ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಪೂಜಾರಿ ಆಕಾಶ್, ದೇವಿಯ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕದ್ದು, ಕರಗಿಸಿ ಮಾರಾಟ ಮಾಡಿದ್ದಾನೆ. ಈ ವಂಚನೆ ಬೆಳಕಿಗೆ ಬಂದ ನಂತರ, ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದ ದೇವಸ್ಥಾನ ಟ್ರಸ್ಟ್, ಕಳುವಾದ ಸಂಪೂರ್ಣ ಚಿನ್ನವನ್ನು ವಾಪಸ್ ನೀಡುವಂತೆ ಆರೋಪಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಸದ್ಯ ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿಲ್ಲ.

ದಾವಣಗೆರೆ (ಜು.27): ದಾವಣಗೆರೆ ನಗರದ ಗ್ರಾಮ ದೇವತೆ, ಭಕ್ತರ ಆರಾಧ್ಯ ದೈವ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಮಹಾ ವಂಚನೆಯೊಂದು ಬೆಳಕಿಗೆ ಬಂದಿದ್ದು, ದೇವಿಯ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೇವಸ್ಥಾನದ ಪೂಜಾರಿಯೇ ಕದ್ದು ಮಾರಾಟ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

ದೇವಸ್ಥಾನದ ಅರ್ಚಕರಲ್ಲಿ ಒಬ್ಬನಾದ ಆಕಾಶ್ ಎಂಬಾತ ದೇವಿಯ ಮೈಮೇಲಿದ್ದ ಹಾಗೂ ಭಕ್ತರು ನೀಡಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕದ್ದು, ಅವುಗಳನ್ನು ಕರಗಿಸಿ ಚಿನ್ನದ ಗಟ್ಟಿಯನ್ನಾಗಿ ಮಾಡಿ ಮಾರಾಟ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ದೇವಸ್ಥಾನದಲ್ಲಿದ್ದ ದೇವಿಯ ಒಡವೆಗಳು ನಾಪತ್ತೆಯಾಗಿರುವ ಸುದ್ದಿ ನಗರದಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ಆಕ್ರೋಶಗೊಂಡ ಸಾವಿರಾರು ಭಕ್ತರು ದೇವಸ್ಥಾನದ ಆವರಣದಲ್ಲಿ ಜಮಾಯಿಸಿದರು.

ದೇವಸ್ಥಾನ ಟ್ರಸ್ಟ್‌ನಿಂದ ತುರ್ತು ಸಭೆ:

ಸ್ಥಿತಿ ಗಂಭೀರಗೊಳ್ಳುತ್ತಿದ್ದಂತೆಯೇ ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ದೇವಸ್ಥಾನದ ಆವರಣದಲ್ಲೇ ತುರ್ತು ಸಭೆ ನಡೆಸಲಾಯಿತು. ಕಳ್ಳತನ ಎಸಗಿದ್ದ ಪೂಜಾರಿ ಆಕಾಶ್ ಹಾಗೂ ಆತನಿಂದ ಅಕ್ರಮವಾಗಿ ಚಿನ್ನಾಭರಣಗಳನ್ನು ಖರೀದಿಸಿದ್ದ ಸ್ಥಳೀಯ ವ್ಯಾಪಾರಿಯನ್ನು ಆಡಳಿತ ಮಂಡಳಿಯು ಸ್ಥಳಕ್ಕೆ ಕರೆಸಿ ತೀವ್ರ ತರಾಟೆಗೆ ತೆಗೆದುಕೊಂಡಿತು.

ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಖಡಕ್ ವಾರ್ನಿಂಗ್:

ಸಭೆಯಲ್ಲಿ ಮಾತನಾಡಿದ ಎಸ್.ಎಸ್. ಮಲ್ಲಿಕಾರ್ಜುನ್, "ದೇವಸ್ಥಾನಕ್ಕೆ ಭಕ್ತರು ಕಾಣಿಕೆಯಾಗಿ ನೀಡಿದ ಪ್ರತಿಯೊಂದು ಚಿನ್ನಾಭರಣದ ನಿಖರವಾದ ಲೆಕ್ಕ ನಮ್ಮಲ್ಲಿದೆ. ಎಷ್ಟು ಪ್ರಮಾಣದ ಚಿನ್ನಾಭರಣ ಇತ್ತು ಮತ್ತು ಅದರಲ್ಲಿ ಎಷ್ಟು ನಾಪತ್ತೆಯಾಗಿದೆ ಎಂಬ ಸಂಪೂರ್ಣ ವಿವರ ನಮ್ಮಲ್ಲಿದ್ದು, ಪ್ರತಿಯೊಂದು ಗ್ರಾಮ್ ಚಿನ್ನವೂ ವಾಪಸ್ ಬರಲೇಬೇಕು" ಎಂದು ಕಳವಿನ ಕೃತ್ಯ ಎಸಗಿದ ಪೂಜಾರಿ ಹಾಗೂ ಅದನ್ನು ಖರೀದಿಸಿದ ವ್ಯಾಪಾರಿಗೆ ನೇರವಾಗಿ ಎಚ್ಚರಿಕೆ ನೀಡಿದರು.

ಇಷ್ಟೆಲ್ಲಾ ಹೈಡ್ರಾಮಾ ನಡೆದರೂ, ಈ ಘಟನೆಗೆ ಸಂಬಂಧಿಸಿದಂತೆ ಈವರೆಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಅಧಿಕೃತ ಪ್ರಕರಣ (FIR) ದಾಖಲಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ದೇವಸ್ಥಾನದ ಆವರಣದಲ್ಲಿ ಬಿಗುವಿನ ವಾತಾವರಣ ನೆಲೆಸಿದ್ದು, ಭಕ್ತರು ಕಳುವಾದ ಆಭರಣಗಳ ಶೀಘ್ರ ಮರುಪಡೆಯುವಿಕೆಗೆ ಆಗ್ರಹಿಸುತ್ತಿದ್ದಾರೆ.