ಇನ್ನೂ 23 ಸಿಡಿಗಳಿಗೆ ಎಂದು ಬಿಜೆಪಿ ಮುಖಂಡರೋರ್ವರು ಹೇಳಿಕೆ ನೀಡಿದ್ದು, ಇಂತಹ ಹೇಳಿಕೆಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು. 

ಹಾಸನ (ಮಾ.12): ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸೀಡಿ ವಿಚಾರಕ್ಕೆ ಸಂಬಂಧಪಟ್ಟಂತೆ ನಡೆಸುತ್ತಿರುವ ಎಸ್‌ಐಟಿ ತನಿಖೆ ಅವರವರ ರಕ್ಷಣೆಗೆ ಮಾಡಿಕೊಳ್ಳುವ ತನಿಖೆಗಳಾಗಿದ್ದು, ಈ ತನಿಖೆಗಳ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ತಮ್ಮ ಹುಟ್ಟೂರು ಹರದನಹಳ್ಳಿಯಲ್ಲಿರುವ ಈಶ್ವರ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ 23 ಸೀಡಿಗಳಿವೆ ಎನ್ನುವ ಯತ್ನಾಳ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಂತಹ ವಿಚಾರಗಳ ಬಗ್ಗೆ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಬೇಕು. ಸೀಡಿ ಹಗರಣಕ್ಕೆ ಹೆದರಿ ಸಚಿವರೇ ಕಾನೂನು ಮೊರೆ ಹೋಗಿದ್ದಾರೆ. ಜನರಿಗೆ ರಕ್ಷಣೆ ಕೊಡಬೇಕಾದ ಸಚಿವರೇ ಕಾನೂನು ಮೊರೆ ಹೋದರೆ ಜನರ ಪಾಡೇನು? ಜನರು ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅವರೇ ಉತ್ತರ ನೀಡುತ್ತಾರೆ ಎಂದರು.

ರಾಸಲೀಲೆ ಸಿಡಿ ಪ್ರಕರಣ: ಇದು ತಿಪ್ಪೇಸಾರಿಸೋ ತನಿಖೆ, ಎಚ್‌ಡಿಕೆ

135 ಸೀಟೋ 35 ಸೀಟೋ: ಮುಂದಿನ ಚುನಾವಣೆಯಲ್ಲಿ 135 ಸೀಟು ಪಡೆಯುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ನೋಡೋಣ 135 ಸೀಟು ತೆಗೆದುಕೊಳ್ಳುತ್ತಾರೋ 35 ಸೀಟು ತೆಗೆದುಕೊಳ್ಳುತ್ತಾರೋ ಎನ್ನುವುದನ್ನು ಜನರು ನಿರ್ಧರಿಸುತ್ತಾರೆ. ಯಡಿಯೂರಪ್ಪ ಈ ಹಿಂದೆಯೂ ಹೀಗೆ ಹೇಳಿದ್ದರು. ಆದರೆ ನಂತರದಲ್ಲಿ ಏನಾಯಿತೆಂದು ಗೊತ್ತಾಗಲಿಲ್ಲವೆ ಎಂದರು.

ಇನ್ನು ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಇಂತಹ ಬಜೆಟ್‌ ಮಂಡನೆಯಿಂದ ಬಜೆಟ್‌ನ ಬಗ್ಗೆ ಜನರಿಗೆ ಅಸಹ್ಯ ಹುಟ್ಟುತ್ತದೆ ಎಂದು ಟೀಕಿಸಿದರು.