Asianet Suvarna News Asianet Suvarna News

Coastal Cleanup Day; ಕಾರವಾರ ಕಡಲತೀರ ಸ್ವಚ್ಛಗೊಳಿಸಿದ ಗವರ್ನರ್ ಥಾವರಚಂದ್

ಸೆಪ್ಟೆಂಬರ್ ತಿಂಗಳ 3ನೇ ಶನಿವಾರವನ್ನು ಅಂತರರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಕಾರವಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಇದೇ ಮೊದಲ ಬಾರಿಗೆ ರಾಜ್ಯದ ರಾಜ್ಯಪಾಲ ಥಾವರಚಂದ್ ಗೆಲ್ಹೋಟ್ ಭಾಗವಹಿಸಿದ್ದರು.

Karnataka Governor Thawar Chand Gehlot joined Coastal Cleanup Day gow
Author
First Published Sep 17, 2022, 9:46 PM IST

 ಉತ್ತರ ಕನ್ನಡ (ಸೆ.17): ಪ್ರಮುಖ ಆಕರ್ಷಣಾ ಕೇಂದ್ರಗಳಾಗಿರುವ ಕಡಲ ತೀರಗಳಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳೋದು ಪ್ರಮುಖ ಸವಾಲು. ಈ ಕಾರಣದಿಂದ ಪ್ರತೀ ವರ್ಷ ಸೆಪ್ಟೆಂಬರ್ ತಿಂಗಳ 3ನೇ ಶನಿವಾರವನ್ನು ಅಂತರರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಕರಾವಳಿ ನಗರಿ ಕಾರವಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಇದೇ ಮೊದಲ ಬಾರಿಗೆ ರಾಜ್ಯದ ರಾಜ್ಯಪಾಲ ಥಾವರಚಂದ್ ಗೆಲ್ಹೋಟ್ ಆಗಮಿಸಿದ್ದು, ಸಮುದ್ರಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಲ್ಲದೇ, ಸ್ವಚ್ಛತೆಯ ಪ್ರಾಮುಖ್ಯತೆಯ ಸಂದೇಶ ನೀಡಿದ್ದಾರೆ.  ಅಂತರರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನದ ಅಂಗವಾಗಿ ಉತ್ತರಕನ್ನಡ ಜಿಲ್ಲೆಯ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿಂದು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಇದೇ ಮೊದಲಬಾರಿಗೆ ಕರ್ನಾಟಕದ ಘನವೆತ್ತ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಆಗಮಿಸಿದ್ದು, ಅವರನ್ನು ಜಿಲ್ಲಾ ಪೊಲೀಸ್ ಬ್ಯಾಂಡ್ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು. ಮೊದಲು ಕಡಲತೀರದಲ್ಲಿ ಸಮುದ್ರ ದೇವನಿಗೆ ವಿಶೇಷ ಪೂಜೆ ಸಲ್ಲಿಸಿದ್ದು, ವೈದಿಕರ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ ಸಮುದ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಸಂಖ್ಯೆಯಲ್ಲಿ ಕಡಲತೀರದಲ್ಲಿ ನಿಂತು ಸಮುದ್ರ ಪೂಜೆ ಸಲ್ಲಿಸಿದ ರಾಜ್ಯಪಾಲರು ತೀರದಲ್ಲಿ ಬಿದ್ದಿದ್ದ ಕಸವನ್ನು ಆರಿಸುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿದರು.

ಬಳಿಕ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಇಲಾಖೆಗಳ ಅಧಿಕಾರಿಗಳು ಹಾಗೂ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಕಡಲತೀರದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು. ಇದಾದ ಬಳಿಕ ಕಡಲ ತೀರದಲ್ಲಿರುವ ಮಯೂರವರ್ಮ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ನಮಸ್ಕಾರ, ತಮಗೆಲ್ಲರಿಗೂ ಹಾರ್ದಿಕವಾಗಿ ಸ್ವಾಗತಿಸುತ್ತೇನೆ ಎಂದು ಕನ್ನಡದಲ್ಲಿ ಮಾತು ಆರಂಭಿಸುವ ಮೂಲಕ ನೆರೆದಿದ್ದವರನ್ನು ಅಚ್ಚರಿಗೊಳಿಸಿದರು. 

ಸಮುದ್ರಕ್ಕೆ ಸೇರುವ ತ್ಯಾಜ್ಯದಿಂದ ಸಮುದ್ರ ಜೀವಿಗಳು, ಪಕ್ಷಿಗಳಿಗೆ ತೊಂದರೆಯಾಗುತ್ತಿದೆ. ಸಮುದ್ರವನ್ನು ಸ್ವಚ್ಛವಾಗಿರಿಸಲು ನಮ್ಮ ಮನೆಯ ತ್ಯಾಜ್ಯವನ್ನು ನೀರಿಗೆ ಸೇರಿಸುವುದನ್ನು ನಿಲ್ಲಿಸಬೇಕು. ಸ್ವಚ್ಛತಾ ಅಭಿಯಾನದ ಬಳಿಕ ದೇಶದಲ್ಲಿ ಅನಾರೋಗ್ಯ ಸಮಸ್ಯೆ ಕಡಿಮೆಯಾಗಿದೆ. ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವೂ ಹೆಚ್ಚುತ್ತಿದೆ. ನಾವು ಸ್ವಚ್ಛ ಭಾರತ ಮಾಡುವಲ್ಲಿ ಸಂಕಲ್ಪ ಕೈಗೊಳ್ಳಬೇಕಿದೆ ಎಂದರು.

 ಅಂದಹಾಗೆ, ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ಮೂರನೇ ಶನಿವಾರವನ್ನು ಅಂತರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಬಾರಿ 75ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ದೇಶದಾದ್ಯಂತ 75 ದಿನಗಳ ಕಾಲ, 75 ಕಡಲತೀರಗಳ 7,500ಕಿ.ಮೀ. ದೂರವನ್ನು ಸ್ವಚ್ಛಗೊಳಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಸಮುದ್ರವನ್ನು ಅವಲಂಭಿಸಿ ಲಕ್ಷಾಂತರ ಕುಟುಂಬಗಳು ಜೀವನ ಸಾಗಿಸುತ್ತಿದ್ದು, ಕಡಲಿಗೆ ಪ್ಲಾಸ್ಟಿಕ್‌ನಂತಹ ತ್ಯಾಜ್ಯಗಳು ಸೇರುತ್ತಿರೋದು ಜಲಚರಗಳ ಮೇಲೆ ಪರಿಣಾಮ ಬೀರುತ್ತಿರುವುದರ ಜತೆಗೆ ಜನರ ಜೀವನದ ಮೇಲೂ ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ಕಡಲತೀರಗಳ ಸ್ವಚ್ಛತೆ ಕುರಿತು ಜನರು ಎಚ್ಚೆತ್ತು ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸುವಂತೆ ರಾಜ್ಯಪಾಲರು ಮನವಿ ಮಾಡಿದ್ದಾರೆ. 

ಸ್ವಚ್ಚತೆಗಾಗಿ ಮೋದಿಗೆ ನಟ ಅನಿರುದ್ಧ ಪತ್ರ, ಶೌಚಾಲಯಕ್ಕಾಗಿ ವಿದ್ಯಾರ್ಥಿನಿ ಪತ್ರ!

ಇನ್ನು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ರಾಜ್ಯಪಾಲರು ಆಗಮಿಸಿ ಕಾರವಾರದಲ್ಲಿ ಕಡಲತೀರ ಸ್ವಚ್ಛತಾ ಅಭಿಯಾನಕ್ಕೆ ಆಗಮಿಸಿ ಚಾಲನೆ ನೀಡಿರುವುದು ಜಿಲ್ಲೆಯ ಮಟ್ಟಿಗೆ ಐತಿಹಾಸಿಕ ಕ್ಷಣ. ಜನರು ಈ ನಿಟ್ಟಿನಲ್ಲಿ ಸ್ವಚ್ಛ, ಸುರಕ್ಷಿತ ಸಾಗರವನ್ನು ನಿರ್ಮಾಣ ಮಾಡುತ್ತೇವೆ ಎನ್ನುವ ಪ್ರತಿಜ್ಞೆ ಮಾಡಬೇಕಿದೆ ಎಂದರು.

BIG 3 ವರದಿಯ ಬೆನ್ನಲ್ಲೇ ಡಿಸಿ ಸೂಚನೆ, ಬೀಚ್‌ ಸುತ್ತಮುತ್ತ ಸ್ವಚ್ಛತೆ ಕೆಲಸ ಶುರು

ಕಾರ್ಯಕ್ರಮದ ಅಂಗವಾಗಿ ಸ್ವಚ್ಚತಾ ಕಾರ್ಯದಲ್ಲಿ ಹೆಚ್ಚು ತ್ಯಾಜ್ಯ ಸಂಗ್ರಹಿಸಿದ ತಂಡಕ್ಕೆ ಈ ವೇಳೆ ಬಹುಮಾನ ವಿತರಿಸಲಾಯಿತು. ಜತೆಗೆ ಕಳೆದ 7 ವರ್ಷಗಳಿಂದ ಕಾರವಾರದಲ್ಲಿ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಮನೆಮಾತಾಗಿರುವ ಪಹರೆ ವೇದಿಕೆಗೆ ಪ್ರಶಂಸನಾ ಪತ್ರವನ್ನು ರಾಜ್ಯಪಾಲರು ವಿತರಿಸಿದರು. ಒಟ್ಟಿನಲ್ಲಿ ಅಂತರರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನವನ್ನು ಕಾರವಾರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗಿದ್ದು, ಸಾರ್ವಜನಿರು ಕೂಡಾ‌ ಸ್ವಚ್ಛತಾ ಅಭಿಯಾನಕ್ಕೆ ಕೈ ಜೋಡಿಸುವ ಮೂಲಕ ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ.
 

Follow Us:
Download App:
  • android
  • ios