Chikkamagaluru: ದತ್ತಮಾಲಾ ಅಭಿಯಾನ: ಜಿಲ್ಲಾಡಳಿತದಿಂದ ಪ್ರವಾಸಿಗರಿಗೆ ನಿಷೇಧ
ಕಾಫಿನಾಡಿನ ಧಾರ್ಮಿಕ ಕ್ಷೇತ್ರವಾಗಿರುವ ಗುರುದತ್ತಾತ್ರೇಯ ಪೀಠದಲ್ಲಿ ಶ್ರೀ ರಾಮ ಸೇನೆ ವತಿಯಿಂದ ಈ ಬಾರಿ ದತ್ತಮಾಲೆ ಅಭಿಯಾನ ನಡೆಯುತ್ತಿರುವ ಹಿನ್ನೆಲೆ ಒಂದು ದಿನದ ಮಟ್ಟಿಗೆ ಜಿಲ್ಲಾಡಳಿತ ಪ್ರವಾಸಿಗರಿಗೆ ನಿಷೇಧ ಹೇರಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ನ.06): ಕಾಫಿನಾಡಿನ ಧಾರ್ಮಿಕ ಕ್ಷೇತ್ರವಾಗಿರುವ ಗುರುದತ್ತಾತ್ರೇಯ ಪೀಠದಲ್ಲಿ ಶ್ರೀ ರಾಮ ಸೇನೆ ವತಿಯಿಂದ ಈ ಬಾರಿ ದತ್ತಮಾಲೆ ಅಭಿಯಾನ ನಡೆಯುತ್ತಿರುವ ಹಿನ್ನೆಲೆ ಒಂದು ದಿನದ ಮಟ್ಟಿಗೆ ಜಿಲ್ಲಾಡಳಿತ ಪ್ರವಾಸಿಗರಿಗೆ ನಿಷೇಧ ಹೇರಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಾಳೆ ಶ್ರೀರಾಮ ಸೇನೆ ಕಾರ್ಯಕರ್ತರು ದತ್ತಮಾಲೆ ಧಾರಣೆ ಮಾಡಿಕೊಂಡು ನವೆಂಬರ್ 13ರಂದು ಶ್ರೀ ಗುರು ದತ್ತಾತ್ರೇಯ ಪೀಠಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಗಿರಿಗೆ ಪ್ರವಾಸಿಗರ ಭೇಟಿಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಆದೇಶ ಹೊರಡಿಸಿದ್ದಾರೆ.
ನವೆಂಬರ್ 13ರಂದು ಪ್ರವಾಸಿಗರಿಗೆ ನಿಷೇಧ: ನವೆಂಬರ್ 13ರ ಬೆಳಗ್ಗೆ 6ರಿಂದ ನ.14 ರ ಬೆಳಗ್ಗೆ 10 ಗಂಟೆವರೆಗೆ ಪ್ರವಾಸಿಗರ ಪ್ರವೇಶ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ದತ್ತಪೀಠ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ನಿರ್ಬಂಧ ಹೇರಲಾಗಿದೆ. ಆದ್ದರಿಂದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗರಿ, ದತ್ತಪೀಠಕ್ಕೆ ಬರಲು ಪ್ಲ್ಯಾನ್ ಹಾಕಿಕೊಂಡವರು ಈ ಎರಡು ದಿನ ಭೇಟಿ ನೀಡದಿರುವುದು ಸೂಕ್ತವಾಗಿದೆ.
Chikkamagaluru: ಶ್ರೀರಾಮಸೇನೆ ವತಿಯಿಂದ ನಡೆಯುವ ದತ್ತಮಾಲಾ ಅಭಿಯಾನಕ್ಕೆ ಜಿಲ್ಲಾಧಿಕಾರಿ ಅಧಿಸೂಚನೆ
ಸರ್ಕಾರಕ್ಕೆ ಶ್ರೀ ರಾಮ ಸೇನಾ ಎಚ್ಚರಿಕೆ: ನವೆಂಬರ್ 13ರೊಳಗೆ ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕವಾಗಬೇಕು, ಇಲ್ಲವಾದಲ್ಲಿ ತೀವ್ರ ಪ್ರತಿಭಟನೆ ನಡೆಯಲಿದೆ ಎಂದು ಶ್ರೀರಾಮ ಸೇನೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ನವೆಂಬರ್ 13ರಂದು ದತ್ತಪೀಠ ಅಭಿಯಾನಕ್ಕೆ ದಿನಾಂಕ ನಿಗದಿ ಮಾಡಿರುವ ಶ್ರೀರಾಮ ಸೇನೆ, ಆ ದಿನದ ಒಳಗಾಗಿ ದತ್ತಪೀಠಕ್ಕೆ ಅರ್ಚಕರ ನೇಮಕವಾಗಬೇಕು, ಇಲ್ಲವಾದಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯಾದ ಸಂದರ್ಭದಲ್ಲಿ ಉಂಟಾದ ಆಕ್ರೋಶ, ಕಾರ್ಯಕರ್ತರ ಕೂಗು ದತ್ತಪೀಠದಲ್ಲಿ ಮೊಳಗಲಿದೆ ಎಂದು ಶ್ರೀರಾಮ ಸೇನೆ ರಾಜ್ಯ ಸಂಚಾಲಕ ಗಂಗಾಧರ್ ಕುಲಕರ್ಣಿ ಎಚ್ಚರಿಕೆ ರವಾನಿಸಿದ್ದಾರೆ.
ಮಾರಕಾಸ್ತ್ರ, ಶಸಾಸ್ತ್ರ ಆಯುಧ ನಿಷೇಧ: ಕಾರ್ಯಕ್ರಮದ ಅವಧಿಯಲ್ಲಿ ಯಾವುದೇ ಮಾರಕಾಸ್ತ್ರ, ಶಸಾಸ್ತ್ರ, ಆಯುಧಗಳನ್ನು ಹಾಗೂ ದೈಹಿಕವಾಗಿ ಹಿಂಸೆಯನ್ನುಂಟು ಮಾಡುವ ಯಾವುದೇ ಸಲಕರಣೆಗಳನ್ನು ಹಿಡಿದು ಓಡಾಡುವುದು ಹಾಗೂ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಯಾವುದೇ ರೀತಿಯ ಸ್ಫೋಟಕ, ಸಿಡಿಮದ್ದುಗಳ ಸಾಗಾಣಿಕೆ-ದಾಸ್ತಾನು ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಯಾವುದೇ ಖಾಸಗಿ, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾನಿಗೊಳಿಸುವ ಮತ್ತು ವಿರೂಪಗೊಳಿಸುವ, ಯಾವುದೇ ರೀತಿಯ ಬಂದ್, ಮುಷ್ಕರ, ಪ್ರತಿಕೃತಿದಹನ, ಪ್ರದರ್ಶನ ಹಾಗೂ ಪೂರಕ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಯಾವುದೇ ವ್ಯಕ್ತಿ, ಧರ್ಮ, ಕೋಮು, ಜಾತಿ, ಪಂಥ, ಸರ್ಕಾರಿ ಸಂಸ್ಥೆಗಳು, ಸಂಘಟನೆಗಳು, ಸ್ಥಳಗಳು, ಹಾಗೂ ಕಾರ್ಯನಿರತ, ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಅಥವಾ ನಿಂದಿಸುವ ಅವಾಚ್ಯ ಶಬ್ದಗಳ ಬಳಕೆ, ಆವೇಶಕಾರಿ, ಪ್ರಚೋದನಾಕಾರಿ ಭಾಷಣ, ಹಾಡು, ಗಾಯನ, ಪ್ರದರ್ಶನ, ಪ್ರಕಟಣೆಗಳ ಬಳಕೆ, ಭಿತ್ತಿಪತ್ರ, ಧ್ವಜ, ಬ್ಯಾನರ್ ಇತ್ಯಾದಿ ರೂಪಗಳಲ್ಲಿ ಪ್ರಚುರಪಡಿಸುವ, ಕೂಗುವ ಅಥವಾ ಬಿತ್ತರಗೊಳಿಸುವ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಎಂದಿದ್ದಾರೆ.
ಬ್ಯಾನರ್ ಬಂಟಿಂಗ್ಸ್‌ಗೂ ನಿಷೇಧ?: ಸರ್ಕಾರಿ, ಅರೆ ಸರ್ಕಾರಿ ಸ್ವಾಮ್ಯದ ಕಟ್ಟಡಗಳು ಮತ್ತು ಆಸ್ತಿಗಳ ಮೇಲೆ ಹಾಗೂ ಅನುಮತಿ ಇಲ್ಲದೇ ಧಾರ್ಮಿಕ ಸ್ಥಳಗಳ ಮೇಲೆ ಯಾವುದೇ ಬ್ಯಾನರ್, ಬಂಟಿಂಗ್ಸ್, ಭಿತ್ತಿಪತ್ರ, ಬರಹಗಳು ಹಾಗೂ ಆಕೃತಿಗಳನ್ನು ಅಳವಡಿಸುವುದನ್ನು ನಿಷೇಧಿಸಲಾಗಿದೆ. ಇತರೆ ಸಾರ್ವಜನಿಕರಿಗೆ, ಜನಸಾಮಾನ್ಯರಿಗೆ ಅವರ ದೈನಂದಿನ ಚಟುವಟಿಕೆ ಹಾಗೂ ವ್ಯವಹಾರಗಳಿಗೆ, ಸಂಚಾರ ಮತ್ತು ಸಂಪರ್ಕಗಳಿಗೆ ಧಕ್ಕೆಯಾಗದಂತೆ ಕ್ರಮವಹಿಸುವುದು ಆಯಾ ಸಂಘಟಕರ ಜವಾಬ್ದಾರಿಯಾಗಿರುತ್ತದೆ.
Chikkamagaluru: ಕಾಡಾನೆ ಸೆರೆ ಕಾರ್ಯಾಚರಣೆಗೆ ಬಂದ ಆನೆ ಅಭಿಮನ್ಯುವಿಗೆ ಅನಾರೋಗ್ಯ
ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿದರ್ಗಾ, ಐ.ಡಿ ಪೀಠ ಹಾಗೂ ಸಂಚಾರ ಮಾರ್ಗಗಳಲ್ಲಿ ಪಾಲಿಸಬೇಕಾದ ನಿಬಂಧನೆಗಳು. ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂಘಟನಾಕಾರರು, ದತ್ತಮಾಲಾ ಧಾರಿಗಳು, ಭಕ್ತಾದಿಗಳು ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಯಾವುದೇ ಮಾರ್ಗದಿಂದ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾನಿ ದರ್ಗಾ, ಐ.ಡಿ ಪೀಠಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ಮಾರ್ಗಗಳಲ್ಲಿ ಯಾವುದೇ ಘೋಷಣೆ, ಅವಾಚ್ಯ ಶಬ್ದಗಳ ಬಳಕೆ, ನಿಂದನೆ, ವೇದಿಕೆ ನಿರ್ಮಾಣ, ಭಾಷಣ, ಸ್ಫೋಟಕ ಬಳಕೆ, ಮದ್ಯಪಾನ, ಬ್ಯಾನರ್ ಭಿತ್ತಿಪತ್ರಗಳ ಪ್ರದರ್ಶನ, ಪ್ರತಿಕೃತಿ ದಹನ, ಸಾರ್ವಜನಿಕ ಆಸ್ತಿಪಾಸ್ತಿಗಳ ಹಾನಿ, ವಿರೂಪಗೊಳಿಸುವ ಮತ್ತು ನಿಂದನಾರ್ಹ ಚಟುವಟಿಕೆಗಳನ್ನು ಮತ್ತು ಸಂಚಾರ ಹಾಗೂ ಸಂಪರ್ಕಕ್ಕೆ ಯಾವುದೇ ಅಡೆತಡೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.