ದತ್ತಮಾಲೆ ಧರಿಸಿ ದತ್ತಪೀಠಕ್ಕೆ ಬರಲಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ: ಭಜರಂಗಿಗೆ ಸಾಥ್ ಕೊಡ್ತಾಳೆ ತೆನೆಹೊತ್ತ ಮಹಿಳೆ
ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಿದ್ದಂತೆ ಜೆಡಿಎಸ್ ದಳಪತಿ ಕುಮಾರಸ್ವಾಮಿ ಹಿಂದುತ್ವದ ಮೊರೆ ಹೋಗಿ ಹಿಂದೂ ಸಂಘಟನೆಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ದತ್ತಮಾಲೆ ಧರಿಸಿ ದತ್ತಪೀಠಕ್ಕೆ ಬರಲಿದ್ದಾರೆ.
ಚಿಕ್ಕಮಗಳೂರು (ನ.21): ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಿದ್ದಂತೆ ಜೆಡಿಎಸ್ ದಳಪತಿ ಕುಮಾರಸ್ವಾಮಿ ಸಾಫ್ಟ್ ಹಿಂದುತ್ವದ ಮೊರೆ ಹೋಗಿ ಹಿಂದೂ ಸಂಘಟನೆಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಕಳೆದ 4 ವರ್ಷದ ಹಿಂದೆ ಇದೇ ಕುಮಾರಣ್ಣ ಬೈದಿದ್ದ ಅದೇ ದತ್ತಪೀಠಕ್ಕೆ ಮಾಲೆ ಹಾಕ್ಕೊಂಡ್ ತಾನೇ ಬರೋದಾಗಿ ಹೇಳಿರೋದ್ರಿಂದ ದತ್ತಭಕ್ತರು ಫುಲ್ ಹ್ಯಾಪಿಯಾಗಿ ಸ್ವಾಗತ ಮಾಡುತ್ತಿದ್ದಾರೆ. ದತ್ತಾತ್ರೇಯ ಸ್ವಾಮಿ ನಿಮ್ಮ ರಾಜಕೀಯ ಜೀವನವನ್ನೇ ಬದಲಿಸ್ತಾರೆ ಬನ್ನಿ ಅಂತ ಸ್ವಾಗತ ಕೋರಿದ್ದಾರೆ... ಈ ಬಾರಿ ದತ್ತಪೀಠದಲ್ಲಿ ಭಜರಂಗಿ ಜೊತೆ ತೆನೆ ಹೊತ್ತ ಮಹಿಳೆ ಕೂಡ ಕಲರವ ಕೂಡ ಇರಲಿದೆ.
ಹೌದು... ದಶಕಗಳಿಂದ ಜಾತ್ಯಾತೀತ ನೆಲೆಗಟ್ಟಿನಲ್ಲಿ ತೆನೆ ಹೊತ್ತ ಮಹಿಳೆಯ ಬಾವುಟ ನೆಟ್ಟು ಪಕ್ಷ ಮುನ್ನಡೆಸಿಕೊಂಡು ಮತ ಕೇಳುತ್ತಿದ್ದ ಜೆ.ಡಿ.ಎಸ್. ನಿಲುವು ಬದಲಾಗುತ್ತಿದೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸಾಫ್ಟ್ ಹಿಂದುತ್ವದ ಮೊರೆ ಹೋಗಿದ್ದಾರೆ ಜೆಡಿಎಸ್ ದಳಪತಿ. ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಕರ್ನಾಟಕದ ಅಯೋಧ್ಯೆ ಎಂದೇ ಬಿಂಬಿತವಾಗಿರುವ ಕಾಫಿನಾಡ ದತ್ತಪೀಠದ ದತ್ತಜಯಂತಿ ಈ ಬಾರಿ ವಿಶೇಷ ರಂಗು ಪಡೆಯೋ ಮುನ್ಸೂಚನೆ ಕಾಣುತ್ತಿದೆ. ಕಾರಣ ಮಾಜಿ ಸಿಎಂ ಕುಮಾರಸ್ವಾಮಿ ನಿರ್ಧಾರ. ದೇವರ ಕೆಲಸ. ಧರ್ಮದ ಧರ್ಮಾಬೀಮಾನಕ್ಕೆ ನನಗೇನು ಭಯ. ಮಾಲೆ ಹಾಕೋ ಸಮಯ ಬಂದ್ರೆ ದತ್ತಮಾಲೆಯನ್ನೂ ಹಾಕ್ತೀನಿ ಅಂತ ಸ್ವತಃ ಕುಮಾರಸ್ವಾಮಿ ಅವರೇ ಹೇಳಿರೋದಕ್ಕೆ ಹಿಂದೂ ಕಾರ್ಯಕರ್ತರು ಸಂತಸಗೊಂಡಿದ್ದಾರೆ.
Chikkamagaluru: ದತ್ತಮಾಲಾ ಅಭಿಯಾನ: ಜಿಲ್ಲಾಡಳಿತದಿಂದ ಪ್ರವಾಸಿಗರಿಗೆ ನಿಷೇಧ
ಡಿಸೆಂಬರ್ 17 ರಿಂದ 26 ರವರೆಗೆ ನಡೆಯೋ ದತ್ತಮಾಲೆ ಅಭಿಯಾನದ ವೇಳೆ ಜೆಡಿಎಸ್ ದಳಪತಿ ಕೂಡ ತಮ್ಮ ಟೀಂ ಜೊತೆ ಮಾಲೆ ಧರಿಸಿ ದತ್ತ ಪೀಠಕ್ಕೆ ಬರಲಿದ್ದಾರೆ. ನಾನು ದತ್ತ ಮಾಲೆ ಹಾಕಿದ್ರೆ ತಪ್ಪೇನು..? ನಾನು ಧರ್ಮದ ರಕ್ಷಣೆಗೆ ಏನು ಬೇಕಾದ್ರೂ ಮಾಡ್ತೀನಿ ಅಂತೇಳಿದ್ದ ದಳಪತಿಯ ಮಾತು ಕಾರ್ಯರೂಪಕ್ಕೆ ಬರುವಂತೆ ಕಾಣುತ್ತಿದೆ. ದಳಪತಿ ನಿಲುವಿಗೆ ಹರ್ಷ ವ್ಯಕ್ತಪಡಿಸಿರೋ ಹಿಂದೂಪರ ಸಂಘಟನೆಗಳು ಈ ಬಾರಿಯ ದತ್ತ ಜಯಂತಿ ಉತ್ಸವಕ್ಕೆ ದಳಪತಿಗೆ ಆಹ್ವಾನ ನೀಡಲು ನಿರ್ಧರಿಸಿದ್ದಾರೆ.
ದತ್ತಮಾಲೆ ಧರಸಿ ದತ್ತಪೀಠಕ್ಕೆ ಬರ್ತಾರಾ ಮಾಜಿ ಸಿಎಂ: ದತ್ತಮಾಲೆ ಧಾರಣೆ ವೇಳೆ ಜೆಡಿಎಸ್ ನ ಎಲ್ಲಾ ಶಾಸಕರು ದತ್ತಪೀಠಕ್ಕೆ ಆಗಮಿಸುವ ಸಾಧ್ಯತೆಯೂ ಇದೆ. ಕುಮಾರಸ್ವಾಮಿಯವರ ನಿರ್ಧಾರಕ್ಕೆ ಸಂತಸಗೊಂಡಿರೋ ಜರಂಗದಳ ಜೆಡಿಎಸ್ ದಳಪತಿಯ ನಡೆ ಸ್ವಾಗತಾರ್ಹ. ಅವರು ಡಿಸೆಂಬರ್ 26ಕ್ಕೆ ಮಾಲೆ ಧರಿಸಿ ಬರಲಿ. ದತ್ತಪೀಠ ಸಾರ್ವಜನಿಕ ಮುಕ್ತವಾಗುವ ಕಾಲ ಬಂದಿದೆ. ಕುಮಾರಸ್ವಾಮಿ ಮಾಲೆ ಹಾಕೊಂಡ್ ಬಂದು ದತ್ತಪಾದುಕೆ ದರ್ಶನ ಪಡೆದು ಸಾರ್ವಜನಿಕರಿಗೆ ಒಂದು ಮಹತ್ವದ ಸಂದೇಶ ನೀಡಲಿ. ಅವರು ಮಾಲೆ ಹಾಕೊಂಡ್ ಬಂದು ದತ್ತಪಾದುಕೆ ದರ್ಶನ ಪಡೆದರೆ ಅವರ ಮುಂದಿನ ರಾಜಕೀಯ ಭವಿಷ್ಯ ಉಜ್ವಲವಾಗಿರಲಿದೆ ಎಂದು ಬಜರಂಗದಳ ಭವಿಷ್ಯ ನುಡಿದಿದೆ.
Chikkamagaluru : ದತ್ತಮಾಲೆ ಅಭಿಯಾನಕ್ಕೆ ಶ್ರೀರಾಮಸೇನೆ ಚಾಲನೆ
ಒಟ್ಟಾರೆ, ಮಾಜಿ ಸಿಎಂ ನಡೆ ಹಿಂದುತ್ವದ ಕಡೆ ಎಂಬಂತಾಗಿದ್ದು ಬಿಜೆಪಿ-ಜೆಡಿಎಸ್ ದೋಸ್ತಿ ಬೆನ್ನಲ್ಲೇ ಈ ನಿರ್ಧಾರ ಬಿಜೆಪಿ-ಜೆಡಿಎಸ್ ಜೊತೆ ರಾಜ್ಯದಲ್ಲಿ ಸಂಚಲನ ಮೂಡಿಸಿರುವುದಂತೂ ಸತ್ಯ. ಆದರೆ, ದಳಪತಿಗಳ ಈ ನಿರ್ಧಾರ ಪಕ್ಷಕ್ಕೆ ಯಾವ ರೀತಿ ವರ್ಕೌಟ್ ಆಗುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.