು ಎಂದು ನಿರ್ದೇಶಿಸಿದರು.
ಇದನ್ನೂ ಓದಿ: Highway Construction ಪ್ರತಿ ದಿನ 40 ಕಿ.ಮೀ ಹೆದ್ದಾರಿ ನಿರ್ಮಾಣ, ದಾಖಲೆ ಬರೆದ ನಿತಿನ್ ಗಡ್ಕರಿ!
ಬಿಬಿಎಂಪಿ ಪರ ವಕೀಲರು, ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಬಿಬಿಎಂಪಿ ಸಮರೋಪಾದಿಯಲ್ಲಿ ನಡೆಸುತ್ತಿದೆ. ಇದೇ ವೇಳೆ ಸ್ಮಾರ್ಟ್ ಸಿಟಿ ಯೋಜನೆಯಡಿ (Smart City Plan) ನಗರದಾದ್ಯಂತ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಹಾಗೂ ಪಾಲಿಕೆಗೆ ನೂತನವಾಗಿ ಸೇರ್ಪಡೆಗೊಂಡ 110 ಗ್ರಾಮಗಳ 158 ಕಿ.ಮೀ. ರಸ್ತೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ದಾಸರಹಳ್ಳಿ ವಲಯದಲ್ಲಿ 18 ಕಿ.ಮೀ. ರಸ್ತೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಆ ಕುರಿತು 24 ಗಂಟೆಯಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.ಇದನ್ನು ಪರಿಗಣಿಸಿದ ನ್ಯಾಯಪೀಠ, ವರದಿ ಸಲ್ಲಿಸಲು ಬಿಬಿಎಂಪಿಗೆ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು.
ಶೀಘ್ರ ಶಿರಸಿ-ಕುಮಟಾ ನಡುವೆ ರಸ್ತೆ ನಿರ್ಮಾಣ
ಶಿರಸಿ - ಕುಮಟಾ (Sirsi - Kumta) ರಸ್ತೆ ನಿರ್ಮಾಣಕ್ಕೆ ಈಗಾಗಲೇ ಎಲ್ಲ ತೊಡಕುಗಳ ನಿವಾರಣೆಯಾಗಿದೆ. ಹೀಗಾಗಿ, ತ್ವರಿತ ಕಾಮಗಾರಿ ನಡೆಸಲು ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ (Mullai mugilan) ಹೇಳಿದರು. ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು. ಶಿರಸಿ - ಕುಮಟಾ ರಸ್ತೆಗೆ (Road) ಈ ಹಿಂದೆ ಪರಿಸರ ವಿಚಾರದಲ್ಲಿ ತಡೆಯಾಜ್ಞೆ ಇತ್ತು. ಅದು ಈಗ ತೆರವುಗೊಂಡಿದೆ. ಹೀಗಾಗಿ ಕಾಮಗಾರಿ ಕೈಗೊಳ್ಳಲು ತೊಡಕು ಇಲ್ಲ. ಅದೇ ರೀತಿ ಹುತ್ಗಾರ ಬಳಿ ಕೋಳಿ ಫಾರಂ ನೀರು ಸುತ್ತಲಿನ ಪರಿಸರ ಕಲುಷಿತಗೊಳಿಸುತ್ತಿರುವ ಬಗ್ಗೆ ಸಹ ಆಪಾದನೆಗಳು ಕೇಳಿ ಬಂದಿವೆ. ತ್ಯಾಜ್ಯ ವಿಲೇವಾರಿ ನಿಯಮ ಪಾಲಿಸದೆ ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದ್ದರೆ ತಕ್ಷಣ ಕ್ರಮಕೈಗೊಳ್ಳುತ್ತೇವೆ. ವಿದ್ಯುತ್ (electricity) ಪರವಾನಗಿ ರದ್ದುಪಡಿಸಲೂ ಅವಕಾಶವಿದೆ ಎಂದರು.
ಇದನ್ನೂ ಓದಿ: Karnataka Highway : ಚಿಕ್ಕಮಗಳೂರು-ಬೇಲೂರು ನಡುವೆ ಚತುಷ್ಫಥ ರಸ್ತೆ
ಶಿರಸಿ (Sirsi) ನಗರದ ನೀರನ್ನು ವಿದ್ಯಾನಗರ, ಮರಾಠಿಕೊಪ್ಪ ಮೂಲಕ ಪುಟ್ಟನ ಮನೆ ಸೇರಿದಂತೆ ಹಳ್ಳಿ ಭಾಗಕ್ಕೆ ಹರಿಸುವ ಯೋಜನೆಯ ವಿರುದ್ಧ ಸ್ಥಳೀಯರು ದೂರಿದರು. ವಿದ್ಯಾನಗರದಲ್ಲಿ ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿ ಪರ್ಯಾಯ ಕ್ರಮದ ಭರವಸೆ ನೀಡಿದರು. ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್, ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ಪೌರಾಯುಕ್ತ ಕೇಶವ ಚೌಗುಲೆ, ಪಿಡಿಬ್ಲ್ಯೂಡಿ ಎಇಇ ಉಮೇಶ ನಾಯ್ಕ ಇದ್ದರು.