Chikkamagaluru : ದತ್ತಮಾಲೆ ಅಭಿಯಾನಕ್ಕೆ ಶ್ರೀರಾಮಸೇನೆ ಚಾಲನೆ
- ಶ್ರೀರಾಮ ಸೇನೆ: ದತ್ತಮಾಲಾ ಅಭಿಯಾನಕ್ಕೆ ಚಾಲನೆ
- 18ನೇ ವರ್ಷದ ದತ್ತಮಾಲಾ ಅಭಿಯಾನ
- ಗಂಗಾಧರ್ ಕುಲಕರ್ಣಿ ಅವರಿಗೆ ಮಾಲಾಧಾರಣೆ ಮೂಲಕ ಚಾಲನೆ ನೀಡಿದ ಚನ್ನಕೇಶವ
ಚಿಕ್ಕಮಗಳೂರು (ನ.8) : ಪ್ರತಿ ವರ್ಷದಂತೆ ಈ ಬಾರಿಯೂ ಶ್ರೀರಾಮ ಸೇನೆ ನ.7ರಿಂದ 13ರವರೆಗೆ ಆಯೋಜಿಸಿರುವ 18ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು.
Chikkamagaluru: ದತ್ತಮಾಲಾ ಅಭಿಯಾನ: ಜಿಲ್ಲಾಡಳಿತದಿಂದ ಪ್ರವಾಸಿಗರಿಗೆ ನಿಷೇಧ
ಚಿಕ್ಕಮಗಳೂರಿನ ಬಸವನಹಳ್ಳಿ ಶ್ರೀ ಶಂಕರ ಮಠದಲ್ಲಿ ಬೆಳಗ್ಗೆ ದತ್ತಾತ್ರೇಯರಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ದತ್ತನಾಮ ಸ್ಮರಣೆ, ಜಪತಪಗಳೊಂದಿಗೆ ಶ್ರೀರಾಮ ಸೇನೆ ಮುಖಂಡರು ಹಾಗೂ ಕಾರ್ಯಕರ್ತರು ಭಜನೆ ಮಾಡಿದರು. ಅರ್ಚಕರಾದ ರಾಮಕೃಷ್ಣ ಭಟ್, ಲೋಹಿತ್ ಭಟ್ ನೇತೃತ್ವದಲ್ಲಿ ಗಣಪತಿ ಪೂಜೆ, ಸಂಕಲ್ಪ, ಶಾರಾದಾಂಬೆಗೆ ನಮಿಸಿದ ಬಳಿಕ ಶ್ರೀ ಗುರು ದತ್ತಾತ್ರೇಯರ ಭಾವಚಿತ್ರಕ್ಕೆ ಪುಷ್ಪಾಂಲಕಾರದೊಂದಿಗೆ ವಿಶೇಷ ಪೂಜೆ, ಮಂಗಳಾರತಿ ನೆರವೇರಿಸಿದರು.
ಅನಂತರ ಮಠದ ಗೌರವ ಪ್ರತಿನಿಧಿ ಚನ್ನಕೇಶವ ಅವರು ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಅವರಿಗೆ ಮಾಲಾಧಾರಣೆ ಮಾಡಿ ಅಭಿಯಾನಕ್ಕೆ ಚಾಲನೆ ನೀಡಿದರು. ಚಿಕ್ಕಮಗಳೂರಲ್ಲಿ 60 ಮಂದಿ ಸೇರಿದಂತೆ ಜಿಲ್ಲೆಯಲ್ಲಿ 200, ರಾಜ್ಯದಲ್ಲಿ 2 ಸಾವಿರಕ್ಕೂ ಹೆಚ್ಚು ಭಕ್ತರು ಮಾಲಾಧಾರಣೆ ಮಾಡಿದ್ದು, ವಾರಗಳ ಕಾಲ ಜಪ, ತಪ, ಹೋಮ ಹವನ, ವಿವಿಧ ಧಾರ್ಮಿಕ ಕೈಂಕರ್ಯಗಳಲ್ಲಿ ಪಾಲ್ಗೊಂಡು ಶ್ರದ್ಧಾಭಕ್ತಿಯಿಂದ ಪೂಜೆ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ಮಾಲಾಧಾರಿಗಳು ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀರಾಮ ಸೇನಾ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿಮಾತನಾಡಿ, ಜಿಲ್ಲೆಯಲ್ಲಿ ಇಂದು 200ಕ್ಕೂ ಹೆಚ್ಚುಮಂದಿ ಮಾಲಾಧಾರಣೆ ಮಾಡಿದ್ದು, ನ.10 ರಂದು ನಗರದ ಶ್ರೀ ಶಂಕರಮಠದಲ್ಲಿ ದತ್ತ ದೀಪೋತ್ಸವ, 12 ರಂದು ಶ್ರೀರಾಮಸೇನೆ ರಾಷ್ಟಾ್ರಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಬಸವನಹಳ್ಳಿ ಮನೆಗಳಿಗೆ ತೆರಳಿ ಭಿಕ್ಷಾಟನೆ ಮೂಲಕ ಪಡಿ ಸಂಗ್ರಹ, 13 ರಂದು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಲಿರುವ ಭಕ್ತರ ಸಮ್ಮುಖದಲ್ಲಿ ನಗರದಲ್ಲಿ ಶೋಭಾಯಾತ್ರೆ ನಡೆಸಲಾಗುವುದು. ನಂತರ ವಾಹನದಲ್ಲಿ ದತ್ತಪೀಠಕ್ಕೆ ತೆರಳಿ ಗುಹಾಂತರ ದೇವಾಲಯದಲ್ಲಿರುವ ದತ್ತ ಪಾದುಕೆ ದರ್ಶನ ಮಾಡಲಾಗುವುದು. ಮನೆಗಳಲ್ಲಿ ಸಂಗ್ರಹಿಸಿದ್ದ ಪಡಿಯನ್ನು ಪೀಠದಲ್ಲಿ ಸಮರ್ಪಣೆ ಮತ್ತು ಮಾಲೆಗಳ ವಿಸರ್ಜನೆ ಮಾಡಿ ಹಿಂತಿರುಗಲಾಗುವುದು ಎಂದು ಹೇಳಿದರು.
ಮಾಲಾಧಾರಣೆ ಸಂದರ್ಭದಲ್ಲಿ ಶ್ರೀ ರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ರಾಜ್ಯ ಕಾರ್ಯದರ್ಶಿ ಆನಂದಶೆಟ್ಟಿಅಡ್ಯಾರ್, ಸಮಸ್ಥ ವಿಶ್ವಧರ್ಮ ಟ್ರಸ್ಟ್‌ನ ಯೋಗೀಶ್ ಸಂಜಿತ್ ಸುವರ್ಣ, ವಂದೇ ಮಾತರಂ ಟ್ರಸ್ಟ್ ಜಿಲ್ಲಾಧ್ಯಕ್ಷ ಪ್ರೀತೇಶ್, ಶ್ರೀ ಮಠದ ವ್ಯವಸ್ಥಾಪಕ ಯೋಗೀಶ್ ಶರ್ಮಾ, ದುರ್ಗಾಸೇನೆ ಅಧ್ಯಕ್ಷೆ ನವೀನಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿ, ತಾಲೂಕು ಅಧ್ಯಕ್ಷ ಜ್ಞಾನೇಂದ್ರ ಇದ್ದರು.
ನ.13 ರೊಳಗೆ ಹಿಂದೂ ಅರ್ಚಕರ ನೇಮಕ ಮಾಡಿ: ಗಂಗಾಧರ್ ಕುಲಕರ್ಣಿ
ಗುರು ದತ್ತರ ಶಾಪದಿಂದ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು
ಚಿಕ್ಕಮಗಳೂರು: ದತ್ತಮಾಲಾ ಅಭಿಯಾನದ ಕೊನೆಯ ದಿನದೊಳಗೆ (ನ.13) ದತ್ತಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು. ಇಲ್ಲದೆ ಹೋದರೆ ಅಂದು ದತ್ತಪೀಠದಲ್ಲಿ ದತ್ತಭಕ್ತರಿಂದ ಎದುರಾಗಬಹುದಾದ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ನೇರ ಹೊಣೆಯಾಗಬೇಕಾಗುತ್ತದೆ ಎಂದು ಶ್ರೀ ರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಎಚ್ಚರಿಸಿದರು.
ಸೋಮವಾರ ದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದತ್ತಪೀಠ ಹಿಂದೂಗಳಿಗೆ ಒಪ್ಪಿಸಬೇಕೆಂದು ಕಾನೂನಾತ್ಮಕ ಹಾಗೂ ಸಾಮಾಜಿಕ ಹೋರಾಟದ ಮೂಲಕ ನಿರಂತರವಾಗಿ ಸಂಘರ್ಷ ಮಾಡುತ್ತಿದೆ. ಸಾಕಷ್ಟುಹಂತದಲ್ಲಿ ಗೆಲುವು ಸಿಕ್ಕಿದ್ದು, ಅಂತಿಮ ಗೆಲವು ಸಿಗಬೇಕಾಗಿದೆ ಎಂದರು.
ಪ್ರತಿವರ್ಷ ಬಂದು ಗೋರಿಗಳನ್ನು ನೋಡೋದು ವಾಪಸ್ಸು ಹೋಗುವಂತಾಗಿ ಬೇಸರವಾಗಿದ್ದು, ಇದಕ್ಕೆ ಅಂತ್ಯ ಹಾಡಬೇಕೆಂದು ರಾಜದ ಉದ್ದಗಲಕ್ಕೂ ಭಕ್ತರ ಒತ್ತಾಯವಾಗಿದ್ದು, ಯಾವುದೇ ಆಕ್ರೋಶಕ್ಕೆ ಆಸ್ಪದವಿಲ್ಲದಂತೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸಿದರೆ ಬಿಜೆಪಿಗರನ್ನು ಹಿಂದೂ ಸಮಾಜವಾಗಲಿ, ಶ್ರೀ ಗುರುತ್ತಾತ್ರೇಯರಾಗಲಿ ಕ್ಷಮಿಸಲು ಸಾಧ್ಯವಿಲ್ಲ ಎಂದರು.
ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸದಿದ್ದರೆ ನಿಮ್ಮ ಪೀಠವನ್ನು ಕಳೆದುಕೊಳ್ಳುತ್ತೀರಿ ಎಂದು ಕಳೆದ ಬಾರಿ ಅಭಿಯಾನದ ಸಂದರ್ಭದಲ್ಲಿ ಯಡಿಯೂರಪ್ಪಗೆ ಸ್ಪಷ್ಟವಾಗಿ ಹೇಳಿದ್ದೆವು. ಗುರುಗಳ ಶಾಪದಿಂದ ಅವರು ಅಧಿಕಾರ ಕಳೆದುಕೊಂಡರು. ಮುಂದಿನ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕೆಂದು ಮುಖ್ಯಮಂತ್ರಿ ಬೊಮ್ಮಾಯಿಗೆ ಆಸೆ ಇದ್ದರೆ ಕೂಡಲೆ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಿ. ಇಲ್ಲದಿದ್ದರೆ ಯಡಿಯೂರಪ್ಪನ ಸ್ಥಿತಿಯಂತೆ ನಿಮಗೂ ಆಗುತ್ತದೆ ಎಂದು ಹೇಳಿದರು.
ಬಿಜೆಪಿ ಸಾಕಷ್ಟುವರ್ಷದಿಂದ ಹೋರಾಟದಲ್ಲಿ ಭಾಗವಹಿಸಿದೆ. ಕೋರ್ಚ್‌ಗಳಲ್ಲೂ ಸಹ ನಮ್ಮ ಪರವಾಗಿ ತೀರ್ಪು ಬಂದು ಹಲವು ನಿರ್ದೇಶನಗಳನ್ನು ನೀಡಿದರೂ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಗಟ್ಟಿಮನಸ್ಸು ಮಾಡಿ ನಿರ್ಧಾರ ಕೈಗೊಳ್ಳದಿರುವುದನ್ನು ನೋಡಿ ಬೇಸರವಾಗುತ್ತಿದೆ. ಧರ್ಮದ ವಿಚಾರದಲ್ಲಿ ಈ ರೀತಿ ಡ್ರಾಮಾ ಮಾಡುವ ಅವಶ್ಯಕತೆ ಇಲ್ಲ. ತಕ್ಷಣದಲ್ಲಿ ಗಟ್ಟಿನಿರ್ಧಾರ ಮಾಡಿ ದತ್ತ ಪೀಠಕ್ಕೆ ಹಿಂದೂ ಅರ್ಚಕ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ದತ್ತಪೀಠ ವಿವಾದ: ಬಿಜೆಪಿ ಸರ್ಕಾರದ ಮೇಲೆ ಹೇಸಿಗೆ ಬರುತ್ತಿದೆ: ಶ್ರೀರಾಮಸೇನೆ
ಅಂತಿಮ ಗೆಲುವಿಗಾಗಿ ಹೋರಾಟ ಮುಂದುವರೆದಿದೆ. ಹಿಂದುತ್ವದ ವಿಚಾರವನ್ನು ಇನ್ನಷ್ಟುವಿಸ್ತರಿಸಬೇಕೆಂಬ ದೃಷ್ಟಿಯಿಂದ ಉತ್ತರ ಕರ್ನಾಟಕದಲ್ಲಿ ಹನುಮಮಾಲಾ ಅಭಿಯಾನಕ್ಕೂ ಶ್ರೀರಾಮ ಸೇನೆ ಚಾಲನೆ ನೀಡಿದೆ ಎಂದು ಹೇಳಿದರು.