ಬೆಂಗಳೂರು : ನಮ್ಮ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಹೋಟೆಲ್‌ ಸೇರಿದಂತೆ ಇತರೆ ವಾಣಿಜ್ಯ ಮಳಿಗೆಗಳಿಗೆ ಹೆಚ್ಚು ಆದ್ಯತೆ ನೀಡದೆ, ಮೆಟ್ರೋ ಪ್ರಯಾಣಿಕರ ವಾಹನಗಳಿಗೆ ಸುವ್ಯವಸ್ಥಿತ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿ) ಮುಂದಾಗಿದೆ.

ಅತ್ಯಂತ ಹೆಚ್ಚು ಪ್ರಯಾಣಿಕ ದಟ್ಟಣೆ ಇರುವ ಇಂದಿರಾನಗರ ಮೆಟ್ರೋ ನಿಲ್ದಾಣದ ಸಮೀಪದಲ್ಲಿ ನಿಗಮಕ್ಕೆ ಸೇರಿದ, ಬಳಕೆಯಾಗದ ಸುಮಾರು 20 ಸಾವಿರ ಚದರ ಅಡಿ ಜಾಗದಲ್ಲಿ ಬಹುಮಹಡಿಯ ದ್ವಿಚಕ್ರವಾಹನ ನಿಲುಗಡೆಯ ನಿಲ್ದಾಣ ನಿರ್ಮಿಸಲು ಬಿಎಂಆರ್‌ಸಿಎಲ್‌ ಚಿಂತನೆ ನಡೆಸಿದೆ. ಜತೆಗೆ ಯಶವಂತಪುರ ಮೆಟ್ರೋ ನಿಲ್ದಾಣದಲ್ಲಿ ಉಪಹಾರ ಗೃಹಕ್ಕೆ ನೀಡಲಾಗಿರುವ ಪರವಾನಗಿಯನ್ನು ನವೀಕರಿಸದೇ ಆ ಜಾಗವನ್ನು ಕೂಡ ವಾಹನ ನಿಲ್ದಾಣವಾಗಿ ಪರಿವರ್ತಿಸಲು ಚಿಂತನೆ ನಡೆಸಲಾಗಿದೆ.

ಮೆಟ್ರೋ ನಿಲ್ದಾಣಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಸಾಧ್ಯವಾದಷ್ಟುಮಟ್ಟಿಗೆ ಕಡಿಮೆ ಮಾಡಿ ಮೆಟ್ರೋ ರೈಲು ಪ್ರಯಾಣಿಕರ ಪ್ರಮುಖ ಬೇಡಿಕೆಯಾದ ವಾಹನ ನಿಲುಗಡೆ ವ್ಯವಸ್ಥೆಗೆ ಹೆಚ್ಚು ಆದ್ಯತೆ ನೀಡಲಾಗುವುದು ಹಾಗಾಗಿ ಹೆಚ್ಚು ಪ್ರಯಾಣಿಕರ ದಟ್ಟಣೆ ಇರುವ ಇಂದಿರಾನಗರ ಮೆಟ್ರೋ ನಿಲ್ದಾಣ ಸಮೀಪ ಬಹುಮಹಡಿಯ ಪಾರ್ಕಿಂಗ್‌ ವ್ಯವಸ್ಥೆ ಮಾಡಲು ಯೋಜನೆ ರೂಪಿಸುತ್ತಿದೆ ಎಂದು ನಿಗಮದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವ್ಯವಸ್ಥಿತ ನಿಲ್ದಾಣ ಅಗತ್ಯ

ಪ್ರಸ್ತುತ 19 ಮೆಟ್ರೋ ನಿಲ್ದಾಣಗಳಲ್ಲಿ ಸುಮಾರು 12 ಸಾವಿರ ದ್ವಿಚಕ್ರ ವಾಹನ, 2,300 ಕಾರುಗಳು ಪ್ರತಿದಿನ ನಿಲುಗಡೆ ಮಾಡಲಾಗುತ್ತಿದೆ. ಎಂ.ಜಿ.ರಸ್ತೆ, ಟ್ರಿನಿಟಿ ಮೆಟ್ರೋ ನಿಲ್ದಾಣಗಳು ಸೇರಿದಂತೆ ಉಳಿದ 22 ಮೆಟ್ರೋ ನಿಲ್ದಾಣಗಳಲ್ಲಿ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಸಮಸ್ಯೆಯಾಗಿದೆ. ಆದ್ದರಿಂದ ಮೆಟ್ರೋ ಪ್ರಯಾಣಿಕರು ನಿಲ್ದಾಣದ ಸುತ್ತಮುತ್ತ ಎಲ್ಲೆಂದರಲ್ಲಿ ತಮ್ಮ ವಾಹನಗಳನ್ನು ಪಾರ್ಕಿಂಗ್‌ ಮಾಡುತ್ತಿದ್ದಾರೆ. ಇದರಿಂದ ಬಡಾವಣೆಯ ನಿವಾಸಿಗಳಿಗೂ ತೊಂದರೆಯಾಗುತ್ತಿದೆ. ಈ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ನಿಗಮ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಬೇಕಿದೆ.

ಕೆಲವು ಮೆಟ್ರೋ ನಿಲ್ದಾಣಗಳಲ್ಲಿ ನಿಲ್ಲಿಸಿದ ವಾಹನಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ಅಲ್ಲದೇ ಕಡಿಮೆ ಪಾರ್ಕಿಂಗ್‌ ಶುಲ್ಕ ಪಡೆದರೆ ಪ್ರಯಾಣಿಕರಿಗೂ ಅನುಕೂಲವಾಗಲಿದೆ. ಎಂ.ಜಿ.ರಸ್ತೆ, ಟ್ರಿನಿಟಿ, ಜಯನಗರ, ಲಾಲ್‌ಬಾಗ್‌, ನ್ಯಾಷನಲ್‌ ಕಾಲೇಜ್‌ ಮೆಟ್ರೋ ನಿಲ್ದಾಣಗಳ ಸಮೀಪ ಬಹುಮಹಡಿ ವಾಹನ ನಿಲುಗಡೆ ವ್ಯವಸ್ಥೆಯನ್ನು ಬಿಎಂಆರ್‌ಸಿಎಲ್‌ ಮಾಡಲಿ ಎಂಬುದು ಮೆಟ್ರೋ ಪ್ರಯಾಣಿಕರಾದ ಶೈಲಜಾ ನಾಗಭೂಷಣ್‌ ಅವರ ಮನವಿ.

ಸಂಪರ್ಕ ಸಾರಿಗೆ ಕೊರತೆ

ಮೆಟ್ರೋ ರೈಲು ನಿಲ್ದಾಣಗಳಲ್ಲಿ ಸರಿಯಾದ ವಾಹನ ನಿಲುಗಡೆ ವ್ಯವಸ್ಥೆ ಇಲ್ಲದ ಕಾರಣ ಅನೇಕ ಪ್ರಯಾಣಿಕರು ಬಿಎಂಟಿಸಿ ಬಸ್‌, ಆಟೋ, ಖಾಸಗಿ ಟ್ಯಾಕ್ಸಿ ಮತ್ತು ದ್ವಿಚಕ್ರ ವಾಹನಗಳನ್ನು ಬಳಸಿಕೊಂಡು ಮೆಟ್ರೋ ನಿಲ್ದಾಣಗಳಿಗೆ ಬರುವಂತಾಗಿದೆ. ಮೆಟ್ರೋ ರೈಲಿನ ಮೊದಲ ಮತ್ತು ಕೊನೆ ರೈಲಿನ ಪ್ರಯಾಣಿಕರಿಗೆ ಸರಿಯಾದ ಬಸ್‌, ಆಟೋ ರಿಕ್ಷಾ ಹಾಗೂ ಇತರ ವಾಹನಗಳ ಸಂಪರ್ಕವಿಲ್ಲದೆ ಅಂದರೆ ಲಾಸ್ಟ್‌ ಮೈಲ್‌ ಕನೆಕ್ಟಿವಿಟಿ ಇಲ್ಲದೆ ಮೆಟ್ರೋ ಪ್ರಯಾಣಿಕರು ಅದರಲ್ಲೂ ಮಹಿಳೆಯರು, ವೃದ್ಧರು ತೊಂದರೆ ಅನುಭವಿಸುವಂತಾಗಿದೆ. ಬಿಎಂಆರ್‌ಸಿಎಲ್‌ ಬಿಎಂಟಿಸಿಯೊಂದಿಗೆ ಚರ್ಚಿಸಿ ಮೊದಲ ಮತ್ತು ಕೊನೆಯ ಮೆಟ್ರೋ ರೈಲು ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಿಗದಿತ ಅವಧಿಯಲ್ಲಿ ಬಸ್‌ ಸಂಚಾರ ವ್ಯವಸ್ಥೆ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಮೆಟ್ರೋ ಅಧಿಕಾರಿಗಳು ಬಿಎಂಟಿಸಿ ಬಸ್‌ ಮತ್ತು ಆನ್‌ಲೈನ್‌ ಪ್ರೀಪೇಯ್ಡ್‌ ಆಟೋಗಳ ಸಂಸ್ಥೆಗಳ ನೆರವು ಪಡೆಯಬೇಕು ಎನ್ನುತ್ತಾರೆ ಮೆಟ್ರೋ ಪ್ರಯಾಣಿಕರಾದ ಖಾಸಗಿ ಕಂಪನಿ ಉದ್ಯೋಗಿ ಟಿ.ಡಿ.ಸುದರ್ಶನ್‌ ದೇಸಾಯಿ.

ವರದಿ: ಸಂಪತ್‌ ತರೀಕೆರೆ