Mekedatu Padayatra: ಪಾದಯಾತ್ರೆ ನಿರ್ಬಂಧಕ್ಕೆ ಸರ್ಕಾರದ ಅಧಿಕೃತ ಆದೇಶ, ರಾಮನಗರದಲ್ಲಿ ಬಂದೋಬಸ್ತ್!
* ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ
* ಪಾದಯಾತ್ರೆ ನಿಲ್ಲಿಸಲು ಸರ್ಕಾರದ ಆದೇಶ
* ಕೊರೋನಾ ನಡುವೆ ಮೂರು ದಿನಗಳಿಂದ ನಡೆಯುತ್ತಿರುವ ಪಾದಯಾತ್ರೆ
ಬೆಂಗಳೂರು (ಜ. 12) ಮೇಕೆದಾಟು (Mekedatu) ಯೋಜನೆಗೆ ಆಗ್ರಹಿಸಿ ಕೊರೋನಾ (Coronavirus) ನಿಯಮಗಳ ನಡುವೆಯೇ ಕಾಂಗ್ರೆಸ್ (Congress) ಹಮ್ಮಿಕೊಂಡಿದ್ದ ಪಾದಯಾತ್ರೆಗೆ ರಾಜ್ಯ ಸರ್ಕಾರ ಕೊನೆಗೂ ಬ್ರೇಕ್ ಹಾಕಿದೆ. ಅಧಿಕೃತವಾಗಿ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಕಾರ್ಯದರ್ಶಿ ಸಿ.ಎಸ್ ರವಿಕುಮಾರ್ ಅವರು ಬುಧವಾರ ಸಂಜೆ ಆದೇಶ ಹೊರಡಿಸಿದ್ದಾರೆ. ಈ ಕೂಡಲೇ ಪಾದಯಾತ್ರೆಯನ್ನು ನಿಲ್ಲಿಸುವಂತೆ ಕಾಂಗ್ರೆಸ್ ನಾಯಕರಿಗೆ ಸೂಚಿಸಲಾಗಿದೆ. ಪಾದಯಾತ್ರೆ ಕೈಗೊಳ್ಳುವುದು, ಉದ್ದೇಶಿತ ಮಾರ್ಗದಲ್ಲಿ ವಾಹನ ಸಂಚಾರ, ಜನ ಸಂಚಾರವನ್ನು ನಿಷೇಧಿಸಲಾಗಿದೆ. ಇನ್ನು ಸರ್ಕಾರದ ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿಲಾಗಿದೆ.
ಹೈಕೋರ್ಟ್ ಛೀಮಾರಿ ಹಾಕಿತ್ತು: ಕೊರೋನಾ ಆತಂಕದ ಮಧ್ಯೆ ಮೇಕೆದಾಟು ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್ ನಡೆಗೆ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ತೀವ್ರ ಅಸಮಾಧಾನ ಹೊರ ಹಾಕಿತ್ತು. ಸರ್ಕಾರದ ಮಾರ್ಗಸೂಚಿ ಪಾಲಿಸಲು ಕೆಪಿಸಿಸಿ ಏನು ಕ್ರಮ ಕೈಗೊಂಡಿದೆ ಎಂದೂ ಕಾಂಗ್ರೆಸ್ ಪಕ್ಷವನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಮತ್ತು ನ್ಯಾ. ಸೂರಜ್ ಗೋವಿಂದರಾಜ್ ನೇತೃತ್ವದ ಪೀಠ ಪ್ರಶ್ನಿಸಿತ್ತು. ಅಲ್ಲದೇ ಈ ಬಗ್ಗೆ ವರದಿ ನೀಡುವಂತೆ ತಿಳಿಸಿ ವಿಚಾರಣೆ ಜ.14ಕ್ಕೆ ಮುಂದೂಡಿತ್ತು.
ಕೆಪಿಸಿಸಿ ಲೀಗಲ್ ಸೆಲ್ ಅಧ್ಯಕ್ಷಗೆ ಬುಲಾವ್ ಹೋಗಿತ್ತು. ಲೀಗಲ್ ಸೆಲ್ ಅಧ್ಯಕ್ಷ ವಕೀಲ ಎ.ಎಸ್ ಪೊನ್ನಣ್ಣಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಿಂದ ಕರೆ ಹೋಗಿದ್ದು ರಾಮನಗರಕ್ಕೆ ಕರೆಸಿಕೊಂಡು ಮಾತನಾಡಿದ್ದರು. ಹೈಕೋರ್ಟ್ನಿಂದ ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಕೋರ್ಟ್ ವರದಿ ಕೇಳಿತ್ತು.
ಸಿಎಂ ಆಗುವ ದೃಷ್ಟಿಯಿಂದಲೇ ಡಿಕೆಶಿ ಪಾದಯಾತ್ರೆ
ವರದಿ ನೀಡುವಂತೆ ಸರ್ಕಾರಕ್ಕೆ ಡೆಡ್‌ಲೈನ್: ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಬಗ್ಗೆ ಮಾಹಿತಿ ನೀಡಲು ಕೆಪಿಸಿಸಿಗೆ ಸೂಚಿನೆ ನೀಡಿತ್ತು. ಇದೇ ವೇಳೆ ಪಾದಯಾತ್ರೆ ಸಂದರ್ಭದಲ್ಲಿ ಕೊರೊನಾ ನಿಯಮ ಉಲ್ಲಂಘನೆಯಾಗಿರುವ ಕುರಿತು ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಒಂದು ದಿನದೊಳಗೆ ತಿಳಿಸಲು ರಾಜ್ಯ ಸರ್ಕಾರಕ್ಕೂ ಸೂಚಿಸಿತ್ತು.
ಮೇಕೆದಾಟು ಪಾದಯಾತ್ರೆ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ಮೆರವಣಿಗೆಗಳನ್ನು ವಿಶೇಷವಾಗಿ ಕಾಂಗ್ರೆಸ್ ನಡೆಸುವ ಪಾದಯಾತ್ರೆಯನ್ನು ಹೇಗೆ ಮತ್ತು ಏಕೆ ಮುಂದುವರಿಸಲು ಅನುಮತಿ ನೀಡಲಾಗುತ್ತಿದೆ ಮತ್ತು ಅಂತಹ ಯಾವುದೇ ಚಟುವಟಿಕೆಗಳಿಂದ ಕಾಂಗ್ರೆಸ್ ಅನ್ನು ತಡೆಯಲು ಏಕೆ ಸೂಕ್ತ ಕ್ರಮ ಕೈಗೊಂಡಿಲ್ಲ.. ಕಾರಣ ಏನು ? ಎಂಬುದನ್ನು ಕೇಳಿತ್ತು.
ಪಾದಯಾತ್ರೆ ಮುಂದುವರಿಸಲು ನಿರ್ಧಾರ: ಆದರೆ ಈ ಆದೇಶಕ್ಕೆ ತಲೆ ಕೆಡಿಸಿಕೊಳ್ಳದ ಕಾಂಗ್ರೆಸ್ ನಾಯಕರು ಗುರುವಾರ ಬೆಳಗ್ಗೆಯಿಂದ ಪಾದಯಾತ್ರೆ ಮುಂದುವರಿಸಲು ನಿರ್ಧರಿಸಿದೆ. ಎಲ್ಲರೂ ಒಂದಾಗಿ ಸೇರಲು ಡಿಕೆ ಶಿವಕುಮಾರ್ ಕಾಂಗ್ರೆಸ್ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಗುರುವಾರ ಏನಾಗಲಿದೆ ಎನ್ನುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸರ್ಕಾರ ಈ ಮೊದಲಿನಿಂದಲೂ ಹೇಳಿಕೊಂಡೆ ಬಂದಿದೆ. ನಾವು ಇಟ್ಟ ಹೆಜ್ಜೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ. ನಮ್ಮ ನೀರು ನಮ್ಮ ಹಕ್ಕು... ಹಿರಿಯ ನಾಯಕರು ಪಾದಯಾತ್ರೆ ಮುಂದುವರಿಯಲು ತಿಳಿಸಿದ್ದಾರೆ. ಬೇಕಾದರೆ ನಮ್ಮನ್ನು ಬಂಧನ ಮಾಡಲಿ ಎಂದು ಸಂಸದ ಡಿಕೆ ಸುರೇಶ್ ಸರ್ಕಾರದ ಆದೇಶಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕರನ್ನು ಬಂಧನ ಮಾಡಲಾಗುತ್ತದೆಯಾ? ಪಾದಯಾತ್ರೆ ಮುಂದುವರಿಯಲಿದೆಯಾ? ಎನ್ನುವ ಪ್ರಶ್ನೆಗಳು ಎದ್ದಿದ್ದು ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಒಟ್ಟಿನಲ್ಲಿ ಗುರುವಾರ ರಾಮನಗರ ರಣ ಕಣ ಆಗುವುದರಲ್ಲಿ ಅನುಮಾನ ಇಲ್ಲ.